ADVERTISEMENT

ದೊಡ್ಡಬಳ್ಳಾಪುರ | ಹೆಲ್ಮೆಟ್‌ ಕಡ್ಡಾಯ: ಮೂರೇ ದಿನದಲ್ಲಿ 122 ಪ್ರಕರಣ

ದೊಡ್ಡಬಳ್ಳಾಪುರದಲ್ಲಿ ಬಿರುಸುಗೊಂಡ ಹೆಲ್ಮೆಟ್‌ ಮಾರಾಟ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 6:55 IST
Last Updated 5 ಜನವರಿ 2026, 6:55 IST
<div class="paragraphs"><p>ದೊಡ್ಡಬಳ್ಳಾಪುರದ ಡಿ.ಕ್ರಾಸ್ ಬಳಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರಿಂದ ದಂಡ ವಿಧಿಸುತ್ತಿರುವುದು</p></div>

ದೊಡ್ಡಬಳ್ಳಾಪುರದ ಡಿ.ಕ್ರಾಸ್ ಬಳಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರಿಂದ ದಂಡ ವಿಧಿಸುತ್ತಿರುವುದು

   

ದೊಡ್ಡಬಳ್ಳಾಪುರ: ನಗರ ಸೇರಿದಂತೆ ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ಬೈಕ್‌ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿದ ಮೂರೇ ದಿನದಲ್ಲಿ 122 ಪ್ರಕರಣ ದಾಖಲಿಸಿ, ₹61 ಸಾವಿರ ದಂಡ ವಸೂಲಿ ಮಾಡಲಾಗಿದೆ.

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸುವುದನ್ನು ಜ.1ರಿಂದಲೇ ಕಡ್ಡಾಯಗೊಳಿಸಲಾಗಿದ್ದು, ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಹೆಲ್ಮೆಟ್‌ ಧರಿಸಿ ಬೈಕ್‌ ಚಲಾಯಿಸುವವರ ಸಂಖ್ಯೆ ಹೆಚ್ಚಳವಾಗಿದೆ. ರಸ್ತೆ ಬದಿಗಳಲ್ಲಿ ಹೆಲ್ಮೆಟ್‌ ಮಾರಾಟವು ಬಿರುಸುಗೊಂಡಿದೆ.

ADVERTISEMENT

ಇತ್ತೀಚೆಗೆ ಪೊಲೀಸ್ ಇಲಾಖೆ ದೊಡ್ಡಬಳ್ಳಾಪುರ ಉಪ ವಿಭಾಗದಿಂದ ನಡೆದ ಸಂಚಾರ ಸುರಕ್ಷತಾ ಸಪ್ತಾಹ-2025ರ ಅಡಿಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಗ್ಗೆ ಅರಿವು ಮೂಡಿಸಿ ಉಚಿತ ಹೆಲ್ಮೆಟ್ ವಿತರಣೆ ಮಾಡಲಾಗಿತ್ತು. ಪೊಲೀಸರು ಹೆಲ್ಮೆಟ್ ಧರಿಸಿ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬೈಕ್ ನಲ್ಲಿ ಸಂಚರಿಸಿ ಜನರಿಗೆ ಹೆಲ್ಮೆಟ್ ಧರಿಸುವ ಕುರಿತು ಜಾಗೃತಿ ಮೂಡಿಸಿದ್ದರು.

ಈ ವೇಳೆ ಡಿವೈಎಸ್‌ಪಿ ಪಾಂಡುರಂಗ, ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಜೀವ ರಕ್ಷಣೆ ಹಾಗೂ ಸುರಕ್ಷತೆಗೆ ಹೆಲ್ಮೆಟ್‌ ಬಳಸಬೇಕು. ಇಲ್ಲವಾದಲ್ಲಿ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಗರದ ಡಿ.ಕ್ರಾಸ್‌ ವೃತ್ತ, ಪ್ರವಾಸಿ ಮಂದಿರ ವೃತ್ತ, ಬಸ್‌ ನಿಲ್ದಾಣದ ಮುಂತಾದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಹೆಲ್ಮೆಟ್ ಹಾಕದ ದ್ವಿಚಕ್ರ ವಾಹನ ಸವಾರರಿಗೆ ದಂಡ ಹಾಕಿ ಎಚ್ಚರಿಕೆ ನೀಡುತ್ತಿದ್ದಾರೆ. ರಸ್ತೆ ಅಪಘಾತಗಳು ಹೆಚ್ಚಾಗಿದ್ದು, ಹೆಲ್ಮೆಟ್ ಧರಿಸದೇ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪಿರುವ ಪ್ರಕರಣಗಳು ನಡೆಯುತ್ತಿವೆ.

ಯಾವುದೇ ಕಾರಣ ಹೇಳದೆ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಈಗ ಹೆಲ್ಮೆಟ್ ಹಾಕಿಕೊಂಡು ಸಂಚರಿಸುವ ವಾಹನ ಸವಾರರ ಸಂಖ್ಯೆಯು ನಗರದಲ್ಲಿ ಹೆಚ್ಚಾಗಿದೆ.

ಹೆಚ್ಚಾದ ಹೆಲ್ಮೆಟ್

ಅಂಗಡಿಗಳು ಹೆಲ್ಮೆಟ್ ಕಡ್ಡಾಯಗೊಂಡಿರುವ ಬೆನ್ನಲ್ಲೆ ನಗರದ ವಿವಿಧೆಡೆಯ ರಸ್ತೆ ಬದಿಗಳಲ್ಲಿ ಹತ್ತಾರು ಕಡೆಗಳಲ್ಲಿ ಹೆಲ್ಮೆಟ್ ಮಾರಾಟವು ಬಿರುಸಿಗೊಂಡಿದ್ದು ಬೈಕ್‌ ಸವಾರರು ಹೆಲ್ಮೆಟ್ ಖರೀದಿಸುತ್ತಿದ್ದಾರೆ. ಇದರೊಂದಿಗೆ ಶಾಲೆಗೆ ಹೋಗುವ ಮಕ್ಕಳಿಗೂ ಸಹ ಸಣ್ಣ ಹೆಲ್ಮೆಟ್‌ಗಳನ್ನು ಖರೀದಿಸುತ್ತಿದ್ದಾರೆ. ₹350ಗಳಿಂದ ₹1500ಗಳವರೆಗೆ ವಿವಿಧ ಕಂಪನಿಗಳ ಹೆಲ್ಮೆಟ್‌ಗಳು ಮಾರಾಟವಾಗುತ್ತಿವೆ.

ದೊಡ್ಡಬಳ್ಳಾಪುರದ ರಸ್ತೆ ಬದಿಗಳಲ್ಲಿ ಹೆಲ್ಮೆಟ್‌ ಮಾರಾಟ ಮಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.