ADVERTISEMENT

ದೇವನಹಳ್ಳಿ| ಧನುರ್ಮಾಸ ಹೊಡೆತಕ್ಕೆ ಹೂ ಬೆಳೆಗಾರರು ಕಂಗಾಲು: ಕುಸಿದ ಹೂವಿನ ಬೇಡಿಕೆ

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 9 ಜನವರಿ 2026, 5:29 IST
Last Updated 9 ಜನವರಿ 2026, 5:29 IST
ವಿಜಯಪುರ ಸಮೀಪದ ಸೇವಂತಿ ತೋಟ
ವಿಜಯಪುರ ಸಮೀಪದ ಸೇವಂತಿ ತೋಟ   

ವಿಜಯಪುರ (ದೇವನಹಳ್ಳಿ): ಧನುರ್ಮಾಸ ಆರಂಭದ ನಂತರ ಮದುವೆ, ಗೃಹಪ್ರವೇಶ, ನಾಮಕಾರಣ, ಶುಭ ಸಮಾರಂಭ, ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಉತ್ಸವಗಳು ನಡೆಯದ ಕಾರಣ ಮಾರುಕಟ್ಟೆಯಲ್ಲಿ ಹೂವಿಗೆ ಬೇಡಿಕೆ ಇಲ್ಲದೆ ದರ ಕುಸಿದಿದ್ದು, ಹೂ ಬೆಳೆಗಾರರು ಕಂಗಾಲಾಗಿದ್ದಾರೆ.

ಜಿಲ್ಲೆಯು ಪುಷ್ಪೋದ್ಯಮಕ್ಕೂ ಹೆಸರುವಾಸಿ. ಕನಿಷ್ಠ ಐದಾರೂ ಗುಂಟೆ ಜಮೀನಿನಿಂದ ಎಕರೆಗಟ್ಟಲೇ ಲೆಕ್ಕದಲ್ಲಿ ರೈತರು ಪುಷ್ಪ ಕೃಷಿ ಮಾಡುತ್ತಾರೆ.  ಗುಲಾಬಿ, ಸೇವಂತಿ, ಚೆಂಡು ಹೂ ಸೇರಿ ಪಾಲಿ ಹೌಸ್‍ಗಳಲ್ಲಿ ನಾನಾ ತಳಿಯ ಅಲಂಕಾರಿಕ ಹೂಗಳನ್ನು ಹೆಚ್ಚು ಬೆಳೆಯಲಾಗುತ್ತಿದೆ. ಸದ್ಯ ಹೂವಿನ ಬೆಲೆ ಕುಸಿತಕ್ಕೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಪ್ಪತ್ತು ದಿನಗಳ ಹಿಂದೆ ಹೂವಿನ ಮಾರುಕಟ್ಟೆಯಲ್ಲಿ ಸರಾಸರಿ ₹100ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದ ರೈತರು ಧನುರ್ಮಾಸ ಆರಂಭದ ಬಳಿಕ ಒಂದು ಕೆ.ಜಿ ಹೂವು ಹತ್ತು, ಇಪ್ಪತ್ತು ರೂಪಾಯಿಗೆ ಇಳಿದಿದೆ. ಕೇಳಿದಷ್ಟೇ ಬೆಲೆಗೆ ಮಾರಾಟ ಮಾಡಿದ್ದಾರೆ. ಹಾಕಿದ ಬಂಡವಾಳ ಬಾರದೇ ರೈತರು ಹತಾಶೆರಾಗಿದ್ದಾರೆ.

ADVERTISEMENT

ಒಂದು ಎಕರೆಗೆ 15 ಸಾವಿರ ಸೇವಂತಿ ನಾರು ಹಾಕಿರುವೆ. ಇದಕ್ಕೆ ₹2.50 ಲಕ್ಷ ಖರ್ಚಾಗಿದೆ. ಕಳೆದ 20 ದಿನಗಳಿಂದ ಕೊಯ್ಲು ಮಾಡುತ್ತಿರುವೆ. ಆರಂಭದ ದಿನಗಳಲ್ಲಿ ಒಂದೆರಡು ಬಾರಿ ₹100 ನಂತೆ ಹೂವು ಮಾರಾಟವಾಯಿತು. ಬಳಿಕ ಬೆಲೆ ಕುಸಿಯುತ್ತಲೇ ಇದೆ ಎಂದು ವಿಜಯಪುರ ಹೂವಿನ ಬೆಳೆಗಾರ ಕಾರ್ತಿಕ್ ಅಳಲು ತೋಡಿಕೊಂಡರು.‌

