ADVERTISEMENT

ಶಿಥಿಲ ಕೋಟೆಗಳಿಗೆ ಬೇಕು ಕಾಯಕಲ್ಪ

ದೊಡ್ಡಬಳ್ಳಾಪುರ: ಹಲವು ರಾಜರು ಕಟ್ಟಿದ ಸ್ಮಾರಕಗಳು, ನಿರ್ವಹಣೆ ಇಲ್ಲದೆ ಅನಾಥ!

ನಟರಾಜ ನಾಗಸಂದ್ರ
Published 30 ಸೆಪ್ಟೆಂಬರ್ 2020, 4:11 IST
Last Updated 30 ಸೆಪ್ಟೆಂಬರ್ 2020, 4:11 IST
ದೇವರಬೆಟ್ಟದ ಮೇಲಿನ ಗರಡುಗಂಬದ ಸುತ್ತಲು ಪ್ರೇರಿಪಿಸಿರುವ ಕಲ್ಲುಗಳು
ದೇವರಬೆಟ್ಟದ ಮೇಲಿನ ಗರಡುಗಂಬದ ಸುತ್ತಲು ಪ್ರೇರಿಪಿಸಿರುವ ಕಲ್ಲುಗಳು   

ದೊಡ್ಡಬಳ್ಳಾಪುರ:ತಲಕಾಡು ಗಂಗರು, ಚೋಳರು, ರಾಷ್ಟ್ರಕೂಟರು ಸೇರಿದಂತೆ ಹಲವಾರು ರಾಜರುಗಳಿಂದ ಮೊದಲುಗೊಂಡು ಹೈದರಾಲಿ, ಟಿಪ್ಪುಸುಲ್ತಾನ್‌ವರೆಗಿನ ಆಡಳಿತದವರೆಗೆ ದೊಡ್ಡಬಳ್ಳಾಪುರ ತಾಲ್ಲೂಕು ಹಲವಾರು ರಾಜ ಮನೆತನಗಳ ಆಡಳಿತಕ್ಕೆ ಒಳಪಟ್ಟಿತ್ತು. ಈ ಎಲ್ಲಾ ರಾಜರ ಆಡಳಿತದ ಅವಧಿಯಲ್ಲೂ ತಾಲ್ಲೂಕನ್ನು ಸ್ಥಳೀಯವಾಗಿ ಹಲವಾರು ಜನ ಪಾಳೆಯಗಾರರು ತಮ್ಮ ಆಡಳಿತದ ಅವಧಿಯಲ್ಲಿ ನಿರ್ಮಿಸಿದ್ದ ಪುಟ್ಟ ಕೋಟೆಗಳು ಶಿಥಿಲಾವಸ್ಥೆಯನ್ನು ತಲುಪಿದ್ದು ಅವಸಾನದ ಅಂಚಿನಲ್ಲಿವೆ.

ಇಂದಿಗೂ ನೋಡುಗರನ್ನು ತಮ್ಮತ್ತ ಸೂಜಿಗಲ್ಲಿನಂತೆ ಸೇಳೆಯುವ ತಾಲ್ಲೂಕಿನ ತೋಡಲಬಂಡೆ ಕಿಲ್ಲೆ (ಕೋಟೆ), ಮಾಕಳಿ ದುರ್ಗ ಬೆಟ್ಟದ ಮೇಲಿನ ಕೋಟೆ, ಮದ್ದಿನ ಮನೆ, ಮಲ್ಲೇಶ್ವರ ದೇವಾಲಯ, ಹುಲುಕುಡಿ ಬೆಟ್ಟದ ಮೇಲಿನ ಕೋಟೆ ಕಾವಲಿನ ಬುರುಜು(ಕಾವಲು ಗೋಪುರ)ನ ಗೋಡೆಯ ಬೃಹತ್‌ ಕಲ್ಲುಗಳು ಪ್ರತಿ ಮಳೆಗಾಲ ಬಂದಾಗಲು ಒಂದೊಂದಾಗಿ ಕೆಳಗೆ ಬೀಳುತ್ತಿವೆ. ಹಾಗೆಯೇ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಸಮೀಪದ ದೇವರಬೆಟ್ಟದಲ್ಲಿನ ಗರಡುಗಂಬ (ಸ್ತಂಭ)ದ ಸುತ್ತಲಿನ ಕಲ್ಲುಗಳು ಕಿಡಿಗೇಡಿಗಳ ಕೈಗೆ ಸಿಕ್ಕಿ ನಾಶವಾಗುತ್ತಿವೆ.

