
ದೊಡ್ಡಬಳ್ಳಾಪುರ: ಇಳಕಲ್, ಮೊಳಕಾಲ್ಮೂರು ಸೀರೆಗಳಂತೆ ದೊಡ್ಡಬಳ್ಳಾಪುರದಲ್ಲಿಯೂ ಬ್ರ್ಯಾಂಡೆಡ್ ಸೀರೆಗಳನ್ನು ತಯಾರಿಸಬೇಕು. ಇದಕ್ಕೆ ಭೌಗೋಳಿಕ ಮಾನ್ಯತೆ(ಜಿಯೋಗ್ರಾಫಿಕಲ್ ಇಂಡಿಕೇಶನ್–ಜಿಐ ಟ್ಯಾಗ್) ಪಡೆದರೆ, ನಿಮ್ಮ ಸೀರೆಗಳನ್ನು ಯಾರೂ ಸಹ ನಕಲು ಮಾಡಲು ಸಾಧ್ಯವಿಲ್ಲ. ಹೀಗಾಗಿ ಮ್ಯಾನತೆಯನ್ನು ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕೈ ಮಗ್ಗ ಮತ್ತು ಜವಳಿ ಇಲಾಖೆ ಹೆಚ್ಚುವರಿ ನಿರ್ದೇಶಕ ಯೋಗೀಶ್ ಹೇಳಿದರು.
ನೇಯ್ಗೆ ಉದ್ಯಮ ಎದುರಿಸುತ್ತಿರುವ ಬಿಕ್ಕಟ್ಟು ಕುರಿತು ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುಲು ಜವಳಿ ಇಲಾಖೆ ಅಧಿಕಾರಿಗಳೊಂದಿಗೆ ನೇಕಾರ ಹೋರಾಟ ಸಮಿತಿ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.
ಸೂರತ್ ಸೀರೆ ಮತ್ತು ರೀಪಿಯರ್ ಮಗ್ಗ ಸೀರೆಗಳಿಂದ ಈಗ ಎದುರಾಗಿರುವ ನೇಯ್ಗೆ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲದೆ ಇಲ್ಲಿನ ನೇಕಾರರೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಇನ್ನು ಸರ್ಕಾರ ಐದು ವರ್ಷಕ್ಕೊಮ್ಮೆ ಜವಳಿ ನೀತಿ ಪರಿಷ್ಕರಿಸುತ್ತಿದೆ. ತಾಂತ್ರಿಕ ಉನ್ನತೀಕರಣಕ್ಕೆ ಸಹಾಯ ಧನ ನೀಡಲಾಗುವುದು. ಕಚ್ಚಾ ಸಾಮಗ್ರಿಗೆ ಸಹಾಯಧನ, ಜರಿ ಉತ್ಪಾದನೆ ಘಟಕಕ್ಕೆ ಸಹಾಯಧನ ಸೇರಿದಂತೆ ನೇಕಾರರಿಗೆ ಪೂರಕವಾಗುವ ಹೊಸ ಯೋಜನೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.
ನೇಕಾರ ಮಹಾಮಂಡಲದ ಅಧ್ಯಕ್ಷ ಪಿ.ಸಿ.ವೆಂಕಟೇಶ್ ಮಾತನಾಡಿ, ‘21 ತಿಂಗಳಲ್ಲಿ ನಾವು ನೇಯು ಸೀರೆಗಳನ್ನು ಸೂರತ್‌ನಲ್ಲಿ ಒಂದು ತಿಂಗಳೇ ನೇಯಲಾಗುತ್ತಿದೆ. ಹೀಗೆ ನೇಯ್ದ ಸೀರೆಗಳನ್ನು ಇಲ್ಲಿ ತಂದು ಮಾರಾಟ ಮಾಡುತ್ತಿರುವುದರಿಂದ ಸ್ಥಳೀಯ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ವಿದ್ಯುತ್ ಮಗ್ಗಗಳಲ್ಲಿ ತಯಾರಾಗುವ ಬಟ್ಟೆಗಳನ್ನು ನೇಯದಂತೆ ವಿದ್ಯುತ್ ಮಗ್ಗಗಳ ಮೀಸಲಾತಿ ಅಧಿನಿಯಮ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಕೌಶಲದಿಂದ ಹೆಚ್ಚು ಸಮಯ ತೆಗೆದುಕೊಂಡು ನೇಯಲಾಗುವ ಸೀರೆಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ರೇಪಿಯರ್ ಏರ್‌ಜೆಟ್ ಮಗ್ಗಗಳಲ್ಲಿ ಸೂರತ್‌ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ತಯಾರಿಸಿ, ಇಲ್ಲಿಗೆ ತಂದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಇಲ್ಲಿನ ನೇಕಾರಿಕೆ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ ಎಂದು ನೇಕಾರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ. ಹೇಮಂತರಾಜು ತಿಳಿಸಿದರು.
