
ದೊಡ್ಡಅರಳಗೆರೆ (ಹೊಸಕೋಟೆ): ವೆಯೊಲಿಯ ಕಂಪನಿಯ ಸಿಎಸ್ಆರ್ ನಿಧಿಯಡಿ ಸುರಭಿ ಫೌಂಡೇಶನ್ ಸಹಯೋಗದಲ್ಲಿ ₹8 ಲಕ್ಷ ವೆಚ್ಚದಲ್ಲಿ ತಾಲ್ಲೂಕಿನ ದೊಡ್ಡಅರಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಳಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಸುಣ್ಣ ಬಣ್ಣ, ನೆಲ ಹಾಸಿಗೆ(ಟೈಲ್ಸ್), ಕುಡಿಯುವ ನೀರಿನ ವ್ಯವಸ್ಥೆಯ ಕಾಮಗಾರಿ ಪೂರ್ಣಗೊಳಿಸಿ, ಸುಸಜ್ಜಿತ ಶಾಲಾ ಕಟ್ಟಡವನ್ನು ಬುಧವಾರ ಉದ್ಘಾಟಿಸಲಾಯಿತು.
ವೆಯೊಲಿಯ ಕಂಪನಿಯ ದಕ್ಷಿಣ ಏಷ್ಯಾದ ಹಿರಿಯ ಉಪಾಧ್ಯಕ್ಷ ಗೋಪಾಲ್ ಕೃಷ್ಣ ಮಹೇಶ್ ಭೂತಿ ಮಾತನಾಡಿ, ನಿಜವಾದ ಪ್ರತಿಭೆಗಳು ಕುಗ್ರಾಮಗಳಿಂದಲೇ ಅರಳುತ್ತವೆ. ಪೋಷಕರು ಸಂಕುಚಿತ ಮನೋಭಾವನೆ ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಸಬೇಕು ಎಂದು ಹೇಳಿದರು.
ವೆಯೊಲಿಯ ಕಂಪನಿಯ ದಕ್ಷಿಣ ಏಷ್ಯಾದ ಪೂರೈಕೆ ವ್ಯವಸ್ಥಾಪಕ ತೀರ್ಥಪ್ಪ, ಶಾಲೆಯ ದುಸ್ಥಿತಿ ಗಮನಿಸಿ ಕೊಣೆಗಳ ಮೇಲ್ಛಾವಣಿ ತೆಗೆಸಿ ಕಬ್ಬಿಣದ ಶೀಟ್ ಹಾಕಿಸಿ ಕೊಟ್ಟಿದ್ದೆವು. ಮುಂದಿನ ದಿನಗಳಲ್ಲಿ ನಮ್ಮ ಅನುದಾನದ ಆಧಾರದ ಮೇಲೆ ಮಕ್ಕಳ ಕಲಿಕೆಗೆ ಬೇಕಾಗುವ ಎಲ್ಲಾ ಅಗತ್ಯತೆಗಳನ್ನು ಹಂತ ಹಂತವಾಗಿ ಪೂರೈಸಿಕೊಡಲಾಗುವುದು. ಇದಕ್ಕೆ ಪ್ರತಿಯಾಗಿ ಗ್ರಾಮಸ್ಥರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಕೈಜೋಡಿಸಿ ಎಂದು ಮನವಿ ಮಾಡಿದರು.
ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಗ್ಲೋಬ್, ಚಾರ್ಟ್ ಗೋಡೆ ಗಡಿಯಾರ ಮತ್ತಿತರ ಉಪಕರಣಗಳನ್ನು ಕಂಪನಿಯಿಂದ ವಿತರಿಸಲಿಯಿತು. ಮುಂದಿನ ದಿನಗಳಲ್ಲಿ ಎಲ್ಲಾ ಮಕ್ಕಳು ನೆಲೆದ ಮೇಲೆ ಕುಳಿತುಕೊಳ್ಳದಂತೆ ಡೆಸ್ಕ್ ಮತ್ತು ಕೋಣೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಲಾಯಿತು.
ವೆಯೊಲಿಯ ಕಂಪನಿಯ ದಕ್ಷಿಣ ಏಷ್ಯಾದ ಸಂವಹನ ಮತ್ತು ಮಾರುಕಟ್ಟೆ ಮುಖ್ಯಸ್ಥೆ ರೂಪ ನಾಗರಾಜ್, ಕಾನೂನು ಸಲಹೆಗಾರ್ತಿ ಸರಸ್ಪತಿ, ಒಪೆಕ್ಸ್ ಮತ್ತು ಪಿ2ಪಿ ಅಧಿಕಾರಿ ವಿನುತಾ, ಕಾರ್ಯನಿರ್ವಾಹಕ ವ್ಯವಸ್ಥಾಪಕಾರ ಶ್ರೀನಿವಾಸ್, ಸುರಬಿ ಫೌಂಡೇಶನ್ ಟ್ರಸ್ಟಿ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ವಿ.ಎಸ್. ಪಾಟೀಲ್, ಗ್ರಾ.ಪಂ ಸದಸ್ಯ ಮುನಿಯಪ್ಪ, ರೂಪ ಮಂಜುನಾಥ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮುನಿಯಪ್ಪ, ಸದಸ್ಯ ಆನಂದ್, ಗೋಪಾಲ್, ಮುಖಂಡ ನಾರಾಯಣಪ್ಪ, ಶ್ರೀರಾಮಣ್ಣ, ಚನ್ನಾಕೃಷ್ಣಪ್ಪ ಇದ್ದರು.
ಫಹಣಿ ಮಾಡಿಕೊಡಿ...
ಗುಳ್ಳಹಳ್ಳಿ ಸರ್ಕಾರಿ ಶಾಲೆಗೆ ಸೇರಿದ ಸುಮಾರು 2 ಎಕರೆ ಜಾಗಕ್ಕೆ ಯಾವುದೇ ಫಹಣಿ ಇಲ್ಲ. ಸಂಬಂಧ ಪಟ್ಟ ಇಲಾಖೆಗಳು ಕೂಡಲೇ ಪಹಣಿ ಕೊಡಿಸಿಕೊಟ್ಟರೆ ಶಾಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇಲ್ಲವೆಂದರೆ ಕಾಲ ಹೋದಂತೆ ಸರ್ಕಾರಿ ಶಾಲೆಯ ಜಾಗವನ್ನು ಒತ್ತುವರಿ ಮಾಡುವುದಿಲ್ಲ ಎಂಬ ಯಾವ ಗ್ಯಾರೆಂಟಿಯು ಇಲ್ಲ ಎಂದು ಗ್ರಾ ಪಂ. ಸದಸ್ಯೆ ನರಸಮ್ಮ ನರಸಪ್ಪ ಹೇಳಿದರು. ‘ನಮ್ಮ ಶಾಲೆಗೆ ಶಿಕ್ಷಕರ ಕೊರತೆ ಇದೆ ಕಂಪನಿಯಿಂದ ನಿವೃತ್ತಿ ಹೊಂದುತ್ತಿರುವ ಶಿಕ್ಷಕರೊಬ್ಬರಿಗೆ ಕೇವಲ ಸಾರಿಗೆ ಭತ್ಯೆ ವ್ಯವಸ್ಥೆ ಮಾಡಿಕೊಟ್ಟರೆ ಅವರ ಸೇವೆ ಇನ್ನಷ್ಟು ದಿನಗಳ ಕಾಲ ಶಾಲೆಗೆ ಬಳಸಿಕೊಳ್ಳಬಹುದು’ ಎಂದು ವಿನಂತಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.