ಸಾಸಲು ಹೋಬಳಿಯ ತೋಡಲುಬಂಡೆ ಗ್ರಾಮದ ಸಮೀಪದ ವಿಶಾಲವಾದ ಏಕ ಶಿಲಾ ಬಂಡೆಯ ಮೇಲೆ ನಿರ್ಮಾಣವಾಗಿರುವ ಕಿಲ್ಲೆ(ಕೋಟೆ) ತಲಕಾಡು ಗಂಗರ ರಾಜಧಾನಿಯಾಗಿದ್ದ ಮಣ್ಣೆ ಅಥವಾ ಮಾನ್ಯಪುರಕ್ಕೆ ಸುಮಾರು 30 ಕಿ.ಮೀ ದೂರದಲ್ಲಿದೆ.

ADVERTISEMENT

ತೋಡಲಬಂಡೆಯ ಮೇಲಿನ ಕೋಟೆಯ ಗೋಡೆಯನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಕಲ್ಲು, ಮಣ್ಣುಗಳನ್ನೇ ಬಳಸಿ ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದೆ. ಕೋಟೆಯ ವಾಸ್ತು ರಚನೆ ಆಧಾರದ ಮೇಲೆ ಇತಿಹಾಸ ತಜ್ಞರು 10ನೇ ಶತಮಾನದ ಕೊನೆಯ ಭಾಗದಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿದೆ ಎಂದು ಅಂದಾಜಿಸಿದ್ದಾರೆ. ಕಲ್ಲುಗಳನ್ನು ಒಂದರ ಮೇಲೆ ಒಂದು ಪೇರಿಸಿ ಕಟ್ಟಲಾಗಿದೆ. ಕೋಟೆ ಮೇಲ್ಛಾವಣಿಯ ಕಲ್ಲುಗಳು ಹಾಳಾಗಿವೆ. ಕೋಟೆ ಒಳಭಾಗದಲ್ಲಿ ಇಂದಿಗೂ ಶ್ರೀರಾಮನ ಗುಡಿ ಮಾತ್ರ ಇದ್ದು, ಇದರ ಮೇಲೆ ಕಲ್ಲು ಚಪ್ಪಡಿಗಳ ಛಾವಣಿಯನ್ನು ಕಾಣಬಹುದು.

ವಿಜಯನಗರ ಸಾಮ್ರಾಟರ ಕಾಲದಲ್ಲಿ ಆವತಿ ನಾಡಪ್ರಭುಗಳು ಬೆಟ್ಟದ ಮೇಲೆ ಕೋಟೆಯನ್ನು ನಿರ್ಮಿಸಿದ್ದರು ಎನ್ನುವ ಇತಿಹಾಸಕಾರ ಡಾ.ಎಸ್‌.ವೆಂಕಟೇಶ್‌, ಸಮುದ್ರ ಮಟ್ಟದಿಂದ 4,430 ಅಡಿ ಎತ್ತರದ ಬೆಟ್ಟದ ಮೇಲೆ ಮಾಕಳಿ ಮಲ್ಲೇಶ್ವರಸ್ವಾಮಿ ದೇವಾಲಯ ಇದೆ. ಬೆಟ್ಟದ ಮೇಲಿನ ಸಮತಟ್ಟಾಗಿರುವ ಇಡೀ ಪ್ರದೇಶದ ಒಳಕ್ಕೆ ಯಾರೂ ಪ್ರವೇಶ ಮಾಡಲು ಸಾಧ್ಯವಾಗದಂತೆ ಕೆತ್ತನೆ ಕೆಲಸ ಮಾಡುವ ಬೃಹತ್‌ ಕಲ್ಲುಗಳನ್ನು ಬಳಸಿ ತಡೆಗೋಡೆ, ಕೋಟೆಯ ಪ್ರವೇಶ ಧ್ವಾರವನ್ನು ನಿರ್ಮಿಸಲಾಗಿದೆ.

