ADVERTISEMENT

ದೇವನಹಳ್ಳಿ: ಜೆಡಿಎಸ್ ಅಧಿಕಾರಕ್ಕೆ ಬಂದರೆ ‘ಪಂಚರತ್ನ’

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಹೊಸ ಯೋಜನೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 1:05 IST
Last Updated 17 ಜನವರಿ 2021, 1:05 IST
ಕಾರ್ಯಕ್ರಮ ಉದ್ಘಾಟಿಸಿದ ಎಚ್.ಡಿ.ಕುಮಾರಸ್ವಾಮಿ
ಕಾರ್ಯಕ್ರಮ ಉದ್ಘಾಟಿಸಿದ ಎಚ್.ಡಿ.ಕುಮಾರಸ್ವಾಮಿ   

ದೇವನಹಳ್ಳಿ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ’ಪಂಚರತ್ನ‘ ಯೋಜನೆ ಅನುಷ್ಠಾನಕ್ಕೆ ತರಲಾಗುವುದೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.

ಇಲ್ಲಿನ ಹಳೆ ಬಸ್ ನಿಲ್ದಾಣದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಮತ್ತು ಸೋತ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲಿ ಸೂಪರ್‌ ಮುಖ್ಯಮಂತ್ರಿಯೊಬ್ಬರು ಇದ್ದಾರೆ. ಎಲ್ಲದಕ್ಕೂ ಕಮಿಷನ್ ಪಡೆಯುತ್ತಾರೆ’ ಎಂದು ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದೇವೆ ಎಂದು ಮನ್ ಕೀ ಬಾತ್ ನಲ್ಲಿ ಹೇಳುತ್ತಲೇ ಇದ್ದಾರೆ. ಆದರೆ, ರಾಜ್ಯದಲ್ಲಿನ ಆಡಳಿತ ವ್ಯವಸ್ಥೆ ಕಾಣುತ್ತಿಲ್ಲವೆ ಎಂದು ಟೀಕಿಸಿದರು.

‘ಪಂಚರತ್ನ’ ಯೋಜನೆಗಳಲ್ಲಿ ಒಂದಾದ ವಸತಿ ಪ್ರತಿ ಕುಟುಂಬಕ್ಕೆ ಅವಶ್ಯ. ವಸತಿ ರಹಿತ ಗ್ರಾಮಗಳಾಗಬೇಕು. ಶಿಕ್ಷಣ ಕ್ಷೇತ್ರವನ್ನು ಆಧುನಿಕರಿಸಿ ಗುಣಮಟ್ಟದ ಶಿಕ್ಷಣ ಪ್ರತಿ ಮಗುವಿಗೆ ಸಿಗುವಂತಾಗಲು ರಾಜ್ಯದ 6700 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿ ಪ್ರತಿ ಶಾಲೆಗೆ ಮೂಲಸೌಲಭ್ಯ ಒದಗಿಸಲು ₹5 ಕೋಟಿ ಅನುದಾನ ನೀಡಿ ಒಂದೇ ವರ್ಷದಲ್ಲಿ ಕಾರ್ಯಗತಗೊಳಿಸಿದರೆ ಖಾಸಗಿ ಶಾಲೆಯಲ್ಲಿ ದುಪ್ಪಟ್ಟು ವಂತಿಗೆ ನೀಡಿ ಶಿಕ್ಷಣ ಕೊಡಿಸುವ ಜವಾಬ್ದಾರಿ ಪೋಷಕರಿಗೆ ತಪ್ಪಲಿದೆ ಎಂದು ಹೇಳಿದರು.

