ADVERTISEMENT

ಸಂವಿಧಾನಬದ್ಧ ಹಕ್ಕು ಪಡೆಯಿರಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 13:23 IST
Last Updated 15 ಜುಲೈ 2019, 13:23 IST
ವಿಜಯಪುರದ ಪ್ರವಾಸಿ ಮಂದಿರದಲ್ಲಿ ಮಹರ್ಷಿ ಮಾತಂಗ ಜನ ಸೇವಾ ಟ್ರಸ್ಟ್‌ನ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು 
ವಿಜಯಪುರದ ಪ್ರವಾಸಿ ಮಂದಿರದಲ್ಲಿ ಮಹರ್ಷಿ ಮಾತಂಗ ಜನ ಸೇವಾ ಟ್ರಸ್ಟ್‌ನ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು    

ವಿಜಯಪುರ: ಯಾವುದೇ ಸಮುದಾಯಗಳು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕಾದರೆ ಸಂಘಟಿತರಾಗಿ ಹೋರಾಟ ಮಾಡುವುದರ ಜೊತೆಗೆ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಂಡಾಗ ಮಾತ್ರವೇ ಸಾಧ್ಯವಾಗುತ್ತದೆ ಎಂದು ಮುಖಂಡ ಗೊಡ್ಲುಮುದ್ದೇನಹಳ್ಳಿ ಮುನಿರಾಜು ಹೇಳಿದರು.

ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಮಹರ್ಷಿ ಮಾತಂಗ ಜನ ಸೇವಾ ಟ್ರಸ್ಟ್‌ನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಯಾವುದೇ ಸಮುದಾಯಗಳು ಏಳಿಗೆಯಾಗಬೇಕಾದರೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಾಧ್ಯವಿದೆ ಎಂದು ಹೇಳಿರುವ ಬಾಬಾ ಸಾಹೇಬ ಅಂಬೇಡ್ಕರ್ ಅವರು ತಳಸಮುದಾಯಗಳ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಇಂದು ಅನೇಕ ಸಮುದಾಯಗಳು ನಿರಂತರವಾಗಿ ದೌರ್ಜನ್ಯ ಮತ್ತು ದಬ್ಬಾಳಿಕೆ ಸಹಿಸಿಕೊಂಡು ಬರುತ್ತಿದ್ದಾರೆ’ ಎಂದರು.

ADVERTISEMENT

ಮುಖಂಡ ಭಟ್ರೇನಹಳ್ಳಿ ನಾರಾಯಣಪ್ಪ ಮಾತನಾಡಿ, ‘ಸ್ವಾತಂತ್ರ್ಯ ಪೂರ್ವದಿಂದಲೂ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಇದ್ದೇವೆ. ಈಗಲೂ ನಾವು ವಂಚನೆಗೆ ಒಳಗಾಗುತ್ತಲೇ ಇದ್ದೇವೆ. ರಾಜಕೀಯವಾಗಿಯೂ ನಮ್ಮ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದ್ದರೂ ಯಾವುದೇ ಸಮುದಾಯಗಳು ಬೆಂಬಲಕ್ಕೆ ನಿಲ್ಲುತ್ತಿಲ್ಲ’ ಎಂದರು.

ರಾಜ್ಯದಲ್ಲಿ ಆಡಳಿತಕ್ಕೆ ಬರುತ್ತಿರುವ ಸರ್ಕಾರಗಳೂ ಯಾವ ಸಮುದಾಯದ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೋ ಅಂತಹ ಜನಾಂಗಕ್ಕೆ ಮಣೆಹಾಕುತ್ತಿವೆ ಎಂದು ದೂರಿದರು.

ಮುಖಂಡ ವೆಂಕಟಗಿರಿಕೋಟೆ ಚಿನ್ನಪ್ಪ ಮಾತನಾಡಿ, ಸಮಾಜದ ಏಳಿಗೆ ಎಂದರೆ ಮಾನವ ಜನಾಂಗಕ್ಕೆ ಅಗತ್ಯವಾದ ಶಿಕ್ಷಣವೂ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವುದು. ಅವರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಏಳಿಗೆಯಾದಾಗ ಮಾತ್ರವೇ ಸಮಾಜದ ಅಭಿವೃದ್ಧಿಯಾಗಿದೆ ಎಂದು ಹೇಳಬಹುದು ಎಂದರು.

‘ಅನುದಾನ ಬಿಡುಗಡೆ ಮಾಡುತ್ತಿದ್ದರೂ ಬೆರಳೆಣಿಕೆಯಷ್ಟು ಮಂದಿಗೆ ಈ ಸೌಲಭ್ಯಗಳು ಸಿಗುತ್ತಿವೆ. ಇಡೀ ಸಮುದಾಯಕ್ಕೆ ಕೊಟ್ಟಿದ್ದೇವೆ ಎನ್ನುವುದು ಜನಾಂಗದ ಏಳಿಗೆಗೆ ಸಂಬಂಧಪಡುತ್ತಿಲ್ಲ. ಆದ್ದರಿಂದ ಟ್ರಸ್ಟ್‌ನ ಮೂಲಕ ಸಮುದಾಯದ ಏಳಿಗೆಗಾಗಿ ಶ್ರಮಿಸಲು ಪಣತೊಟ್ಟಿದ್ದೇವೆ’ ಎಂದರು.

ಮುಖಂಡರಾದ ತಿರುಮಲೇಶ್, ಶಂಕರಪ್ಪ, ಗಂಗಾಧರ್, ಮುನಿಯಪ್ಪ, ಪಿಳ್ಳಪ್ಪ, ಮುನಿಶಾಮಯ್ಯ, ತಿಮ್ಮಹಳ್ಳಿ ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.