ಬೆಟ್ಟದ ಮೇಲೆ ಮದ್ದಿನ ಮನೆ, ಕಲ್ಯಾಣಿ, ಮಳೆ ನೀರು ಸಂಗ್ರಹಕ್ಕೆ ತಡೆಗೋಡೆ ನಿರ್ಮಿಸಲಾಗಿದೆ. ಬೆಟ್ಟದ ಮೇಲೆ ನಿರ್ಮಿಸಲಾಗಿರುವ ತಡೆಗೋಡೆಯನ್ನು ನಿಧಿಗಳ್ಳರು ಸೇರಿದಂತೆ ಚಾರಣಿಗರು ಕೆಡವಿದ್ದಾರೆ. ಇನ್ನು ಸೂಕ್ತ ನಿರ್ವಹಣೆ ಹಾಗೂ ಉಸ್ತುವಾರಿ ಇಲ್ಲದೆ ತಡೆಗೋಡೆ ಮೇಲೆ ಸಣ್ಣಪುಟ್ಟ ಮರಗಳು ಬೆಳೆದು ಕಲ್ಲುಗಳನ್ನು ತಳ್ಳಿ ಬೀಳಿಸಿವೆ. ಇತಿಹಾಸದ ಸಂಶೋಧನಾ ವಿದ್ಯಾರ್ಥಿಗಳ ಹಾಗೂ ತಾಲ್ಲೂಕಿನಲ್ಲಿ ಉಳಿದಿರುವ ಬೆರಳೆಣಿಕೆಯಷ್ಟು ಐತಿಹಾಸಿಕ ಸ್ಥಳ, ಕೋಟೆಯಾಗಿರುವ ಮಾಕಳಿದುರ್ಗ ಕೋಟೆಯನ್ನು ಸಂರಕ್ಷಿಸಿಸುವ ಕೆಲಸ ತುರ್ತಾಗಿ ಆಗಬೇಕಿದೆ ಎನ್ನುತ್ತಾರೆ ಮಾಕಳಿ ಮಲ್ಲೇಶ್ವರ ಸೇವಾ ಟ್ರಸ್ಟ್‌‌ ಅಧ್ಯಕ್ಷ ಮಂಜುನಾಥರೆಡ್ಡಿ.

ತಾಲ್ಲೂಕು ಕೇಂದ್ರದಿಂದ 20 ಕಿ.ಮೀ ದೂರದ ಹುಲುಕುಡಿ ಮೆಟ್ಟದ ಶಿವನ ಆರಾಧಕರ ಅಚ್ಚುಮೆಚ್ಚಿನ ತಾಣವಾಗಿದೆ. ಈ ಬೆಟ್ಟದ ಮೇಲೆ ಚೋಳರ ಕಾಲದಲ್ಲಿ ನಿರ್ಮಿಸಿರುವ ವೀರಭದ್ರಸ್ವಾಮಿ ಗುಹಾ ದೇವಾಲಯ, ವೀರಭದ್ರ ಸ್ವಾಮಿಯ ವಿಗ್ರಹ ಅತ್ಯಂತ ಆಕರ್ಷಕವಾಗಿದೆ.

ಅತ್ಯುತ್ತಮ ಗುಣಮಟ್ಟದ ಕಲ್ಲು ಬಂಡೆಗಳನ್ನು ಹೊಂದಿರುವ ಹುಲುಕುಡಿ ಬೆಟ್ಟದ ಮೇಲೆ ಕೋಟೆ ನಿರ್ಮಿಸಲು ಸ್ಥಳೀಯ ಕಲ್ಲುಗಳನ್ನು ಬಳಸಿಕೊಳ್ಳಲಾಗಿದೆ. ಮೆದುವಾಗಿರುವ ಬಿಳಿ ಬಣ್ಣದ ಕಲ್ಲುಗಳಿಂದ ಅತ್ಯಂತ ಅಚ್ಚುಕಟ್ಟಾಗಿ ಬೆಟ್ಟದ ಮೇಲೆ ಕೋಟೆ ಗೋಡೆಯನ್ನು ಕಟ್ಟಲಾಗಿದೆ. ಬೆಟ್ಟದ ಮೇಲಕ್ಕೆ ಹತ್ತಿ ಬರುವವರು ದೂರದಿಂದಲೇ ಕಾಣುವಂತೆ ಬುರುಜು ನಿರ್ಮಿಸಲಾಗಿದೆ. ಇಲ್ಲಿಯು ಸಹ ನಿಧಿ ಆಸೆಗಾಗಿ ಕಲ್ಲುಗಳನ್ನು ಕೆಡವಲಾಗಿದೆ. ಇನ್ನು ಅಳಿದುಳಿದಿರುವ ಬುರುಜಿನ ಕಲ್ಲುಗಳು ಬಿದ್ದು ಹಾಳಾಗಾದಂತೆ ಸಂರಕ್ಷಿಸುವ ಕೆಲಸ ಆಗಬೇಕಿದೆ ಎನ್ನುವುದು ತಾಲ್ಲೂಕಿನ ಇತಿಹಾಸ ಪ್ರಿಯರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.