ಆನೇಕಲ್: ಆಹಾರ ಅರಸಿ ತಾಲ್ಲೂಕಿನ ವಣಕನಹಳ್ಳಿ ಸಮೀಪದ ಕಾಳನಾಯಕನಹಳ್ಳಿಗೆ ಬಂದಿದ್ದ ಐದು ಸಲಗಗಳ ಹಿಂಡನ್ನು ಭಾನುವಾರ ಮತ್ತೆ ಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಆಹಾರ ಹುಡುಕಿಕೊಂಡು ಶನಿವಾರ ರಾತ್ರಿ ಬಂದಿದ್ದ ಐದು ಕಾಡಾನೆಗಳು ಬೆಳಗಾದರೂ ಕಾಡಿಗೆ ಹಿಂದಿರುಗದೆ ಕಾಳನಾಯಕನಹಳ್ಳಿಯ ನೀಲಗಿರಿ ತೋಪಿನಲ್ಲಿ ಬೀಡು ಬಿಟ್ಟಿದ್ದವು.
ಬೆಳಗ್ಗೆ ವಿಚಾರ ತಿಳಿದ ಗ್ರಾಮಸ್ಥರು ಆನೆ ನೋಡಲು ನೀಲಗಿರಿ ತೋಪಿನ ಬಳಿ ಜಮಾಯಿಸಿದ್ದರು. ಗ್ರಾಮಸ್ಥರು ನೀಡಿದ ಮಾಹಿತಿಗೆ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಓಡಿಸಲು ಕಾರ್ಯಾಚರಣೆ ಆರಂಭಿಸಿದರು. ಸಂಜೆಯ ವೇಳೆಗೆ ಮುತ್ಯಾಲಮಡುವು ಅರಣ್ಯ ಪ್ರದೇಶಕ್ಕೆ ಐದೂ ಆನೆಗಳನ್ನು ಓಡಿಸಲಾಯಿತು.
ಕಾಳನಾಯಕನಹಳ್ಳಿಯಲ್ಲಿ ಬೆಳಗ್ಗೆ ಕಾಣಿಸಿಕೊಂಡ ಕಾಡಾನೆಗಳು ಸ್ವಲ್ಪ ಹೊತ್ತಿನಲ್ಲಿಯೇ ತೆಲಗರಹಳ್ಳಿಯಲ್ಲಿ ಪ್ರತ್ಯಕ್ಷವಾದವು. ಅಲ್ಲಿಂದ ಸಿಂಗಸಂದ್ರದ ನೀಲಗಿರಿ ತೋಪಿನತ್ತ ಸಾಗಿದವು. ದಾರಿಯುದ್ದಕ್ಕೂ ಆನೆ ನಡೆದದ್ದೇ ದಾರಿ ಎಂಬಂತೆ ದಾರಿಯಲ್ಲಿ ಬಾಳೆ ತೋಟ, ರಾಗಿ ಬೆಳೆ, ತೆಂಗಿನ ಗಿಡಗಳನ್ನು ಕಿತ್ತೆಸೆದು ನೀಲಗಿರಿ ಮರಗಳನ್ನು ಮುರಿದು ಹಾಕಿ ದಾಂಧಲೆ ನಡೆಸಿದವು.
ಸಾಮಾನ್ಯವಾಗಿ ಹೆಣ್ಣು ಮತ್ತು ಗಂಡು ಆನೆಗಳು ಒಟ್ಟಾಗಿ ಗುಂಪಿನಲ್ಲಿ ಸಂಚರಿಸುತ್ತವೆ. ಆದರೆ, ಐದು ಆನೆಗಳು ಸಹ ಸಲಗಗಳಾಗಿದ್ದು (ಗಂಡಾನೆಗಳು) ಹಿಂಡಿನಲ್ಲಿರುವುದು ವಿಶೇಷ.