ಇದರಿಂದ ನೇಯ್ಗೆ ಉದ್ಯಮವನ್ನು ನಂಬಿ ಜೀವನ ನಡೆಸುತ್ತಿರುವ ಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ನೇಕಾರರನ್ನು ಉಳಿಸುವ ನಿಟ್ಟಿನಲ್ಲಿ ಸೂರತ್ ಸೀರೆಗಳು ಇಲ್ಲಿಗೆ ಬರದಂತೆ ತಡೆದು ಕರ್ನಾಟಕ ರಾಜ್ಯದ ನೇಯ್ಗೆ ಉದ್ಯಮವನ್ನು ಉಳಿಸಬೇಕಾಗಿದೆ ಎಂದು ಮನವಿ ಮಾಡಿದರು.
ನೇಕಾರರಿಗೆ ಉತ್ಪಾದನಾ ವೆಚ್ಚ ಕಡಿಮೆ ಆಗಬೇಕು. ಸರ್ಕಾರದ ನೀತಿಗಳು ನೇಕಾರರಿಗೆ ನೆರವಾಗಬೇಕು. ನೇಕಾರರ ಸೀರೆಗೆ ಬೆಲೆ ಸಿಗಬೇಕು. ರೇಪಿಯರ್‌ನಲ್ಲಿ ಬಟ್ಟೆ ತಯಾರಾಗದಂತೆ ಅಥವಾ ಬ್ರ್ಯಾಂಡ್ ಹೆಸರಿನಲ್ಲಿ ತೆರಿಗೆ ವಿಧಿಸುವ ಕ್ರಮ ಕೈಗೊಳ್ಳಬಹುದಾಗಿದೆ ಎಂದು ನೇಕಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್, ನೇಕಾರ ಡಿ.ಶ್ರೀಕಾಂತ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಕೈ ಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುರೇಶ್, ಕೈ ಮಗ್ಗ ಮೀಸಲಾತಿ ಅಧಿನಿಯಮದ ಜಾಗೃತಿ ದಳದ ಅಧಿಕಾರಿ ಮೋಹನ್, ನಗರಸಭಾ ಸದಸ್ಯ ಚಂದ್ರ ಮೋಹನ್, ಡಿ.ಆರ್.ದ್ರುವಕುಮಾರ್ , ಮಲ್ಲೇಶ್, ವೆಂಕಟೇಶ್ ಇದ್ದರು.
ಪವರ್ ಲೂಮ್ ವಸಾಹತು ನಿರ್ಮಿಸಿ
ದೊಡ್ಡಬಳ್ಳಾಪುರದಲ್ಲಿ ಜವಳಿ ಉತ್ಪನ್ನ ಮಾರುಕಟ್ಟೆ ಸಂಕಿರಣ ಶಿಲಾನ್ಯಾಸ ಶೀಘ್ರವೇ ಆಗಬೇಕು. ಎಲ್ಲಾ ಮಗ್ಗದ ಘಟಕಗಳು ಒಂದೇ ಜಾಗದಲ್ಲಿ ನಿರ್ವಹಿಸುವಂತ ಪವರ್ ಲೂಮ್ ವಸಾಹತು ನಿರ್ಮಿಸಬೇಕು. ತೆಲಂಗಾಣ ರಾಜ್ಯದಂತೆ ಸರ್ಕಾರವೇ ನೇಕಾರರಿಂದ ಸೀರೆಗಳನ್ನು ಖರೀದಿಸಬೇಕಿದೆ ಎಂದು ನೇಕಾರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ. ಹೇಮಂತರಾಜು ಆಗ್ರಹಿಸಿದರು.
ಕ್ರಮಕ್ಕೆ ಆಗ್ರಹ
ಟೆಕ್ಸ್‌ಟೈಲ್ ವೀವರ್ಸ್ ಅಸೋಸಿಯೇಶನ್ ಅಧ್ಯಕ್ಷ ವಿ.ನರಸಿಂಹಮೂರ್ತಿ ಮುಖಂಡರಾದ ಆರ್.ಎಸ್.ಶ್ರೀನಿವಾಸ್ ಮಾತನಾಡಿ ನೇಕಾರರು ತಯಾರು ಮಾಡುವ ಬಟ್ಟೆಗಳನ್ನು ಸೂರತ್ ಹಾಗೂ ಇತರೆಡೆ ರೇಪಿಯರ್ ಮಗ್ಗಗಳಲ್ಲಿ ತಯಾರು ಮಾಡುವಂತಿಲ್ಲ. ಈ ಬಗ್ಗೆ ರೇಪಿಯರ್ ಮಗ್ಗಗಳ ಮಾಲೀಕರ ಮೇಲೆ ಕೈಮಗ್ಗ ಮೀಸಲಾತಿ ಅಧಿನಿಯಮದಂತೆ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೈಮಗ್ಗ ಮೀಸಲಾತಿ ಅಧಿನಿಯಮದ ಜಾಗೃತ ದಳದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.