ಒಂದು ದಿನಕ್ಕೆ ಹೂ ಬಿಡಿಸಲು ಎಂಟು ಮಹಿಳಾ ಕಾರ್ಮಿಕರು ಬರುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೆ ಹೂ ಕೀಳುತ್ತಾರೆ. ತೋಟದಲ್ಲಿ ದಿನಕ್ಕೆ 200 ರಿಂದ 300 ಕೆ.ಜಿ ಹೂವು ದೊರೆಯುತ್ತಿದೆ. ಹೊಸ ವರ್ಷದ ದಿನ, ವೈಕುಂಠ ಏಕಾದಶಿ ಹಬ್ಬಕ್ಕೆ ಹೂವಿಗೆ ಅಲ್ಪ ಸ್ವಲ್ಪ ಬೆಲೆ ಇತ್ತು. ಈಗ 1 ಕೆ.ಜಿ ಸೇವಂತಿ ₹30–₹40ಗೆ ಕುಸಿದಿದೆ. ಈ ಬೆಲೆಗೆ ಹೂ ಮಾರಾಟ ಮಾಡಿದರೆ ಹಾಕಿದ ಬಂಡವಾಳ ಬರುವುದಿಲ್ಲ ಎಂದು ತಿಳಿಸಿದರು.

ಪ್ರಸ್ತುತ ಜಿಲ್ಲೆಯಲ್ಲಿ ಹೂವಿನ ಉತ್ಪಾದನೆ ಹೆಚ್ಚಳವಾಗಿದೆ. ಧನುರ್ಮಾಸದ ಆರಂಭದ ನಂತರ ಮದುವೆ ಇನ್ನಿತರೆ ಶುಭ ಕಾರ್ಯಗಳು ಹೆಚ್ಚು ನಡೆಯುವುದಿಲ್ಲ. ಹೊರ ರಾಜ್ಯಗಳಿಗೂ ಹೆಚ್ಚು ಹೂ ರವಾನೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೂವಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದೆ ಬೆಲೆ ಕುಸಿದಿದೆ ಎಂದು ವಿಜಯಪುರ ಟೌನ್ ಹೂವಿನ ವ್ಯಾಪಾರಿ ಸಂತೋಷ್ ಹೇಳುತ್ತಾರೆ.

ಹೂವು ಬೆಳೆಯಲು ಭೂಮಿ ಹದ ಔಷಧಿ ಗೊಬ್ಬರ ಕೂಲಿ ಕಾರ್ಮಿಕರು ಸಾಗಾಟದ ವೆಚ್ಚ ಸೇರಿದಂತೆ ಇನ್ನಿತರೆಗೆ ಪ್ರತಿ ಎಕರೆಗೆ ಲಕ್ಷಾಂತರ ರೂ ಖರ್ಚಾಗುತ್ತದೆ. ಮಾರುಕಟ್ಟೆಯಲ್ಲಿ ಈಗ ಹೂವಿನ ಬೆಲೆ ಕುಸಿದಿದ್ದು ಪುಷ್ಪ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಾರ್ತಿಕ್ ಹೂ ಬೆಳೆಗಾರ

ಸಂಕ್ರಾಂತಿ ಬಳಿಕ ಬೆಲೆ ಹೆಚ್ಚಳ ನಿರೀಕ್ಷೆ

ಧನುರ್ಮಾಸ ಆರಂಭದ ದಿನದಿಂದ ವಿವಿಧ ಹೂಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿಲ್ಲ. ಶುಭಕಾರ್ಯಗಳು ಹೆಚ್ಚು ನಡೆಯದಿರುವುದು ಇದಕ್ಕೆ ಪ್ರಮುಖ ಕಾರಣ. ಸದ್ಯ ಸಂಕ್ರಾಂತಿ ಹಬ್ಬದವರೆಗೂ ಬೆಲೆ ಕುಸಿತ ಹೀಗೆ ಮುಂದುವರೆಯಲಿದೆ. ಹಬ್ಬದ ಬಳಿಕ ಶುಭಕಾರ್ಯಗಳು ಆರಂಭವಾಗುವುದರಿಂದ ಹೂಗಳಿಗೆ ಉತ್ತಮ ಬೆಲೆ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ಮಂಜುನಾಥ್.