ADVERTISEMENT

ಶಾಲೆ ಪ್ರವೇಶದ್ವಾರದಲ್ಲೇ ಹಿಜಾಬ್‌ ತೆಗಿಸಿದ ಪೊಲೀಸರು, ವಾಪಸ್‌ ಕರೆದೊಯ್ದ ಪೋಷಕರು

ಸೂಲಿಬೆಲೆ: ವಿದ್ಯಾರ್ಥಿನಿಯರ ಹಿಜಾಬ್ ತೆಗೆಸಿದ ಪೊಲೀಸ್ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 5:13 IST
Last Updated 15 ಫೆಬ್ರುವರಿ 2022, 5:13 IST
ಸೂಲಿಬೆಲೆ ಸರ್ಕಾರಿ ಉರ್ದು ಶಾಲೆ ಆವರಣದ ಪ್ರವೇಶದ್ವಾರದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಎಸ್.ಡಿ.ಎಂ.ಸಿ ಪದಾಧಿಕಾರಿಗಳು
ಸೂಲಿಬೆಲೆ ಸರ್ಕಾರಿ ಉರ್ದು ಶಾಲೆ ಆವರಣದ ಪ್ರವೇಶದ್ವಾರದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಎಸ್.ಡಿ.ಎಂ.ಸಿ ಪದಾಧಿಕಾರಿಗಳು   

ಸೂಲಿಬೆಲೆ: ಸರ್ಕಾರಿ ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರಿಗೆ ಶಾಲೆಯ ಆವರಣದ ಪ್ರವೇಶದ್ವಾರದ ಬಳಿಯೇ ಹಿಜಾಬ್‌ ತೆಗಿಸಿದ ಪೊಲೀಸ್ ಇಲಾಖೆಯ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಹಲವು ಪೋಷಕರು ತಮ್ಮ ಮಕ್ಕಳನ್ನು ವಾಪಸ್‌ ಕರೆದುಕೊಂಡು ಹೋದರು.

ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಮತ್ತು ಶಿಕ್ಷಕಿಯರು, ಪೋಷಕರ ಮನವೊಲಿಸಲು ಮುಂದಾದರು. ಯಾವುದಕ್ಕೂ ಜಗ್ಗದ ಹಲವು ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಮನೆಗಳಿಗೆ ತೆರಳಿದರು.

ಶಾಲೆಯ ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಶಿಕ್ಷಣ ಸಂಯೋಜಕಿ ಎನ್.ಎಂ ಆಶಾ, ಮುಖ್ಯ ಶಿಕ್ಷಕಿಯರು, ಸಬ್ ಇನ್‌ಸ್ಪೆಕ್ಟರ್‌ ರಮೇಶ ಗುಗ್ಗುರಿ, ಸಿ.ಆರ್.ಪಿ, ಮಂಜುನಾಥ ಹಾಗೂ ಪೋಷಕರ ಸಭೆಯನ್ನು ಉರ್ದು ಶಾಲೆಯಲ್ಲಿ ನಡೆಸಲಾಯಿತು.

ADVERTISEMENT

‘ಸೋಮವಾರ ಬೆಳಗ್ಗೆ ಶಾಲೆಗೆ ವಿದ್ಯಾರ್ಥಿಗಳು ಬಂದ ನಂತರ ಪ್ರಾರ್ಥನೆ ಮುಗಿದ ಮೇಲೆ, ವಿದ್ಯಾರ್ಥಿನಿಯರಿಗೆ ನ್ಯಾಯಾಲಯದ ಆದೇಶ ಪಾಲಿಸುವಂತೆ ಸೂಚಿಸಿ ಕ್ರಮಕೈಗೊಳ್ಳುವ ಬಗ್ಗೆ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕಿಯರೊಂದಿಗೆ ಭಾನುವಾರ ಗೂಗಲ್ ಮೀಟ್ ನಲ್ಲಿ ಸಭೆ ನಡೆಸಲಾಗಿತ್ತು. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲಿಸಲು ಶಾಲಾ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಬದ್ಧರಾಗಿದ್ದರು’ ಎಂದು ಅಧ್ಯಕ್ಷ ಇನಾಯತ್ ಪಾಷ ತಿಳಿಸಿದರು.

‘ಕೊರೊನಾ ಆವರಿಸಿದ ಪರಿಣಾಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಆತಂಕದ ವಾತಾವರಣದಿಂದ ಮಕ್ಕಳು ಭಯಪಟ್ಟಿದ್ದಾರೆ. ನ್ಯಾಯಾಲಯದ ಆದೇಶ ಹೊರಬಿಳುವವರೆಗೂ ಮಕ್ಕಳು ಮನೆಯಲ್ಲಿ ಇರಲಿ. ನ್ಯಾಯಾಲಯದ ಆದೇಶ ಬರುವವರೆಗೂ ಸರ್ಕಾರ ಶಾಲೆಗೆ ರಜೆಯನ್ನು ಘೋಷಿಸಲಿ’ ಎಂದು ಪೋಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಶಾಲೆ ಆವರಣದ ಪ್ರವೇಶ ದ್ವಾರದಲ್ಲಿಯೇ ಶಿಕ್ಷಕಿಯರಿಗೆ ಬುರ್ಕಾ ತೆಗೆಯುವಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಒತ್ತಾಯಿಸಿದ್ದು ಸರಿಯಾದ ಕ್ರಮವಲ್ಲ’ ಎಂದು ಹೆಸರನ್ನು ಹೇಳಲು ಇಚ್ಚಿಸದ ಶಿಕ್ಷಕಿಯರು ಬೇಸರವನ್ನು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.