ADVERTISEMENT

ಹೊಸಕೋಟೆ: ಕೆರೆ ಕಟ್ಟೆ ಮೇಲೆ ಎಲ್ಲಿ ನೋಡಿದರೂ ಕಸ

ಕಸದಿಂದ ಜನತೆಗೆ ನಿತ್ಯ ನರಕಯಾತನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 4:11 IST
Last Updated 11 ಜೂನ್ 2025, 4:11 IST
ಹೊಸಕೋಟೆ ತಾಲ್ಲೂಕಿನ ಸಮೇತನಹಳ್ಳಿ ಕೆರೆ ಅಂಚಿನಲ್ಲಿ ಸುರಿದಿರುವ ಕಸ
ಹೊಸಕೋಟೆ ತಾಲ್ಲೂಕಿನ ಸಮೇತನಹಳ್ಳಿ ಕೆರೆ ಅಂಚಿನಲ್ಲಿ ಸುರಿದಿರುವ ಕಸ   

ಹೊಸಕೋಟೆ: ಸರ್ಕಾರವು ಕೆರೆಗಳನ್ನು ಸಂರಕ್ಷಿಸುವಲ್ಲಿ ನಿರ್ಲಕ್ಷ್ಯ ತಾಳುತ್ತಿದ್ದು, ಕೆರೆ ಒತ್ತುವರಿ, ಕಸ ಸುರಿಯವುದು ಸೇರಿದಂತೆ ವಿವಿಧ ಕಾರಣಗಳಿಗೆ ಕೆರೆಗಳು ಬಲಿಯಾಗುತ್ತಿವೆ. ಅದೇ ರೀತಿ ತಾಲ್ಲೂಕಿನ ಕಸಬಾ ಹೋಬಳಿಯ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರದ ಕೆರೆಯಲ್ಲಿ ದಿನೇ ದಿನೇ ಕಸದ ರಾಶಿಯು ಹೆಚ್ಚಾಗುವಂತಾಗಿದೆ.

ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರವು ತಮಿಳುನಾಡು ಮತ್ತು ಚಿಕ್ಕತಿರುಪತಿ, ಮಾಲೂರು ಕೇಂದ್ರಗಳಿಗೆ ಸಂಪರ್ಕವನ್ನು ಕಲ್ಪಿಸುವ ಪ್ರಮುಖ ರಸ್ತೆಯನ್ನು ಹೊಂದಿದೆ. ಈ ಪ್ರಮುಖ ರಸ್ತೆಯಂಚಿನಲ್ಲಿಯೇ ಸಮೇತನಹಳ್ಳಿ ಕೆರೆಯು ಇದ್ದು, ಈ ಮಾರ್ಗದಲ್ಲಿ ಹಾಗು ಹೋಗುವ ಜನರಿಗೆ ನಿತ್ಯ ನರಕ ದರ್ಶನವಾಗುವಂತಾಗಿದೆ.

ದಕ್ಷಿಣ ಪಿನಾಕಿನಿ ನದಿಯಿಂದ ಈ ಕೆರೆಗೆ ನೀರು ಹರಿದು ಬರುತ್ತಿತ್ತು, ಆದರೆ ಕಳೆದ 2 ವರ್ಷದಿಂದ ಈ ನೀರನ್ನು ನಿಲ್ಲಿಸಿದ್ದಾರೆ. ಅಂದಿನಿಂದ ಕೆರೆಯು ಒಣಗುತ್ತಿದ್ದು, ಕೆರೆಯನ್ನು ಅವಲಂಬಿಸಿ ಬದುಕುತ್ತಿದ್ದ ಸಾವಿರಾರು ಮಂದಿ ರೈತರಿಗೆ ಯಾವುದೇ ಕೆರೆ ಇಲ್ಲದೆ ಪರದಾಡುವಂತಾಗಿದೆ. ಜೊತೆಗೆ ಈ ಭಾಗದ ರೈತರು ನೀರಿಗಾಗಿ ಹೋರಾಡಿ, ಅಧಿಕಾರಿಗಳಿಗೆ ಮನವಿಗಳನ್ನು ಕೊಟ್ಟು ಸುಸ್ತಾಗಿದ್ದಾರೆ. ಆದರೆ, ಈವರೆಗೂ ನೀರು ಹರಿಸುವ ಕುರಿತು ಯಾವುದೇ ನಿರ್ಧಾರವನ್ನು ಸಂಬಂಧಿಸಿದ ಅಧಿಕಾರಿಗಳು ಕೈಗೊಂಡಿಲ್ಲ.

