ದೊಡ್ಡಬಳ್ಳಾಪುರ: ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಿಂದ 23 ಅಸಂಘಟಿತ ವರ್ಗದ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು.
ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಓಬದೇನಹಳ್ಳಿಯಲ್ಲಿ ನಿರ್ಮಿಸಿರುವ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಉದ್ಘಾಟನೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿಯಡಿ 23 ಅಸಂಘಟಿತ ಕಾರ್ಮಿಕ ವರ್ಗಗಳ ಕಾರ್ಮಿಕರಿಗೆ ಉಚಿತವಾಗಿ ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಅಸಂಘಟಿತ ವಲಯದ ಗಿಗ್ ಕಾರ್ಮಿಕರು, ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರು, ಪತ್ರಿಕಾ ವಿತರಕ ಕಾರ್ಮಿಕರು ಹಾಗೂ ಖಾಸಗಿ ವಾಣಿಜ್ಯ ಸಾರಿಗೆ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಯೋಜನೆ ರೂಪಿಸಲಾಗಿದೆ ಎಂದರು.
ರಾಜ್ಯದ ಗಿಗ್ ಕಾರ್ಮಿಕರಿಗಾಗಿ (ಸ್ವತಂತ್ರ ಉದ್ಯೋಗಿ) ವಿಶೇಷ ವಿಮಾ ಯೋಜನೆ ಜಾರಿಗೊಳಿಸಿದೆ. ಆನ್‌ಲೈನ್ ಮೂಲಕ ಸರಕು ಸೇವೆ ಒದಗಿಸುವ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಡೆಲಿವರಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಅಪಘಾತದಲ್ಲಿ ಆಕಸ್ಮಿಕವಾಗಿ ಮೃತಪಟ್ಟವರಿಗೆ ₹2ಲಕ್ಷ ನೀಡಲಾಗುತ್ತಿತ್ತು, ಈಗ ₹5 ಲಕ್ಷ ಕೊಡುತ್ತಿದ್ದೇವೆ ಎಂದರು.
ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ₹88 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಇಎಸ್ಐ ಆಸ್ಪತ್ರೆಗೆ ಅಗತ್ಯ ಸೌಲಭ್ಯ ಹಾಗೂ ಉಪಕರಣಗಳ ಸರಬರಾಜಿಗೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಈ ಬಗ್ಗೆ ಕೇಂದ್ರದ ಕಾರ್ಮಿಕ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ರಾಜಧಾನಿಯ ಅಂಚಿನಲ್ಲೇ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ವೇಗವಾಗಿ ನಡೆಯುತ್ತಿದೆ. ಇದಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳುವುದು ಕಾನೂನು ಆಗಿದೆ. ಆದರೆ, ಕೈಗಾರಿಕೆಗಳಿಗೆ ಭೂಮಿ ನೀಡಿರುವ ರೈತರ ಕುಟುಂಬದಲ್ಲಿನ ಸದಸ್ಯರಿಗೆ ಕೌಶಲ್ಯ ತರಬೇತಿ ನೀಡಿ ಕೈಗಾರಿಕೆಗಳಲ್ಲಿ ಉದ್ಯೋಗ ದೊರೆಯುವಂತೆ ಮಾಡಬೇಕು. ಇದಕ್ಕಾಗಿ ಕೌಶಲ್ಯ ತರಬೇತಿ ಕೇಂದ್ರವನ್ನು ಕಾರ್ಮಿಕ ಇಲಾಖೆಯಿಂದ ಜಿಲ್ಲೆಯಲ್ಲಿ ಪ್ರಾರಂಭಿಸಬೇಕು ಎಂದು ತಿಳಿಸಿದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ, ನಗರದಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 3 ಲಕ್ಷಕ್ಕೂ ಅಧಿಕ ಕಾರ್ಮಿಕರು ವಲಸೆ ಬಂದು ದೊಡ್ಡಬಳ್ಳಾಪುರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಕಾರ್ಮಿಕರಿಗೆ ಭದ್ರತೆ ಸಿಗುವಂತೆ ಮಾಡಬೇಕು. ಸ್ಥಳೀಯ ಮಟ್ಟದ ಕಾರ್ಮಿಕರಿಗೆ ಉದ್ಯೋಗದಲ್ಲಿ ಶೇ 70ರಷ್ಟು ಅವಕಾಶ ಕಲ್ಪಿಸಿರುವುದು ನಿರುದ್ಯೋಗ ನಿವಾರಣೆಗೆ ಹೆಚ್ಚು ಅನುಕೂಲವಾಗಿದೆ. ಅತಿ ಶೀಘ್ರವಾಗಿ ಇಎಸ್ಐ ಆಸ್ಪತ್ರೆ ಉದ್ಘಾಟನೆಯಾಗಬೇಕು. ಕಾರ್ಮಿಕ ಮಕ್ಕಳಿಗೆ ವಸತಿ ಶಾಲೆಯನ್ನು ತಾಲ್ಲೂಕಿಗೆ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಭಾರತಿ, ಸದಸ್ಯರಾದ ರಮೇಶ್, ಜಾನಿ, ಬಸಪ್ಪ, ಶ್ರೀಯಾನ್ಸ್, ವಿಜಯಕುಮಾರ್, ಕಾರ್ಮಿಕರ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಉಪವಿಭಾಗಾಧಿಕಾರಿ ಎನ್.ದುರ್ಗಶ್ರೀ, ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್, ಮಾಜಿ ಶಾಸಕ ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ನಿರ್ದೇಶಕ ಟಿ.ರಾಮಣ್ಣ, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿಶ್ವನಾಥ ಇದ್ದರು.
ಪ್ರಜಾಪ್ರಭುತ್ವ ದೇಶದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ. ರಾಜಕಾರಣಿಗಳು ಒಬ್ಬರಿಗೊಬ್ಬರು ಗೌರವ ಕೊಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ವಯಕ್ತಿಕ ಟೀಕೆಗಳು ಯಾರಿಗೂ ಲಾಭ ತಂದುಕೊಡುವುದಿಲ್ಲ. ಸಂತೋಷ್ ಎಸ್.ಲಾಡ್ ಕಾರ್ಮಿಕ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.