ADVERTISEMENT

ಭೂಸ್ವಾಧೀನ ಕೈಬಿಡಲು ಒತ್ತಾಯ

ಕೃಷಿಯೋಗ್ಯವಲ್ಲದ ಭೂಮಿ ಮಾತ್ರ ವಶ: ಸಚಿವ ಶೆಟ್ಟರ್ ಭರವಸೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 3:13 IST
Last Updated 8 ನವೆಂಬರ್ 2020, 3:13 IST
ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ವಿರೋಧಿಸಿ ಶಾಸಕ ನಿಸರ್ಗ ನಾರಾಯಣಸ್ವಾಮಿ ನೇತೃತ್ವದ ರೈತರ ನಿಯೋಗ ಸಚಿವ ಜಗದೀಶ ಶೆಟ್ಟರ್‌ ಅವರಿಗೆ ಮನವಿ ಸಲ್ಲಿಸಿತು. ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಇದ್ದರು
ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ವಿರೋಧಿಸಿ ಶಾಸಕ ನಿಸರ್ಗ ನಾರಾಯಣಸ್ವಾಮಿ ನೇತೃತ್ವದ ರೈತರ ನಿಯೋಗ ಸಚಿವ ಜಗದೀಶ ಶೆಟ್ಟರ್‌ ಅವರಿಗೆ ಮನವಿ ಸಲ್ಲಿಸಿತು. ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಇದ್ದರು   

ವಿಜಯಪುರ: ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗಾಗಿ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ರೈತರ ನಿಯೋಗ ಸರ್ಕಾರಕ್ಕೆ ಮನವಿ ಮಾಡಿದೆ.

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರನ್ನು ಶನಿವಾರ ಭೇಟಿ ಮಾಡಿದ ಶಾಸಕ ನಿಸರ್ಗ ನಾರಾಯಣ ಸ್ವಾಮಿ ನೇತೃತ್ವದ ರೈತರ ನಿಯೋಗವು ಭೂ ಸ್ವಾಧೀನ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿತು.

ಕೈಗಾರಿಕೆಗಳಿಗಾಗಿ ಸರ್ಕಾರ ನೂರಾರು ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರೆ ರೈತರು ಎಲ್ಲಿಗೆ ಹೋಗಬೇಕು. ಭೂಮಿಯನ್ನೇ ನಂಬಿ ಬದುಕುತ್ತಿರುವ ನೂರಾರು ರೈತ ಕುಟುಂಬಗಳು ಬೀದಿಗೆ ಬೀಳುತ್ತವೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.

ADVERTISEMENT

ಮನವಿಗೆ ಸ್ವೀಕರಿಸಿದ ಶೆಟ್ಟರ್, ರೈತರಿಗೆ ತೊಂದರೆಯಾಗಲು ಬಿಡಲ್ಲ ಎಂದು ನಿಯೋಗಕ್ಕೆ ಭರವಸೆ ನೀಡಿದರು.

‘ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದಂತೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಭೂಮಿ ಕಳೆದುಕೊಂಡ ರೈತರ ಕುಟುಂಬಗಳಲ್ಲಿ ಒಬ್ಬರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.

ಭಟ್ಟರಮಾರೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿಈಗಾಗಲೇ ಎರಡು ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಪೋಲನಹಳ್ಳಿ ಸುತ್ತಮುತ್ತ 1,200 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ ಎಂದು ನಿಯೋಗವು ಸಚಿವರ ಗಮನ ಸೆಳೆಯಿತು.

ಸರ್ಕಾರಮತ್ತೇ ಇದೇ ಹೋಬಳಿಯಲ್ಲಿ ಎರಡು ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿದೆ. ಒಂದೇ ಹೋಬಳಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭೂಮಿ ವಶಪಡಿಸಿಕೊಂಡರೆ ರೈತರು ಫಲವತ್ತಾದ ಕೃಷಿ ಭೂಮಿ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗುತ್ತಾರೆ ಶಾಸಕ ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಚನ್ನರಾಯಪಟ್ಟಣ ಹೋಬಳಿ ಘಟಕದ ಜೆಡಿಎಸ್ ಅಧ್ಯಕ್ಷ ಮುನಿರಾಜು, ಶ್ರೀರಾಮಯ್ಯ, ಬಾಲೇಪುರ ಆಂಜಿನಪ್ಪ, ವಕೀಲ ತೆಲ್ಲೋಹಳ್ಳಿ ಶ್ರೀನಿವಾಸ್, ಜಯರಾಮೇಗೌಡ, ಆರ್.ದೊಡ್ಡೇಗೌಡ, ನಲ್ಲಪ್ಪನಹಳ್ಳಿ ನಂಜಪ್ಪ, ಬಸೇಗೌಡ, ಚೀಮಾಚನಹಳ್ಳಿ ನಂಜಪ್ಪ ಮುಂತಾದವರು ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.