ಪ್ರತಿ ಗ್ರಾಮಪಂಚಾಯಿತಿ ಕೇಂದ್ರದಲ್ಲಿ 40 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿ ಡಯಾಲಿಸಿಸ್ ವ್ಯವಸ್ಥೆ ಮತ್ತು ಅಗತ್ಯ ಸಿಬ್ಬಂದಿ ನಿಯೋಜಿಸುವ ಉದ್ದೇಶ ಇದೆ. ಸಾಮಾಜಿಕ ಸೇವಾ ಭದ್ರತೆ ಯೋಜನೆಯಡಿ ಅಂಗವಿಕಲರು, ವಿಧವೆಯರು, ವಯೋವೃದ್ಧರಿಗೆ ಮಾಸಿಕ ಕನಿಷ್ಠ ₹5ಸಾವಿರ ನೀಡಿ ಆರ್ಥಿಕ ಮತ್ತು ಆರೋಗ್ಯ ಸುಧಾರಣೆಗೆ ಒತ್ತು ನೀಡುವ ಚಿಂತನೆ ಇದೆ ಎಂದು ಹೇಳಿದರು. ರೈತರ ರಾಗಿ ಖರೀದಿಯಲ್ಲೂ ಲಂಚ ನೀಡಬೇಕು. ಈ ಸರ್ಕಾರದಲ್ಲಿ ಅಧಿಕಾರಿಗಳಿಗೆ ಕಡಿವಾಣವಿಲ್ಲ. ರೈತರ, ಬಡವರ ಬಗ್ಗೆ ಚಿಂತೆ ಇಲ್ಲ. ಹಣ ಹೇಗೆ ಲೂಟಿಮಾಡಬೇಕು ಎಂದು ಸ್ಪರ್ಧೆ ನಡೆಯುತ್ತಿದೆ ಎಂದರು.

’ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗಲಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರು ಕಟ್ಟಿದ ಪಕ್ಷವನ್ನು ನಾನು ಸಾಯುವವರೆಗೆ ವಿಲೀನ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಡೀ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ’ ಎಂದು ಹೇಳಿದರು.

‘2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದೇವನಹಳ್ಳಿಯಲ್ಲಿ ಮೊದಲ ಬಾರಿಗೆ ಹೆಣ್ಣು ಮಕ್ಕಳಿಗೆ ಸೈಕಲ್ ವಿತರಿಸಿದ್ದೆ. ಆನ್ ಲೈನ್ ಲಾಟರಿ ರದ್ದು ಮಾಡಿದೆ. ಪ್ರೌಢಶಾಲೆವರೆಗೆ ಬಿಸಿಯೂಟ ವಿಸ್ತರಿಸಿದೆ. ಕಲಬೆರಕೆ ಸಾರಾಯಿ ನಿಷೇಧ ಮಾಡಿದೆ. ಒಳ್ಳೆಯ ಯೋಜನೆಗಳಿದ್ದರೂ ಪ್ರಚಾರ ಸಿಗಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಂಪೂರ್ಣ ಬೆಂಬಲವಿಲ್ಲದಿದ್ದರೂ ಧೈರ್ಯ ಮಾಡಿ ₹25ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿ ಇಡೀ ದೇಶಕ್ಕೆ ರಾಜ್ಯ ಮಾದರಿಯಾಗುವಂತೆ ಮಾಡಿದೆ. ಬಿಜೆಪಿ ಆಡಳಿತ ಸರ್ಕಾರ ರೈತರಿಗೆ ಏನು ಮಾಡಿದೆ’ ಎಂದು ಪ್ರಶ್ನಿಸಿದರು.

ಸವಿತ ಸಮಾಜ, ಮಡಿವಾಳರು, ಆಟೊ ಚಾಲಕರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಸರ್ಕಾರ ಹೇಳಿತ್ತು. ಕೊರೊನಾ ಸಂದರ್ಭದಲ್ಲಿ ತರಕಾರಿ, ದ್ರಾಕ್ಷಿ ಮತ್ತು ಹೂವು ಬೆಳೆಗಾರರಿಗೆ ಪರಿಹಾರ ನೀಡುವುದಾಗಿ ಹೇಳಿದ ಸರ್ಕಾರ ಎಷ್ಟು ಫಲಾನುಭವಿಗಳು ಪ್ರಯೋಜನ ಪಡಡೆದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

2011ರಲ್ಲಿ ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದಾಗ ಎತ್ತಿಹೊಳೆ ಯೋಜನೆ ಒಂದೇ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. 2021 ಆದರೂ ನೀರು ಹರಿಯಲಿಲ್ಲ, ಹಣ ಹರಿಯುತ್ತಿದೆ ಎಂದು ಆರೋಪಿಸಿದರು.

ಜೆಡಿಎಸ್ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ಬೀರಪ್ಪ, ಪರಿಶಿಷ್ಟ ಪಂಗಡ ಘಟಕ ಅಧ್ಯಕ್ಷ ಕೆ.ಶಿವಣ್ಣ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ, ತಾಲ್ಲೂಕು ಘಟಕ ಅಧ್ಯಕ್ಷ ಬಿ.ಶ್ರೀನಿವಾಸ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ರವೀಂದ್ರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.