ADVERTISEMENT

ಹೊಸಕೋಟೆ | ಸೌಲಭ್ಯ ಇದ್ದರೂ ಮುಚ್ಚುತ್ತಿವೆ ಸರ್ಕಾರಿ ಶಾಲೆ: ನಾರಾಯಣಸ್ವಾಮಿ ಕಳವಳ

‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಮೇ 2025, 15:49 IST
Last Updated 14 ಮೇ 2025, 15:49 IST
ಹೊಸಕೋಟೆ ತಾಲ್ಲೂಕು ನಂದಗುಡಿ ಗ್ರಾಮದ ಕೆಪಿಎಸ್ ಶಾಲೆ ಆವರಣದಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ತಾ.ಪಂ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ ಉದ್ಘಾಟಿಸಿದರು
ಹೊಸಕೋಟೆ ತಾಲ್ಲೂಕು ನಂದಗುಡಿ ಗ್ರಾಮದ ಕೆಪಿಎಸ್ ಶಾಲೆ ಆವರಣದಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ತಾ.ಪಂ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ ಉದ್ಘಾಟಿಸಿದರು   

ಹೊಸಕೋಟೆ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯ ಇದ್ದರೂ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುತ್ತಿಲ್ಲ. ಇದರಿಂದ ಶಾಲೆಗಳು ಮುಚ್ಚುತ್ತಿವೆ ಎಂದು ತಾ.ಪಂ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ನಂದಗುಡಿ ಹೋಬಳಿ ಕೇಂದ್ರದ ಕೆಪಿಎಸ್ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಕರ ಇಲಾಖೆ ಮತ್ತು ಅಕ್ಷರ ದಾಸೋಹ ಯೋಜನೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆಯುತಿದೆ. ಗ್ರಾಮೀಣ ಭಾಗದಲ್ಲಿ ಪೋಷಕರು ಖಾಸಗಿ ಶಾಲೆಗಳತ್ತ ಆಕರ್ಷಿತರಾಗಿ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದ ಬಹುತೇಕ ಶಾಲೆಗಳು ಮಕ್ಕಳು ಇಲ್ಲದೆ ಮುಚ್ಚಲಾಗುತ್ತಿದೆ. ಶಾಲಾ ಕಟ್ಟಡಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿವೆ ಎಂದು ಬೇಸರಿಸಿದರು.

ADVERTISEMENT

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಕಲಿಕೆಗೆ ಪೂರಕ ವಾತಾವರಣ ಇದೆ. ಪ್ರತಿಭಾವಂತ ಶಿಕ್ಷಕರರೂ ಇದ್ದಾರೆ. ಪೋಷಕರು ತಮ್ಮ ಮಕ್ಕಳ ಧೈರ್ಯವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಿಸಬಹುದು ಎಂದು ತಿಳಿಸಿದರು.

ಖಾಸಗಿ ಶಾಲೆಗೆ ಪೈಪೋಟಿ ನೀಡುವಂತೆ ಅನೇಕ ಯೋಜನೆಗಳನ್ನು ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಅನುಷ್ಠಾನಗೊಳಿಸಿದೆ. ಇದರ ಜೊತೆಗೆ ಇಲಾಖೆಯ ಶಿಕ್ಷಕರ ಜವಾಬ್ದಾರಿಯೂ ಹೆಚ್ಚು. ಗ್ರಾಮ ಭಾಗದ ಜನರಲ್ಲಿ ಅರಿವು ಮೂಡಿಸಿ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗುವಂತೆ ನೋಡಿಕೊಳ್ಳಬೇಕು ಎಂದರು.

ಶಾಸಕರು ಸ್ಥಳೀಯ ಅನೇಕ ಕಂಪನಿಗಳ ಸಿಎಸ್ಆರ್‌ ಅನುದಾನ ಮೂಲಕ ಶಾಲೆಗಳ ದಾಖಲಾತಿಗೆ ತಕ್ಕಂತೆ ಶಾಲೆ ಅಭಿವೃದ್ಧಿಗೆ ಅನವು ಮಾಡಿಕೊಟ್ಟಿದ್ದಾರೆ. ಇನ್ಫೋಸಿಸ್ ಕಂಪನಿ ತಾಲ್ಲೂಕಿನ ಅನೇಕ ಶಾಲೆಗಳನ್ನ ದತ್ತು ಪಡೆದು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಅಕ್ಷರ ದಾಸೋಹ ಜಿಲ್ಲಾ ಉಪ ನಿರ್ದೇಶಕಿ ಲಲಿತಮ್ಮ , ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದ ಪರಿಕಲ್ಪನೆ, ಉದ್ದೇಶ ಮತ್ತು ಇಲಾಖೆಯ ಆಶಯದೊಂದಿಗೆ ಸರ್ಕಾರಿ ಶಾಲೆಯಲ್ಲಿ ಒದಗಿಸುತ್ತಿರುವ ಶೈಕ್ಷಣಿಕ ಸೌಲಭ್ಯಗಳನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು. ಜೊತೆಯಲ್ಲಿ ಮಕ್ಕಳ ಕಲಿಕಾ ಗುಣಮಟ್ಟ ಉತ್ತಮ ಪಡಿಸಲು ಸರ್ಕಾರ ಕೈಗೊಂಡ ಹಲವು ಯೋಜನೆಗಳ ಫಲಿತಾಂಶವನ್ನು ತಿಳಿಸಬೇಕು.

ಕೆಪಿಎಸ್ ಶಾಲೆಯ ಎಸ್‌ಡಿಎಂಸಿಯ ಎನ್.ಗಂಗಾಧರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪಾಷಾ, ಬಿಆರ್‌ಸಿ ನಾಗರಾಜ್, ಕೆಪಿಎಸ್ ಶಾಲೆಯ ಪಾಂಶುಪಾಲೆ ಶುಭಾ, ನೆಲವಾಗಲು ಮುಖ್ಯ ಶಿಕ್ಷಕ ನೂಲಗಿರಿ, ಶಿವನಾಪುರ ಮುಖ್ಯ ಶಿಕ್ಷಕ ಸತೀಶ್ ಕುಮಾರ್, ಸಿಆರ್‌ಪಿ ನಟರಾಜ್, ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಮನ್ವಯ ಅಧಿಕಾರಿ ಮಮತಾ, ನವೀನ್ ಕುಮಾರ್, ಸಿಆರ್‌ಪಿಗಳಾದ ಮುನಿರಾಜು, ಶ್ರೀನಿವಾಸ್, ಪ್ರೇಮಕುಮಾರಿ, ಸತೀಶ್ ಕುಮಾರ್, ಪಿಡಿಒ ಇದ್ದರು.

ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವು ಕೇವಲ ವೇದಿಕೆಗೆ ಸೀಮಿತವಾಗದೆ ಪ್ರತಿಯೊಬ್ಬರೂ ಕೈಜೋಡಿಸಿ ಕಾರ್ಯಕ್ರಮವು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು
-ಡಾ.ಸಿ.ಎನ್.ನಾರಾಯಣಸ್ವಾಮ ಇ.ಒ ತಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.