ADVERTISEMENT

ನೆಲಕಚ್ಚಿದ ರಾಗಿಫಸಲು: ರೈತರಲ್ಲಿ ಆತಂಕ

ಎರಡನೇ ಹಂತದ ಬೆಳೆಯೂ ನೆಲಕ್ಕೆ ಬೀಳುವ ಭಯ, ಬೆಳೆ ಮೀರಿಸಿ ಬೆಳೆದ ಅಣ್ಣೆಸೊಪ್ಪಿನ ಕಳೆ

ವಡ್ಡನಹಳ್ಳಿ ಬೊಜ್ಯನಾಯ್ಕ
Published 9 ನವೆಂಬರ್ 2019, 19:31 IST
Last Updated 9 ನವೆಂಬರ್ 2019, 19:31 IST
ಮಳೆ, ಗಾಳಿಯಿಂದ ನೆಲಕಚ್ಚಿರುವ ರಾಗಿ ಫಸಲು
ಮಳೆ, ಗಾಳಿಯಿಂದ ನೆಲಕಚ್ಚಿರುವ ರಾಗಿ ಫಸಲು   

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರುಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ರಾಗಿ ಫಸಲು ನೆಲಕ್ಕೆ ಮುದುಡಿ, ಅಣ್ಣೆಸೊಪ್ಪು ಬೆಳೆಯನ್ನು ಮೀರಿ ಬೆಳೆಯುತ್ತಿದ್ದು ರೈತರಲ್ಲಿ ನಿರಾಸೆ ಮೂಡಿಸಿದೆ.

ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ 43 ಸಾವಿರ ಹೆಕ್ಟೇರ್ರಾಗಿ ಸೇರಿದಂತೆ 53,403 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 4ರಷ್ಟು ಹೆಚ್ಚುವರಿ ಬಿತ್ತನೆಯಾಗಿದೆ. ಮುಂಗಾರು ಆರಂಭದಲ್ಲಿ ಬಿತ್ತನೆಗೆ ಮಳೆ ಪ್ರಮಾಣ ಕಡಿಮೆಯಾಗಿತ್ತು. ನಂತರ ಸುರಿದ ಮಳೆಗೆ ಕೃಷಿ ಚಟುವಟಿಕೆ ಚುರುಕುಗೊಂಡು ಸಕಾಲದಲ್ಲಿ ಬೆಳೆಗೆ ಮಳೆ ಸುರಿದಿತ್ತು. ಪರಿಣಾಮ ರೈತರು ಸಮೃದ್ದ ಫಸಲು ಬರುವ ಆಶಾಭಾವನೆಯಲ್ಲಿದ್ದರು. ಆದರೆ ಅಕ್ಟೋಬರ್ ತಿಂಗಳ ಅಂತಿಮದಲ್ಲಿ ನಾಲ್ಕೈದು ದಿನ ಸುರಿದ ಮಳೆಗೆ ತೆನೆಯ ಕಾಳಿನಲ್ಲಿ ಹಾಲು ತುಂಬಿತ್ತು. ನಂತರ ಫಸಲು ಬೆಳವಣಿಗೆಯಲ್ಲಿ ರಾಗಿಕಾಳು ಬಲಿತು ಸಮೃದ್ದ ಫಸಲು ಕೊಯ್ಲಿಗೆ ಮೊದಲೇ ನೆಲಕ್ಕೆ ಬಿದ್ದು ರೈತರಿಗೆ ಸಂಕಷ್ಟ ತಂದಿದೆ.

ಮುಂಗಾರು ಬಿತ್ತನೆ ಎರಡು ಹಂತದಲ್ಲಿ ಆಗಿದೆ. ಮೊದಲ ಹಂತದಲ್ಲಿ ಬಿತ್ತನೆಯಾದ ರಾಗಿ ಫಸಲು ನೆಲಕ್ಕುರುಳುತ್ತಿದೆ. ಎರಡನೇ ಹಂತದಲ್ಲಿನ ರಾಗಿ ಫಸಲಿಗೆ ಯಾವುದೇ ಸದ್ಯ ರೀತಿಯ ತೊಂದರೆ ಇಲ್ಲವಾದರೂ, ಮುಂದಿನ ದಿನಗಳಲ್ಲಿ ಮಳೆ ಬಂದರೆ ಮೊದಲ ಹಂತದಲ್ಲಿ ಬಿತ್ತನೆ ಮಾಡಿದ ರಾಗಿ ಫಸಲು ಕೈಗೆಟುಕುವುದು ದುಸ್ತರವಾಗಬಹುದು. ಎರಡನೇ ಹಂತದ ರಾಗಿ ಫಸಲೂ ನೆಲಕ್ಕುರಳಬಹುದು ಎಂಬುದು ರೈತರ ಆತಂಕ.

ADVERTISEMENT

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಶೇ 60ರಷ್ಟು ರಾಗಿ, ಮುಸುಕಿನ ಜೋಳ, ತೊಗರಿ ಬಿತ್ತನೆಯಾಗಿದೆ. ಎರಡನೇ ಹಂತದಲ್ಲಿ ಶೇ 40 ರಷ್ಟು ಬಿತ್ತನೆಯಾಗಿದೆ. ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆಯ ಒಟ್ಟು ಗುರಿ 60.403 ಸಾವಿರ ಹೆಕ್ಟೇರ್ ಪೈಕಿ ಶೇ 80ರಷ್ಟು ಬಿತ್ತನೆ ಆಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜೀವ ಸುಲೋಚನಾ.

ಜಿಲ್ಲೆಯಲ್ಲಿ ರಾಗಿ ಮತ್ತು ಇತರೆ ಬೆಳೆಗಳಲ್ಲಿ ಅಣ್ಣೆಸೊಪ್ಪಿನ ಕಳೆ ಎಗ್ಗಿಲ್ಲದೆ ಬೆಳೆದಿದೆ. ಬೆಳೆಯ ನಡುವೆ ಬೆಳೆಯುತ್ತಿರುವ ಈ ಕಳೆ ಇಡೀ ಫಸಲನ್ನು ಆಪೋಶನ ಮಾಡಿದೆ. ಈ ಸಸ್ಯದಿಂದ ಬೆಳೆ ಇಳುವರಿ ಕುಂಟಿತವಾಗುವುದಲ್ಲದೆ ಮಣ್ಣಿನ ಫಲವತ್ತತೆಯ ಸಂಪೂರ್ಣ ಲಾಭ ಪಡೆದು ಬಿತ್ತಿದ ಬೆಳೆಗೆ ಕಂಟಕವಾಗಲಿದೆ. ಕಡಿಮೆ ತೇವಾಂಶದಲ್ಲಿ ವೇಗವಾಗಿ ಬೆಳೆಯುವ ಈ ಅಣ್ಣೆಸೊಪ್ಪಿನ ಸಸ್ಯವನ್ನು ಬುಡಸಮೇತ ಕಿತ್ತುಹಾಕಿ ಒಣಗಿದ ನಂತರ ಸುಟ್ಟು ಹಾಕಬೇಕು. ಇಲ್ಲದಿದ್ದರೆ ಮುಂದಿನ ಮುಂಗಾರು ಸಾಲಿನಲ್ಲಿ ಕಳೆ ಬೀಜ ದ್ವಿಗುಣಗೊಂಡು ರೈತರಿಗೆ ಮತ್ತಷ್ಟು ಸಂಕಷ್ಟ ತರಲಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.