ADVERTISEMENT

ಆನೇಕಲ್ | ಜನ ತಿರುಗಿ ಬೀಳುವ ಭಯದಿಂದ ಜಿಎಸ್‌ಟಿ ಕಡಿತ: ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 2:06 IST
Last Updated 28 ಸೆಪ್ಟೆಂಬರ್ 2025, 2:06 IST
ಆನೇಕಲ್‌ನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯನ್ನು ಬಿಎಸ್‌ಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಮತ್ತು ರಾಜ್ಯ ಉಸ್ತುವಾರಿ ದಿನೇಶ್ ಗೌತಮ್ ಉದ್ಘಾಟಿಸಿದರು
ಆನೇಕಲ್‌ನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯನ್ನು ಬಿಎಸ್‌ಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಮತ್ತು ರಾಜ್ಯ ಉಸ್ತುವಾರಿ ದಿನೇಶ್ ಗೌತಮ್ ಉದ್ಘಾಟಿಸಿದರು   

ಆನೇಕಲ್: ಕೇಂದ್ರ ಸರ್ಕಾರವೇ ಜಿಎಸ್‌ಟಿ ಜಾಸ್ತಿ ಮಾಡಿ, ಈಗ ಕಡಿಮೆ ಮಾಡಿ ಪ್ರಚಾರ ಪಡೆಯುತ್ತಿದೆ. ದೇಶದ ಜನರು ತಿರುಗಿ ಬೀಳುವ ಭಯದಿಂದ ಜಿಎಸ್‌ಟಿ ಕಡಿಮೆ ಮಾಡಿದೆ ಎಂದು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಹೇಳಿದರು.

ಪಟ್ಟಣದಲ್ಲಿ ಬಹುಸಮಾನ ಸಮಾಜ ಪಕ್ಷದಿಂದ ಶನಿವಾರ ನಡೆದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಜಿಎಸ್‌ಟಿ ಕಡಿಮೆ ಮಾಡಿದ್ದೇವೆ ಎಂದು ಬೊಬ್ಬೆ ಹೊಡೆಯುತ್ತಿದೆ. ಅಧಿಕಾರಕ್ಕೆ ಬಂದ ಬಳಿಕ ದಶಕದಿಂದ ಜಿಎಸ್‌ಟಿ, ಹೆಸರಿನಲ್ಲಿ ಬಿಜೆಪಿ ಜನಸಾಮಾನ್ಯರ ರಕ್ತ ಹೀರಿದೆ. ವೈದ್ಯಕೀಯ ಪರಿಕರ, ಆಹಾರಧಾನ್ಯಗಳ ಮೇಲೆ ಬಿಜೆಪಿಯು ಜಿಎಸ್‌ಟಿ ಹೇರುವ ಮೂಲಕ ಜನರಿಗೆ ತೊಂದರೆ ನೀಡಿತ್ತು ಎಂದು ಹೇಳಿದರು.

ಕೇಂದ್ರ ಸರ್ಕಾರ ಶ್ರೀಮಂತರ ಪರವಾಗಿದೆ. ಶ್ರೀಮಂತರಿಗೆ ಕಡಿಮೆ ತೆರಿಗೆ ವಿಧಿಸುತ್ತದೆ. ಆದರೆ ಬಡವರ ಮೇಲೆ ತೆರಿಗೆಯ ಪ್ರಹಾರ ನಡೆಸುತ್ತದೆ. ಅಂಬಾನಿಗೆ ಒಂದು ಸಾವಿರ ಎಕರೆ ಭೂಮಿಯನ್ನು ಎಕರೆ ₹1ಗೆ ನೀಡಿದೆ. ಕೈಗಾರಿಕೆದ್ಯೋಮಿಗಳಿಗೆ ಜಾಗ ನೀಡುವ ಕೇಂದ್ರ ಸರ್ಕಾರ ಬಡವರಿಗೆ, ಮನೆ ರಹಿತರಿಗೆ ಜಾಗ ನೀಡಲು ಹಿಂಜರಿಯುತ್ತದೆ ಎಂದು ಹೇಳಿದರು.

ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ₹25 ಕೋಟಿ ಜನರು ಬಡತನದಿಂದ ಆಚೆ ಬಂದಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಹಾಗಾದರೇ ಪ್ರತಿ ನ್ಯಾಯಬೆಲೆಯ ಅಂಗಡಿಗಳ ಮುಂದೆ ಉದ್ದನೆಯ ಸರತಿ ಸಾಲುಗಳು ಕಂಡು ಬರುತ್ತಿವೆ. ನಿರುದ್ಯೋಗ, ಬಡತನ, ಬೆಲೆ ಏರಿಕೆಯಿಂದ ಜನರು ಪರದಾಡುವಂತಾಗಿದೆ ಎಂದರು.

