ಆನೇಕಲ್: ಸುರಿಯುತ್ತಿದ್ದ ಜೋರು ಮಳೆಯಲ್ಲೂ ಭಕ್ತರ ಉತ್ಸಾಹ ಕುಂದರಲಿಲ್ಲ. ಒಂದೆಡೆ ಎಡೆಬಿಡದೆ ಮಳೆ ಬೀಳುತ್ತಿದ್ದರೂ ಇದರ ನಡುವೆ ಭಕ್ತರು 50ಕ್ಕೂ ಹೆಚ್ಚು ಅಡಿಯ ಗೌರಿ–ಗಣೇಶ ರಥವನ್ನು ಸಂಪ್ರದಾಯದಂತೆ ಹೊತ್ತು ದೇವಿಗೆ ಜೈಕಾರ ಹಾಕುತ್ತಾ ಮೆರವಣಿಗೆ ನಡೆಸಿದರು.
–ಇಂತಹ ರೋಮಾಂಚನಕಾರಿ ದೃಶ್ಯ ಕಂಡು ಬಂದಿದ್ದು, ಪಟ್ಟಣಕ್ಕೆ ಸಮೀಪದ ತಮಿಳುನಾಡಿನ ಗುಮ್ಮಳಾಪುರದ ಗೌರಿ ಜಾತ್ರೆಯ ರಥೋತ್ಸವದಲ್ಲಿ.
ಗುರುವಾರ ಸಂಜೆ 4ರ ಸುಮಾರಿಗೆ ದೇವಾಲಯದಿಂದ ಗಣೇಶ ಮತ್ತು ಗೌರಿ ಮೂರ್ತಿಯನ್ನು ತಂದು ತೇರಿನ ಮೇಲೆ ಕುಳ್ಳರಿಸುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಜನರು ಜಯಘೋಷ ಮಾಡಿದರು. ಗೌರಿ ಹಾಗೂ ಗಣೇಶನ ಮೂರ್ತಿಗಳನ್ನು ಪ್ರತ್ಯೇಕ ರಥಗಳಲ್ಲಿ ಪ್ರತಿಷ್ಠಾಪಿಸಿ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು.
ಎಲ್ಲೆಡೆ ರಥವನ್ನು ಹಗ್ಗ, ಸರಪಳಿ ಮತ್ತಿತರಗಳನ್ನು ಕಟ್ಟಿ ಎಳೆದರೆ ಇಲ್ಲಿ ರಥವನ್ನು ಹೆಗಲ ಮೇಲೆ ಹೊತ್ತು ಓಡಿಕೊಂಡು ರಥೋತ್ಸವ ನಡೆಸಲಾಗುತ್ತದೆ.
ಮಳೆಯಿಂದ ನೆಲ ಕೆಸರಿನಂತೆ ಆಗಿತ್ತು. ಜೋರಾಗಿ ಓಡಿದರೆ ಜಾರುತ್ತಿತ್ತು. ಆದರೂ ಭಕ್ತಿಯ ಮುಂದೆ ಅವೆಲ್ಲವೂ ನಗಣ್ಯವಾಗಿತ್ತು. ಬಿದರಿನಿಂದ ಕಟ್ಟಿದ್ದ ಸುಮಾರು 500–600 ಕೆ.ಜಿ ತೂಕದ ಚಂದ್ರಮಂಡಲದ ಎರಡು ತೇರನ್ನು ನೂರಾರು ಯುವಕರು ಹೊತ್ತು ಭಕ್ತಿಯ ಪರಾಕಾಷ್ಠೆ ಮೆರೆದರು. ಮಳೆಯ ಕೆಸರಿನ ನಡುವೆಯೂ ತೇರನ್ನು ಹೊತ್ತ ಭಕ್ತರು ವೇಗವಾಗಿ ಓಡುತ್ತಿದ್ದ ದೃಶ್ಯ ರೋಮಾಂಚನವಾಗಿತ್ತು.
ಯುವಕರು ತೇರುಗಳನ್ನು ಹೊತ್ತು 4 ಕಿ.ಮೀ. ದೂರದ ಗೌರಮ್ಮನ ಕೆರೆಯವರೆಗೂ ಹೊಲಗದ್ದೆಗಳ ನಡುವೆಯೇ ಹೊತ್ತು ವೇಗವಾಗಿ ಸಾಗಿದರು. ತೇರುಗಳು ಸಾಗುತ್ತಿದ್ದಂತೆಯೇ ಜನರು ತೇರಿನಿಂದೆ ಓಡುತ್ತಿದ್ದ ದೃಶ್ಯ ಕಂಡುಬಂದಿತು. ಸಂಜೆ 6ರ ವೇಳೆಗೆ ವೇಳೆಗೆ ಗೌರಿ ಕೆರೆಯ ಬಳಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ದೇವಿಯನ್ನು ಹಾಗೂ ಗಣೇಶನನ್ನು ಜಲಾಧಿವಾಸಕ್ಕೆ ಕಳುಹಿಸಿಕೊಡಲಾಯಿತು.
ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು. ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳ ಭಕ್ತರು ವೈಭವದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಭಕ್ತರು ದವನ ಚುಚ್ಚಿದ ಬಾಳೆಹಣ್ಣನ್ನು ತೇರಿನತ್ತ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಮಳೆಯ ನಡುವೆಯೂ ಭಕ್ತರು ಉತ್ಸಾಹದಿಂದ ದೇವಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮದ ಎಲ್ಲಾ ಮನೆಗಳು ಹಬ್ಬಕ್ಕಾಗಿ ಅಲಂಕೃತಗೊಂಡಿದ್ದವು. ವೀರಭದ್ರಸ್ವಾಮಿ ಅಗ್ನಿಕೊಂಡ, ಬಸವನ ಜಾತ್ರೆ, ವೀರಗಾಸೆ ಕುಣಿತ, ಬೆಲ್ಲದಾರತಿ ಹಾಗೂ ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವಗಳು ಜರುಗಿದವು.
ಮಡಿಲಕ್ಕಿ ಅರ್ಪಣೆ
ಇದಕ್ಕೂ ಮುನ್ನ ಗಣಪತಿಯ ಮೂರ್ತಿಯನ್ನು ಮೊದಲಿಗೆ ತೇರಿನಲ್ಲಿ ಕುಳ್ಳರಿಸಲಾಯಿತು. ನಂದಿ ಭೃಂಗಿಯ ಮೂರ್ತಿಗಳನ್ನು ಗೌರಿ ತೇರಿನಲ್ಲಿ ನಿಲ್ಲಿಸಲಾಯಿತು. ದೇವಾಲಯದಿಂದ ಹೊರಟ ಗೌರಿ ಮತ್ತು ಗಣೇಶನ ತೇರುಗಳು 4.30ರ ಸುಮಾರಿಗೆ ಗುಮ್ಮಳಾಪುರದ ಹಿರೇಮಠದತ್ತ ತೆರಳಿದವು. ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ದೇವಿಗೆ ಪೂಜೆ ಸಲ್ಲಿಸಿ ಮಠದ ವತಿಯಿಂದ ಮಡಿಲಕ್ಕಿ ಸಲ್ಲಿಸಿದ ನಂತರ ತೇರುಗಳು ಗೌರಿ ಕೆರೆಯತ್ತ ಸಾಗಿದವು. ಗೌರಿ ದೇವಿಗೆ ಪೂಜೆ ಸಲ್ಲಿಸಿ ಮಡಿಲಕ್ಕಿ ಅರ್ಪಿಸಲು ಗುಮ್ಮಳಾಪುರ ಹಿರೇಮಠದಿಂದ ಮಹಿಳೆಯರು ಮೆರವಣಿಗೆಯಲ್ಲಿ ತೆರಳಿದರು. ಮಠದ ಬಳಿ ಶ್ರೀಗಳು ಧಾರ್ಮಿಕ ಪೂಜೆಗಳನ್ನು ಸಲ್ಲಿಸಿ ಮಡಿಲಕ್ಕಿ ಸಮರ್ಪಿಸಿದರು. ಕೊಂಬು ಕಹಳೆಗಳನ್ನು ಊದುವ ಮೂಲಕ ಉತ್ಸವಕ್ಕೆ ಕಳೆ ನೀಡಿದರು ಅದ್ದೂರಿ ತೆರೆ ವರ್ಷಕ್ಕೆ ಒಂದು ತಿಂಗಳು ಮಾತ್ರ ತೆರೆಯುವ ಗುಮ್ಮಳಾಪುರ ಗೌರಿ ದೇವಿ ದೇವಾಲಯದಲ್ಲಿ ಗೌರಿ ಗಣೇಶನ ಜಲಾಧಿವಾಸದೊಂದಿಗೆ ಈ ವರ್ಷದ ಜಾತ್ರೆಗೆ ಅದ್ದೂರಿ ತೆರೆಬಿದ್ದಿತು. ಕಳೆದ ಮೂರು ದಿನಗಳಿಂದ ಗುಮ್ಮಳಾಪುರದಲ್ಲಿ ಜಾತ್ರೆಯ ಸಂಭ್ರಮ ಮನೆಮಾಡಿತ್ತು. ಒಂದು ತಿಂಗಳಿನಿಂದ ಗೌರಿ ದೇವಿ ದರ್ಶನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.