ಸಲಗಗಳು ಸಿಕ್ಕ ಸಿಕ್ಕ ಹೊಲಗಳಲ್ಲಿ ನುಗ್ಗಿ ಮನಸೋ ಇಚ್ಛೆ ಬೆಳೆಗಳಿಗೆ ಹಾನಿ ಮಾಡಿವೆ. ಸಿಂಗಸಂದ್ರ ಸುರೇಶ್ ಅವರಿಗೆ ಸೇರಿದ ಸುಮಾರು ಒಂದು ಎಕರೆ ನೀಲಗಿರಿ ತೋಪು ಕಾಡಾನೆಗಳ ದಾಳಿಯಿಂದಾಗಿ ಸಂಪೂರ್ಣ ಹಾಳಾಗಿದೆ.
ಸಿಂಗಸಂದ್ರದ ಕೆರೆಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದವು. ಎರಡು ಮೂರು ತಾಸಿಗೂ ಹೆಚ್ಚು ಕೆರೆಯಲ್ಲಿಯೇ ಅತ್ತಿಂದಿತ್ತ ಓಡಾಡುತ್ತಿದ್ದವು.
ಯುವಕರು ಸೇರಿದಂತೆ ನೂರಾರು ಸಾರ್ವಜನಿಕರು ಕಾಡಾನೆ ಹಿಂಡು ನೋಡಲು ಸ್ಥಳದಲ್ಲಿ ಜಮಾಯಿಸಿದ್ದರು. ಮೊಬೈಲ್‌ಗಳಲ್ಲಿ ಆನೆಗಳ ಚಿತ್ರ ಕ್ಲಿಕ್ಕಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಜನರನ್ನು ನೋಡುತ್ತಿದ್ದಂತೆ ಕೆರಳಿದ ಸಲಗಗಥ ಹಿಂಡು ಜನರತ್ತ ನುಗ್ಗಿ ಬರುತ್ತಿದ್ದವು. ಪಟಾಕಿ ಸದ್ದಿಗೆ ಒಳ ಹೋಗುತ್ತಿದ್ದ ಕಾಡಾನೆಗಳು ಜನರ ಗುಂಪು ಕಂಡೊಡನೆ ಮತ್ತೆ ಹೊರ ಬರುತ್ತಿದ್ದವು.
ಕಾಡಾನೆಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿ ಸಿಡಿಸಿ ಹಿಮ್ಮೆಟ್ಟಿಸುತ್ತಿದ್ದರು. ಆದರೂ ಜನರು ಬೆಳಗ್ಗೆಯಿಂದಲೂ ಕಾಡಾನೆಗಳ ಹಿಂದೆ ಬಿದ್ದಿದ್ದರಿಂದ ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ಜನರನ್ನು ನಿಭಾಯಿಸುವುದೇ ದೊಡ್ಡ ಸಮಸ್ಯೆಯಾಯಿತು.
ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿ ಆನೆಗಳನ್ನು ಸಿಂಗಸಂದ್ರದಿಂದ ತೆಲರಹಳ್ಳಿಯತ್ತ ಓಡಿಸಿದರು. ತೆಲಹರಗಳ್ಳಿಯ ನೀಲಗಿರಿ ತೋಪಿನಲ್ಲಿ ಕೆಲ ಹೊತ್ತು ಬೀಡು ಬಿಟ್ಟಿದ್ದವು. ಸಂಜೆ 4ರ ಸುಮಾರಿಗೆ ಕಾಡಾನೆಗಳನ್ನು ಓಡಿಸಲು ಪ್ರಾರಂಭಿಸಿದರು. ಥಳೀ ರಸ್ತೆಯನ್ನು ದಾಟಿ ಕಾಡಾನೆಗಳು 4.30ರ ವೇಳೆಗೆ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಪಕ್ಕದಲ್ಲಿ ಹಾದು ಹೋಗಿ ಬಿದರಕಾಡಹಳ್ಳಿ ತಲುಪಿದವು.
ಇಲ್ಲಿಂದ ಮುತ್ಯಾಲಮಡುವು ಕಾಡಿಗೆ ಓಡಿಸುವ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಶ್ರೀಧರ್, ಉಪ ವಲಯ ಅರಣ್ಯಾಧಿಕಾರಿ ಹರೀಶ್, ಗಸ್ತು ಅರಣ್ಯ ಪಾಲಕ ಟಿ.ವೈ.ಜನಗೇರಿ, ಮುನಿಯನಾಯಕ ಮತ್ತು ಚಿರತೆ ಕಾರ್ಯ ಪಡೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.