
ಆನೇಕಲ್: ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿಯೂ 2023-24 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನ ಆಗುವ ಮೂಲಕ ಎರಡನೇ ಬಾರಿಗೆ ಪ್ರಶಸ್ತಿ ಸ್ವೀಕರಿಸಿದೆ.
ಬೆಂಗಳೂರಿನಲ್ಲಿ ವಿಧಾನಸೌದದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ರೆಡ್ಡಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಶಾಸಕ ಬಿ.ಶಿವಣ್ಣ ಹಾಜರಿದ್ದರು.
ಪಂಚಾಯಿತಿ ಕಾರ್ಯಕ್ರಮಗಳು ಅರ್ಹರಿಗೆ ತಲುಪಬೇಕು ಎಂಬುದು ನಮ್ಮ ಮುಖ್ಯಗುರಿಯಾಗಿದೆ. ಈ ನಿಟ್ಟಿನಲ್ಲಿ ಪೂರ್ವ ಪ್ರಾಥಮಿಕ ಪಾಠ ಶಾಲೆ ಮಕ್ಕಳ ಮನೆ, ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಪಂಚಾಯಿತಿ ಊಟದ ಮನೆ, ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿ, ರೈತರಿಗೆ ಹೈನುಗಾರಿಕೆ ಪ್ರೋತ್ಸಾಹಿಸಲು ಪ್ರತಿ ಲೀಟರ್‌ಗೆ ಪಂಚಾಯಿತಿಯಿಂದ ₹10 ಪ್ರೋತ್ಸಾಹಧನ, ಒಳಾಂಗಣ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದ್ದರಿಂದ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ. 2021ನೇ ಸಾಲಿನಲ್ಲೂ ಪುರಸ್ಕಾರ ದೊರೆತಿತ್ತು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.