
ವಿಜಯಪುರ(ದೇವನಹಳ್ಳಿ): ಮಾಂಸಹಾರ ಹಾಗೂ ಒಗ್ಗರಣೆಗೆ ಕಡ್ಡಾಯವಾಗಿ ಬೇಕಾದ ಬೆಳ್ಳುಳ್ಳಿ ಬೆಲೆ ಏರಿಕೆಯಿಂದ ಅಡುಗೆ ಮನೆಯಲ್ಲಿ ಅದರ ಪಾರಮ್ಯ ಕುಗ್ಗಿದೆ.
ಟೊಮೆಟೊ, ಈರುಳ್ಳಿ ಬೆಲೆ ಏರಿಕೆಯಿಂದಾಗಿ ತತ್ತರಿಸಿದ್ದ ಗ್ರಾಹಕರು ಈಗ ಬೆಳ್ಳುಳ್ಳಿ ಬೆಲೆ ಏರಿಕೆ ಶಾಕ್ ನೀಡಿದೆ. ಇದರಿಂದ ಒಗ್ಗರಣೆಯಲ್ಲಿ ಬೆಳ್ಳುಳ್ಳಿ ಕಾಣಿಯಾಗಿದೆ. ಶ್ರೀ ಸಾಮಾನ್ಯರಲ್ಲದೆ ಹೊಟೇಲ್‌ಗಳು, ಡಾಬಾಗಳ ಮಾಲೀಕರಿಗೂ ದುಬಾರಿಯಾಗಿ ಪರಿಣಮಿಸಿದೆ.
ಮದುವೆಯಂತಹ ಶುಭಕಾರ್ಯಗಳು ಮಾಡುವವರು, ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೇಳಿ ಗಾಬರಿಯಾಗುತ್ತಿದ್ದಾರೆ. ಕೆ.ಜಿ. ಬೆಳ್ಳುಳ್ಳಿಯ ಬೆಲೆ ₹200 ರೂಪಾಯಿಯಿಂದ ₹450 ರೂಪಾಯಿಗೆ ಏರಿಕೆಯಾಗಿದೆ.
ಹವಾಮಾನದ ವೈಪರಿತ್ಯದಿಂದಾಗಿ ಮಳೆ ಕಡಿಮೆಯಾಗಿರುವ ಕಾರಣ ಬೆಳ್ಳುಳ್ಳಿ ಬೆಳೆಯ ಇಳುವರಿ ಕಡಿಮೆ ಬಂದಿದೆ. ಪ್ರತಿನಿತ್ಯ ಹೊಟೇಲ್, ರೆಸ್ಟೋರೆಂಟ್, ಡಾಬಾಗಳಲ್ಲಿ ಬೆಳ್ಳುಳ್ಳಿ ಬಳಕೆ ಹೆಚ್ಚಾಗುತ್ತಿದೆ. ಆದರೆ ಈಗ ಬೆಲೆ ಹೆಚ್ಚಾಗಿರುವುದರಿಂದ ಅವುಗಳ ಮಾಲೀಕರನ್ನು ಚಿಂತೆಗೀಡು ಮಾಡಿದೆ.
ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನದಿಂದ ಇಲ್ಲಿನ ವ್ಯಾಪಾರಿಗಳು ಆಮದು ಮಾಡಿಕೊಳ್ಳುತ್ತಾರೆ. ಆದರೆ, ಆಮದು ಪ್ರಮಾಣ ಬಹಳ ಕಡಿಮೆಯಿದೆ. ಡಿಸೆಂಬರ್ ಅಂತ್ಯದಿಂದ ಜನವರಿವರೆಗೆ ಬೆಳ್ಳುಳ್ಳಿ ದರ ಏರಿಕೆಯಲ್ಲಿರುತ್ತದೆ. ಆದರೆ ಈ ಬಾರಿ ತಿಂಗಳಾಂತ್ಯದಲ್ಲಿ ಬೆಳ್ಳುಳ್ಳಿ ದರ ದ್ವಿಗುಣಗೊಂಡಿದೆ ಎನ್ನುತ್ತಾರೆ ವ್ಯಾಪಾರಿ ರಾಮಾಂಜಿಂನಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.