ADVERTISEMENT

ವಿದೇಶಿ ಮಹಿಳೆ ಬೆತ್ತಲೆ ಪ್ರಕರಣ ಮೂವರು ಅಪ್ರಾಪ್ತರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 4:42 IST
Last Updated 22 ಜನವರಿ 2020, 4:42 IST
   

ದೊಡ್ಡಬಳ್ಳಾಪುರ: ವಿದೇಶಿ ಮಹಿಳೆಯನ್ನು ಬೆತ್ತಲೆಗೊಳಿಸಿ ತಾಲ್ಲೂಕಿನ ಆಲಹಳ್ಳಿಯ ರಸ್ತೆ ಬದಿಯಲ್ಲಿನ ತೋಟದ ಮನೆ ಸಮೀಪ ಬಿಟ್ಟು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಅಪ್ರಾಪ್ತ ವಯಸ್ಸಿನ ಬಾಲಕರನ್ನು ಬಂಧಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಜ.17ರಂದು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಆಲಹಳ್ಳಿ ಗ್ರಾಮದ ತೋಟದ ಮನೆಗೆ ಬೆತ್ತಲಾಗಿ ಮಹಿಳೆಯೊಬ್ಬರು ಬಂದಿರುವ ಬಗ್ಗೆ ತೋಟದ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಹಿಳೆಯನ್ನು ರಕ್ಷಿಸಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿದ್ದರು.

ವಿದೇಶಿ ಮಹಿಳೆ ನೀಡಿರುವ ಮಾಹಿತಿಯಂತೆ ‘5 ದಿನಗಳ ಹಿಂದೆ ದೆಹಲಿಯಿಂದ ಬೆಂಗಳೂರಿಗೆ ಮೂತ್ರಪಿಂಡದ ಚಿಕಿತ್ಸೆ ಪಡೆಯಲು ನನ್ನ ಪತಿಯ ಸೂಚನೆ ಮೇರೆಗೆ ಬಂದಿದ್ದು, ಬೆಂಗಳೂರಿನ ಚಿಕಿತ್ಸೆ ಪಡೆಯುತ್ತಿದ್ದೆ. ಈ ಸಂದರ್ಭದಲ್ಲಿ ನನ್ನ ಪತಿ ತುರ್ತು ಕೆಲಸ ನಿಮಿತ್ತ ಸ್ವದೇಶಕ್ಕೆ ಹೋಗುವಾಗ ನೈಜಿರಿಯಾದ ಒಬ್ಬಾಕೆಯನ್ನು ಪರಿಚಯಿಸಿ ಇವರ ಜೊತೆ ಇರುವಂತೆ ತಿಳಿಸಿ ಹೋಗಿದ್ದರು. ಜ.16ರಂದು ರಾತ್ರಿ 10 ಗಂಟೆ ಸಮಯದಲ್ಲಿ ಬೆಂಗಳೂರಿನ ಕಮ್ಮನಹಳ್ಳಿ ಬಳಿಯ ಒಂದು ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಬೆಂಗಳೂರಿನ ನವಜ್ಯೋತಿ ಸ್ಟ್ರಿಟ್‌ಗೆ ಹೋಗಲು ಕ್ಯಾಬ್ ಬುಕ್ ಮಾಡಿಕೊಂಡು ಹೊರಟೆ. ಸುಮಾರು ಐದಾರು ಕಿ.ಮೀ ದೂರು ಹೋಗುತ್ತಿದ್ದಂತೆ ಕ್ಯಾಬ್ ಚಾಲಕ ದಾರಿ ಮಧ್ಯೆ ಕ್ಯಾಬ್ ನಿಲ್ಲಿಸಿ ಮತ್ತೆ ಮೂರು ಜನರನ್ನು ಕಾರಿಗೆ ಹತ್ತಿಸಿಕೊಂಡ. ಕಾರಿನಲ್ಲಿದ್ದ ಮೂವರು ಜನ ಅಪರಿಚಿತರು ಚಾಕು ತೋರಿಸಿ ಕುತ್ತಿಗೆ ಹಿಡಿದುಕೊಂಡು ಎಳೆದಾಡಿ ಮೊಬೈಲ್, ಹಣದ ಪರ್ಸ್, ಚಿನ್ನಾಭರಣ ಕಿತ್ತುಕೊಂಡು ಮೈ ಮೇಲಿನ ಬಟ್ಟೆಯನ್ನು ಬಿಚ್ಚಿ, ಬರಿ ಮೈಯಲ್ಲಿ ಬಿಟ್ಟು ಹೋಗಿದ್ದಾರೆ’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ದಾಖಲಾಗಿದೆ. ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.