ADVERTISEMENT

ಒಂದೆಡೆ ಕೆರೆಗೆ ಸುರಿದಿರುವ ಕಸದಿಂದ ಕೆರೆ ಮುಚ್ಚುತ್ತಿದ್ದರೆ. ಮತ್ತೊಂದೆಡೆ ಕಸದಲ್ಲಿರುವ ವಿಚಕಾರಕ ವಸ್ತುಗಳು ಕೆರೆ ಸೇರಿ ಕೆರೆ ನೀರು ವಿಷಮಯವಾಗಿ ಮಾರ್ಪಡುತ್ತಿವೆ. ಕೆರೆ ಸಂರಕ್ಷಣೆ ಕುರಿತು ಪ್ರಮುಖರ ಸಮ್ಮುಖದಲ್ಲಿ ಜಾಥಾ ಮತ್ತು ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೂ ಕಸದ ಮೂಲಕ ಕೆರೆಯನ್ನು ನಾಶ ಮಾಡುತ್ತಿದ್ದಾರೆ.

ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಪ್ರಮುಖ ರಸ್ತೆಯಲ್ಲಿಯೇ ಇದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಬಿದ್ದಿವೆ. ಕಸವನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕಾದ ಸ್ಥಳೀಯ ಗ್ರಾಮ ಪಂಚಾಯಿತಿ ಕಾಟಾಚಾರಕ್ಕೆ ಎಂಬಂತೆ ಇಷ್ಟ ಬಂದಾಗ ಕಸದ ರಾಶಿಗಳನ್ನು ತೆರುವುಗೊಳಿಸಿ ಸುಮ್ಮನಾಗುತ್ತಿದ್ದಾರೆಯೇ ವಿನಾ ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಕೆರೆಯ ಅಂಚಿನಲ್ಲಿ ಸುರಿದಿರುವ ಕಸ
ರಸ್ತೆಯ ಅಂಚಿನಲ್ಲಿಯೇ ಬಿದ್ದಿರುವ ಕಸದ ರಾಶಿ

ಅನುದಾನಕ್ಕಾಗಿ ಇಲಾಖೆಗೆ ಮನವಿ

ಸಮೇತನಹಳ್ಳಿ ಕೆರೆಯಿಂದ ಸುತ್ತಮುತ್ತಲ ಗ್ರಾಮಗಳಿಗೆ ದಿನ ಬಳಕೆಗೆ ಹಾಗೂ ಕೃಷಿಗೆ ಅನುಕೂಲವಾಗುತ್ತಿತ್ತು. ಇದನ್ನು ಮನಗಂಡಿರುವ ಸ್ಥಳೀಯ ಜನಪ್ರತಿನಿಧಿಗಳು ಈ ಕೆರೆಗೆ ನೀರು ಹರಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು ಕೆರೆಯ ಹೂಳು ತೆಗೆದು ಆ ನಂತರ ಕೆರೆಗೆ ನೀರು ಹರಿಸಲಾಗುವುದು. ಅನುದಾನಕ್ಕಾಗಿ ಆರ್ಥಿಕ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಆದಷ್ಟು ಬೇಗ ಕೆಲಸ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಕಾರ್ಯವೈಖರಿಗೆ ಅಮಾಧಾನ

ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಕೆರೆಗಳ ಸುತ್ತಲೂ ಕಸದ ರಾಶಿ ಸಾಮಾನ್ಯವಾಗುತ್ತಿದೆ. ಕೆರೆಗಳನ್ನು ಕಸ ಸುರಿಯುವ ತಾಣಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಾದ ಸ್ಥಳೀಯ ಗ್ರಾಮ ಪಂಚಾಯಿತಿ ನಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಸುಮ್ಮನಿರುವುದು ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರು ಮತ್ತು ಪ್ರಕೃತಿ ಪ್ರೇಮಿಗಳಲ್ಲಿ ಅಸಮಾಧಾನ ಉಂಟಾಗುವಂತೆ ಮಾಡಿದೆ.

ಕಠಿಣ ಕ್ರಮಕ್ಕೆ ಆಗ್ರಹ

ಸಮೇತನಹಳ್ಳಿ ಕೆರೆ ಸುತ್ತಲೂ ಬೀಳುವ ಕಸದ ಕುರಿತು ಹಗೂ ಕಸ ಎಸೆಯುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಸೂಚನೆ ನೀಡಿದ್ದೇವೆ. ಆದರೂ ಈವರೆಗೂ ಕಸದ ಸಮಸ್ಯೆ ತಹಬದಿಗೆ ಬಂದಿಲ್ಲ ಇದು ಹೀಗೆ ಮುಂದುವರೆದಲ್ಲಿ ಕಠಿಣ ಕ್ರಮಕ್ಕೆ ಮುಂದಾಗಲಾಗುವುದು. ಮಂಜುನಾಥ್‌ರೆಡ್ಡಿ ಎಇಇ ಸಣ್ಣ ನೀರಾರಿ ಇಲಾಖೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.