ADVERTISEMENT

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿಬಂಧನೆಗೆ ಬೇಸರ

ಗಣೇಶ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 13:58 IST
Last Updated 6 ಸೆಪ್ಟೆಂಬರ್ 2024, 13:58 IST
ವಿಜಯಪುರ ಪುರಸಭೆಯಲ್ಲಿ ಶುಕ್ರವಾರ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವುದಕ್ಕಾಗಿ ಅನುಮತಿ ಪತ್ರ ಪಡೆಯಲು ಸಾರ್ವಜನಿಕರು ಅರ್ಜಿ ಸಲ್ಲಿಸಿದರು
ವಿಜಯಪುರ ಪುರಸಭೆಯಲ್ಲಿ ಶುಕ್ರವಾರ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವುದಕ್ಕಾಗಿ ಅನುಮತಿ ಪತ್ರ ಪಡೆಯಲು ಸಾರ್ವಜನಿಕರು ಅರ್ಜಿ ಸಲ್ಲಿಸಿದರು    

ವಿಜಯಪುರ(ದೇವನಹಳ್ಳಿ):ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗಾಗಿ ಸರ್ಕಾರ ವಿಧಿಸಿರುವ ಷರತ್ತುಗಳ ಅನ್ವಯ ಪುರಸಭೆ, ಪೊಲೀಸ್ ಠಾಣೆ, ಬೆಸ್ಕಾಂ, ಗ್ರಾಮ ಪಂಚಾಯಿತಿಯಲ್ಲಿ ಅನುಮತಿ ಪತ್ರ ಪಡೆಯಲು ಜನರು ಮುಂದಾಗಿದ್ದರು.

ಪುರಸಭೆಯ ಆವರಣದಲ್ಲೇ ಎಲ್ಲ ಇಲಾಖೆಗಳ ಅಧಿಕಾರಿಗಳು ಒಂದೇ ಸೂರಿನಡಿಯಲ್ಲಿ ನಿರಪೇಕ್ಷಣಾ ಪತ್ರಗಳೊಂದಿಗೆ ನಿಬಂಧನೆಗಳುಳ್ಳ ಅನುಮತಿ ಪತ್ರ ವಿತರಣೆ ಮಾಡಿದರು. ಗ್ರಾಮೀಣ ಪ್ರದೇಶ ಹಾಗೂ ಪಟ್ಟಣ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಅನುಮತಿ ಪಡೆದರು.

ಗಣೇಶ ಮೂರ್ತಿಗಳ ವಿಸರ್ಜನೆಗ ವ್ಯವಸ್ಥೆ: ಪಟ್ಟಣದ 23 ವಾರ್ಡ್‌ಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವವರು 5 ಅಡಿಗಳಿಗಿಂತಲೂ ಕಡಿಮೆ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಪ್ರತಿಷ್ಠಾಪನೆ ನಂತರ ವಿಸರ್ಜನೆಗಾಗಿ ಪುರಸಭೆಯಿಂದ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಅವುಗಳನ್ನು ನೀರು ತುಂಬಿಸಿ, ಪ್ರತಿಯೊಂದು ವಾರ್ಡ್‌ನಲ್ಲಿ ಮುಖ್ಯ ವೃತ್ತಗಳಲ್ಲಿ ಟ್ಯಾಂಕರ್ ನಿಲ್ಲಿಸಲಾಗುತ್ತದೆ. ಮೂರ್ತಿಗಳನ್ನು ವಿಸರ್ಜನೆ ಮಾಡುವವರು ಅಲ್ಲಿಗೆ ತೆಗೆದುಕೊಂಡು ಮಾಡುವಂತೆ ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ತಿಳಿಸಿದರು.

ADVERTISEMENT

ಪಿಒಪಿ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಕ್ರಮ: ಈಗಾಗಲೇ ಸರ್ಕಾರದ ಆದೇಶದಂತೆ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬಾರದೆಂದು ಸಾರ್ವಜನಿಕವಾಗಿ ಜಾಗೃತಿ ಮೂಡಿಸಲಾಗಿದೆ. ಸರ್ಕಾರದ ಆದೇಶವನ್ನು ಮೀರಿ ಯಾರಾದರೂ ಪಿಒಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದು ಕಂಡು ಬಂದರೆ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿ, ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸರ್ಕಾರದ ನಿಬಂಧನೆಗಳಿಗೆ ಸಾರ್ವಜನಿಕರಿಂದ ಬೇಸರ: ಸರ್ಕಾರ, ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಹಲವು ನಿಬಂಧನೆ ವಿಧಿಸಿರುವ ಕಾರಣ ಒಂದು ಕಡೆ ಮೂರ್ತಿ ಪ್ರತಿಷ್ಠಾಪನೆಗೆ ₹1ಸಾವಿರ ಖರ್ಚು ಬರುತ್ತಿದೆ. ಇದರ ಜತೆಗೆ ಸುತ್ತಾಡಬೇಕು. ನಿಬಂಧನೆಗಳನ್ವಯ ಅನುಮತಿ ಪಡೆದುಕೊಳ್ಳಲು ಸಾಧ್ಯವಾಗದ ಕಾರಣ ಬಹಳಷ್ಟು ಹಳ್ಳಿಗಳಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವುದೇ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಇದರಿಂದಾಗಿ ಹಲವು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿರುವ ಧಾರ್ಮಿಕ ಸಂಪ್ರದಾಯಗಳಿಗೆ ಹಿನ್ನಡೆಯಾಗುತ್ತಿದೆ. ಯುವಕರು ಧಾರ್ಮಿಕ ಕಾರ್ಯಕ್ರಮಗಳಿಂದ ವಿಮುಖರಾಗುವಂತಾಗಿದೆ. ಧಾರ್ಮಿಕ ಕಾರ್ಯಕ್ರಮಗಳಿಗೂ ಅನುಮತಿ ಪಡೆದುಕೊಂಡು ಆಚರಣೆ ಮಾಡಬೇಕು ಎನ್ನುವುದು ವಿಪರ್ಯಾಸದ ಸಂಗತಿ ಎಂದು ಮುಖಂಡ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.