ಬಿಎಸ್‌ಪಿ ರಾಜ್ಯ ಉಸ್ತುವಾರಿ ದಿನೇಶ್‌ ಗೌತಮ್‌, ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಬಹುಜನ ಸಮಾಜ ಪಕ್ಷವು ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಹಿಂದುಳಿದವರ ಏಳಿಗೆಗೆ ದುಡಿಯುತ್ತದೆ ಎಂದರು.

ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಅಶೋಕ್‌ ಚಕ್ರವರ್ತಿ, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಸಿ.ನಾಗರಾಜು, ಮುಖಂಡರಾದ ಹನುಮಂತರಾಯಪ್ಪ, ದಿನೇಶ್, ಸಿ.ಕೆ.ರಾಮು, ಶ್ರೀನಿವಾಸ್, ಜಿಗಣಿ ನಂಜಪ್ಪ, ವಸಂತಣ್ಣ, ಎ.ಸಿ.ಸುರೇಶ್, ಚಿಕ್ಕಹಾಗಡೆ ಯಲ್ಲಪ್ಪ, ನಾಗರಾಜು, ರಾಜು, ರಾಮಕೃಷ್ಣ, ನಾರಾಯಣಸ್ವಾಮಿ ಇದ್ದರು.

ಬೆಂಗಳೂರು ನಗರ, ಬೆಂಗಳೂರು ದಕ್ಷಿಣ ಜಿಲ್ಲೆಯ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಅಮೆರಿಕದಲ್ಲಿ ಟ್ರಂಪ್‌ ಗೆಲ್ಲಬೇಕು ಎಂದು ನರೇಂದ್ರ ಮೋದಿ ಹಾಡಿ ಹೊಗಳಿದ್ದರು. ಈಗ ಅಮೆರಿಕಾ ಭಾರತದ ಮೇಲೆಯೇ ಹೆಚ್ಚು ಸುಂಕ ವಿಧಿಸುತ್ತಿದೆ
ಕೃಷ್ಣಮೂರ್ತಿ ಅಧ್ಯಕ್ಷ ಬಿಎಸ್‌ಪಿ
ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್‌ ಪಕ್ಷಗಳು ಒಂದೇ ನಾಣ್ಯದ ಎರಡು ಮುಖ. ಭ್ರಷ್ಟಾಚಾರದಿಂದ ಮುಕ್ತಿ ಪಡೆಯಲು ಬಿಎಸ್‌ಪಿ ಅವಶ್ಯಕ
ದಿನೇಶ್‌ ಗೌತಮ್‌ ಬಿಎಸ್‌ಪಿ ರಾಜ್ಯ ಉಸ್ತುವಾರಿ

ಬಿಜೆ‍ಪಿ ಕಾಂಗ್ರೆಸ್‌ನಿಂದ ಧರ್ಮ ಜಾತಿ ರಾಜಕಾರಣ

ಬಿಜೆಪಿ ಧರ್ಮಾಧಾರಿತ ರಾಜಕೀಯ ಮಾಡುತ್ತಿದೆ. ತಮ್ಮ ಗೆಲುವು ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ಧರ್ಮ–ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡುತ್ತಿದೆ. ರಾಜ್ಯದ ಕಾಂಗ್ರೆಸ್‌ ಪಕ್ಷವು ಜಾತಿಯ ರಾಜಕೀಯ ಮಾಡುತ್ತಿದೆ. ಜಾತಿ–ಜಾತಿಗಳ ನಡುವೆ ಕಂದಕ ಸೃಷ್ಟಿಸಿದೆ. ಸಂವಿಧಾನದ ಆಶಯ ಈಡೇರಿಸಲು ಬಿಎಸ್‌ಪಿ ಅನಿವಾರ್ಯ. ಸಹೋದರತೆ ಸಮಾನತೆಯ ಸಿದ್ಧಾಂತದ ಮೂಲಕ ಪ್ರಬುದ್ಧ ಭಾರತ ನಿರ್ಮಿಸಲು ರಾಜ್ಯದಾದ್ಯಂತ ಸಾರ್ವಜನಿಕರು ಬಿಎಸ್‌ಪಿಯನ್ನು ಬೆಂಬಲಿಸಬೇಕು ಎಂದು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.