ADVERTISEMENT

ದೊಡ್ಡಬಳ್ಳಾಪುರ | ಘಾಟಿ ದೇಗುಲ ಸಮಿತಿಗೆ ತಡೆ

ವ್ಯವಸ್ಥಾಪನಾ ಸಮಿತಿ ನಿಯಮ ಬಾಹಿರ ಎಂದು ಹೈಕೋರ್ಟ್‌ಗೆ ಮೊರೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 4:29 IST
Last Updated 19 ಮಾರ್ಚ್ 2023, 4:29 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿ ಆಯ್ಕೆಯ ತಡೆಯಾಜ್ಞೆ ಪ್ರತಿಯನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಅವರಿಗೆ ಸಲ್ಲಿಸಲಾಯಿತು
ದೊಡ್ಡಬಳ್ಳಾಪುರ ತಾಲ್ಲೂಕಿನ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿ ಆಯ್ಕೆಯ ತಡೆಯಾಜ್ಞೆ ಪ್ರತಿಯನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಅವರಿಗೆ ಸಲ್ಲಿಸಲಾಯಿತು   

ತೂಬಗೆರೆ (ದೊಡ್ಡಬಳ್ಳಾಪುರ): ಘಾಟಿ ಕ್ಷೇತ್ರದ ಶ್ರೀಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ರಚಿತವಾಗಿದ್ದ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಹೈಕೋರ್ಟ್‌ ಮಾರ್ಚ್‌ 14 ರಂದು ತಡೆಯಾಜ್ಞೆ ನೀಡಿದೆ.

2021ರಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಕರೆಯಲಾಗಿತ್ತು. ಅದರಂತೆ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಹಾಗೂ ಬೆಂಗಳೂರಿನಿಂದ 96 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳಿಂದ ಯಾವುದೇ ಪ್ರಕ್ರಿಯೆ ನಡೆಸದ ಸರ್ಕಾರ ಫೆ. 21ರಂದು ವ್ಯವಸ್ಥಾಪನಾ ಸಮಿತಿ ರಚಿಸಿತು. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾದ ರೋಹಿಣಿ ಸಿಂಧೂರಿ ಅವರು ಕಡ್ಡಾಯ ರಜೆ ಮೇಲೆ ತೆರಳುವ ಹಿಂದಿನ ದಿನ ಐದು ಜನರ ಸಮಿತಿ ರಚಿಸಿ ಆದೇಶಿಸಿದ್ದಾರೆ. ಇದು ಸರಿಯಾದ ಕ್ರಮವಾಗಿಲ್ಲ ಎಂದು ಎಂದು ಅರ್ಜಿದಾರರು ವಾದಿಸಿದ್ದರು.

ಅರ್ಜಿ ಸಲ್ಲಿಸಿ ಎರಡು ವರ್ಷಗಳಾದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಅರ್ಜಿ ಸಲ್ಲಿಸಿದವರ ಬಗ್ಗೆ ಪೊಲೀಸ್ ಪರಿಶೀಲನೆ ಕೂಡ ನಡೆದಿತ್ತು. ಹೀಗಿದ್ದರೂ ಯಾವುದೇ ಮಾಹಿತಿ ನೀಡದೇ 2023 ಫೆ.21 ರಂದು ಏಕಾಏಕಿ ಐದು ಜನರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿ ರಚಿಸಿತ್ತು. ಇದನ್ನು ಪ್ರಶ್ನಿಸಿ ಇ.ಮಂಜುನಾಥ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಾರ್ಚ್‌ 14 ರಂದು ತಡೆಯಾಜ್ಞೆ ನೀಡಿದೆ. ವ್ಯವಸ್ಥಾಪನಾ ಸಮಿತಿ ಯಾವುದೇ ಸಭೆ, ಸಮಾರಂಭ ಕಾರ್ಯ ನಡೆಸುವಂತಿಲ್ಲ ಆದೇಶಿಸಿದೆ.

ದೇಗುಲ ಇಒಗೆ ಆದೇಶ ಪ್ರತಿ ಸಲ್ಲಿಕೆ: ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ನ್ಯಾಯಾಲಯದ ಆದೇಶ ಪ್ರತಿಯನ್ನು ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಅವರಿಗೆ ತಡೆಯಾಜ್ಞೆ ಆದೇಶ ಪ್ರತಿ ಸಲ್ಲಿಸಿದ ಗ್ರಾಮದ ಮುಖಂಡ ಜಗನ್ನಾಥ್ ಮಾತನಾಡಿ, ವ್ಯವಸ್ಥಾಪನಾ ಸಮಿತಿಯಲ್ಲಿ 9 ಜನ ಸದಸ್ಯರು ಇರಬೇಕು. ಇದರಲ್ಲಿ ಇಬ್ಬರು ಮಹಿಳೆಯರಿಗೆ ಮೀಸಲಾತಿ ಕೊಡಬೇಕಿತ್ತು. ಆದರೆ ರಾಜ್ಯ ಧಾರ್ಮಿಕ ಪರಿಷತ್ ಅಭಿಪ್ರಾಯವನ್ನೂ ಪಡೆಯದೇ ಏಕಾಏಕಿ ಆಯುಕ್ತರು ತೀರ್ಮಾನ ಕೈಗೊಂಡಿದ್ದರು. ಈ ದಿಸೆಯಲ್ಲಿ ಮೇಲಿನಜೂಗಾನಹಳ್ಳಿಯ ಇ.ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಫೆ.21 ರಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾದ ರೋಹಿಣಿ ಸಿಂಧೂರಿ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದರು. ಜೆಡಿಎಸ್ ಮುಖಂಡ ಗೌರೀಶ್,ತೂಬಗೆರೆ ಗ್ರಾ.ಪಂ. ಸದಸ್ಯ ಮಧು, ಮುಖಂಡರಾದ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.