ADVERTISEMENT

ಕಸ ವಿಂಗಡಣೆ: ನಾಗರಿಕರಿಗೆ ಜಾಗೃತಿ

ಸ್ವಚ್ಛ ಭಾರತ್‌ ಮಿಷನ್‌ನಡಿ ಬೀದಿ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:08 IST
Last Updated 17 ಸೆಪ್ಟೆಂಬರ್ 2021, 4:08 IST
ವಿಜಯಪುರ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಕಸ ವಿಲೇವಾರಿ ಕುರಿತು ಬೀದಿ ನಾಟಕದ ಮೂಲಕ ಕಲಾವಿದರು ಜಾಗೃತಿ ಮೂಡಿಸಿದರು
ವಿಜಯಪುರ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಕಸ ವಿಲೇವಾರಿ ಕುರಿತು ಬೀದಿ ನಾಟಕದ ಮೂಲಕ ಕಲಾವಿದರು ಜಾಗೃತಿ ಮೂಡಿಸಿದರು   

ದೇವನಹಳ್ಳಿ: ‘ನಗರ ಮತ್ತು ಗ್ರಾಮೀಣ ಜನರಿಗೆ ಕಸ ವಿಂಗಡಣೆ, ವಿಲೇವಾರಿ, ಸಂಸ್ಕರಣೆ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಪ್ಲಾಸ್ಟಿಕ್‌ಗೆ ನಿಷೇಧ ಹೇರಿಕೊಂಡಿರುವ ನಾವು ಈಗ ಎಚ್ಚೆತ್ತುಕೊಳ್ಳಬೇಕಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಬಿ. ಪ್ರದೀಪ್ ಕುಮಾರ್ ಹೇಳಿದರು.

ಪಟ್ಟಣದ ಪುರಸಭೆ ಮುಂಭಾಗದ ಶಿವಗಣೇಶ ಸರ್ಕಲ್‌ನಲ್ಲಿ ವಿಜಯಪುರ ಪುರಸಭೆ ಹಾಗೂ ಮೈತ್ರಿ ಸರ್ವಸೇವಾ ಸಮಿತಿಯ ಸಹಯೋಗದಲ್ಲಿ ಗುರುವಾರ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಕಡಿಮೆ ಬಳಕೆ ಮಾಡಬೇಕು. ಬಳಸಿದ ಪ್ಲಾಸ್ಟಿಕ್‌ ಅನ್ನು ಮರುಬಳಕೆ ಮಾಡಿ ಪರಿಸರವನ್ನು ಉಳಿಸಬೇಕಿದೆ. ಮುಂದಿನ ಜನಾಂಗ ಆರೋಗ್ಯಪೂರ್ಣವಾಗಿ ಬದುಕಬೇಕೆಂದರೆ ಅವರಿಗಾಗಿ ಸುಂದರವಾದ, ಸ್ವಚ್ಛ ಪರಿಸರವನ್ನು ಸೃಷ್ಟಿಸಬೇಕಿದೆ ಎಂದರು.

ADVERTISEMENT

ಜನಸಂಖ್ಯೆ ಹೆಚ್ಚಾಗಿರುವ ದೇಶದಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ನೆಲ, ನೀರು, ವಾಯುಮಾಲಿನ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅತಿಯಾದ ಕೈಗಾರಿಕೆಗಳಿಂದ ಎಲ್ಲಾ ವಸ್ತುಗಳನ್ನು ಪ್ಲಾಸ್ಟಿಕ್‌ನಲ್ಲಿ ಪ್ಯಾಕೇಜ್ ಮಾಡಲಾಗುತ್ತಿದೆ. ಅವುಗಳನ್ನು ಜನ ಯಥೇಚ್ಛವಾಗಿ ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು.

ಜನರಿಗೆ ಕಸ ವಿಂಗಡಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಬೇಕಾಗಿದೆ. ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಗುತ್ತಿದ್ದು, ಜನರು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.

ಮೈತ್ರಿ ಸರ್ವಸೇವಾ ಸಮಿತಿಯ ಯೋಜನೆ ವ್ಯವಸ್ಥಾಪಕಿ ಗೌರಮ್ಮ ಮಾತನಾಡಿ, ಭಾರತವನ್ನು ಕಸ ಮುಕ್ತವನ್ನಾಗಿ ಮಾಡಬೇಕಿದೆ. ಕೊಳೆಯುವ ಕಸ, ಕೊಳೆಯಲಾರದ ಕಸ, ವಿಷಪೂರಿತ ಕಸ, ಮರುಬಳಕೆ ಮಾಡುವಂತಹ ಕಸ, ವೈದ್ಯಕೀಯ ತ್ಯಾಜ್ಯ ಎಲ್ಲವನ್ನೂ ಬೇರೆ ಬೇರೆಯಾಗಿ ವಿಂಗಡಿಸಬೇಕು. ಅವುಗಳನ್ನು ಮತ್ತೆ ಮರುಬಳಕೆ ಮಾಡಿ ವ್ಯವಸ್ಥಿತವಾಗಿ ವಿಲೇವಾರಿ ಮಾಡುವಂತಹ ಏರ್ಪಾಡು ಮಾಡಬೇಕು ಎಂದು ಸಲಹೆ ನೀಡಿದರು.

ಅವಿದ್ಯಾವಂತರಿಗಿಂತ ಸುಶಿಕ್ಷಿತರೇ ಹೆಚ್ಚು ಕಸವನ್ನು ಉತ್ಪಾದನೆ ಮಾಡುತ್ತಾರೆ. ಎಲ್ಲೆಂದರಲ್ಲಿ ಎಸೆಯುವ ದೃಶ್ಯಗಳನ್ನು ಕಾಣಬಹುದಾಗಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಮುಂದೊಂದು ದಿನ ಗಂಭೀರವಾದ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ಕಲಾವಿದರು ಬೀದಿ ನಾಟಕದ ಮೂಲಕ ಹಸಿ ಕಸ, ಒಣ ಕಸವನ್ನು ಬೀದಿಯಲ್ಲಿ ಬಿಸಾಡುವುದರಿಂದ ಆಗುವಂತಹ ತೊಂದರೆ, ನೀರಿನ ಮಿತಬಳಕೆ, ಪ್ಲಾಸ್ಟಿಕ್ ಬಳಕೆಯಿಂದ ಆಗುವಂತಹ ತೊಂದರೆ, ಕೋವಿಡ್ ಲಸಿಕೆಯಿಂದ ಆಗುವಂತಹ ಪ್ರಯೋಜನ ಕುರಿತು ಜಾಗೃತಿ ಮೂಡಿಸಿದರು.

ಪರಿಸರ ಎಂಜಿನಿಯರ್‌ ಮಹೇಶ್ ಕುಮಾರ್, ಆರೋಗ್ಯ ನಿರೀಕ್ಷಕ ಉದಯ್ ಕುಮಾರ್ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.