ದೊಡ್ಡಬಳ್ಳಾಪುರ: ಆಧುನಿಕ ತಂತ್ರಜ್ಞಾನ ಮತ್ತು ನವ ಮಾಧ್ಯಮಗಳ ಅಬ್ಬರದಿಂದ ನಮ್ಮ ನೈಜ ಕಲೆಗಳು ಮರೆಯಾಗುತ್ತಿವೆ. ಕಲಾವಿದರಿಗೆ ಉತ್ತೇಜನ ನೀಡುವ ವೇದಿಕೆಗಳ ಅಗತ್ಯವಿದೆ. ಈ ದಿಸೆಯಲ್ಲಿ ಸರ್ಕಾರ ಹಾಗೂ ಸಮುದಾಯ ಕೈ ಜೋಡಿಸಬೇಕು ಎಂದು ನಗರಸಭೆ ಸದಸ್ಯ ಟಿ.ಎನ್.ಪ್ರಭುದೇವ್ ಹೇಳಿದರು.
ನಗರದ ಕಲಾಭವನದಲ್ಲಿ ತಾಲ್ಲೂಕು ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಸಾಂಸ್ಕೃತಿಕ ಕಲಾ ಜ್ಯೋತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ದೊಡ್ಡಬಳ್ಳಾಪುರದಲ್ಲಿ ಅಂಸಖ್ಯಾತ ಕಲಾವಿದರಿದ್ದು, ದಶಕಗಳಿಂದಲೂ ಇಲ್ಲಿ ಸಾವಿರಾರು ಕಲಾವಿದರು ಒಡನಾಟ ಇರಿಸಿಕೊಂಡಿದ್ದಾರೆ. ನಾಟಕರತ್ನ ಗುಬ್ಬಿ ವೀರಣ್ಣ, ಮಾಸ್ಟರ್ ಹಿರಣಯ್ಯ ನಾಟಕ ಮಂಡಲಿಗಳು ಇಲ್ಲಿ ನೂರಾರು ಪ್ರಸಂಗಗಳನ್ನು ಪ್ರದರ್ಶಿಸಿವೆ. ಜಾನಪದ ತಜ್ಞ ಎಚ್.ಎಲ್.ನಾಗೇಗೌಡ ನಮ್ಮ ತಾಲ್ಲೂಕಿನ ಜನಪದ ಗಾಯನವನ್ನು ಸುಮಾರು 500 ಗಂಟೆಗಳ ಕಾಲ ಆಲಿಸುವಂತೆ ಧ್ವನಿ ಮುದ್ರಣ ಮಾಡಿದ್ದಾರೆ’ ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ರಂಗಕಲೆ ಹಾಗೂ ಜನಪದ ಕಲಾ ಪ್ರಕಾರಗಳಲ್ಲಿ ಯುವ ಪೀಳಿಗೆ ಭಾಗವಹಿಸುತ್ತಿರುವುದು ಕಡಿಮೆಯಾಗುತ್ತಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.
ರಂಗ ಕಲಾವಿದರಾದ ಚಿಕ್ಕಹೆಜ್ಜಾಜಿ ಜಿ.ಕೃಷ್ಣಪ್ಪ, ಎಂ.ಬಾಲಕೃಷ್ಣ, ಎನ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ, ಅನಿಕೇತನ ಟ್ರಸ್ಟ್ ಅಧ್ಯಕ್ಷ ಡಿ.ಶ್ರೀಕಾಂತ, ತಾಲ್ಲೂಕು ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್, ಉಪಾಧ್ಯಕ್ಷ ಎಚ್.ಪ್ರಕಾಶ್‌ರಾವ್, ನರಸಿಂಹಯ್ಯ, ಖಜಾಂಚಿ ಎಚ್.ಮುನಿಪಾಪಯ್ಯ, ಸಹ ಕಾರ್ಯದರ್ಶಿ ಎ.ಮಂಜುನಾಥ್, ಸಲಹಾ ಸಮಿತಿ ಎಂ.ವೆಂಕಟರಾಜು, ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣಪ್ಪ ಯಕ್ಷಗಾನ ಕಲಾವಿದ ಕೆ.ಸಿ.ನಾರಾಯಣ್, ಆನಂದಮೂರ್ತಿ,ರಮೇಶ್, ಮಹದೇವ್ ಇದ್ದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಕಲಾವಿದರಿಂದ ರಂಗಗೀತೆ, ಜನಪದ ಗೀತೆ, ಭಜನೆ, ಭಕ್ತಿಗೀತೆಗಳ ಗಾಯನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.