ADVERTISEMENT

ದೊಡ್ಡಬಳ್ಳಾಪುರ: ನೇಕಾರರ ಸೀರೆ ಮಾರಾಟಕ್ಕೆ ಹೈಟೆಕ್‌ ನೇಕಾರ ಭವನ

ದೊಡ್ಡಬಳ್ಳಾಪುರದ ಡಿ.ಕ್ರಾಸ್‌ ಸಮೀಪ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಧೀರಜ್‌

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 4:55 IST
Last Updated 8 ಜನವರಿ 2026, 4:55 IST
ದೊಡ್ಡಬಳ್ಳಾಪುರದ ಡಿ.ಕ್ರಾಸ್‌ ಸಮೀಪ ಸ್ಥಳೀಯವಾಗಿ ನೇಯುವ ಸೀರೆಗಳ ಮಾರಾಟಕ್ಕೆ ನೇಕಾರರ ಭವನ ನಿರ್ಮಾಣ ಕಾಮಗಾರಿಗೆ ಬುಧವಾರ ಶಾಸಕ ಧೀರಜ್‌ ಮುನಿರಾಜ್‌ ಭೂಮಿ ಪೂಜೆ ನೆರವೇರಿಸಿದರು
ದೊಡ್ಡಬಳ್ಳಾಪುರದ ಡಿ.ಕ್ರಾಸ್‌ ಸಮೀಪ ಸ್ಥಳೀಯವಾಗಿ ನೇಯುವ ಸೀರೆಗಳ ಮಾರಾಟಕ್ಕೆ ನೇಕಾರರ ಭವನ ನಿರ್ಮಾಣ ಕಾಮಗಾರಿಗೆ ಬುಧವಾರ ಶಾಸಕ ಧೀರಜ್‌ ಮುನಿರಾಜ್‌ ಭೂಮಿ ಪೂಜೆ ನೆರವೇರಿಸಿದರು   
10 ಗುಂಟೆ ಪ್ರದೇಶದಲ್ಲಿ ನೇಕಾರ ಭವನ | ಎರಡು ಹಂತಸ್ತಿನಲ್ಲಿ 30 ಮಳಿಗೆ ನಿರ್ಮಾಣ | ಮೊದಲ ಹಂತದಲ್ಲಿ ₹1.25 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭ

ದೊಡ್ಡಬಳ್ಳಾಪುರ: ಇಲ್ಲಿನ ನೇಕಾರರು ನೇಯುವ ಸೀರೆಗಳ ಮಾರಾಟಕ್ಕಾಗಿ ಹೈಟೆಕ್‌ ಮಾದರಿಯಲ್ಲಿ ವಾಣಿಜ್ಯ ಮಳಿಗೆಗಳ ನೇಕಾರ ಭವನ ನಿರ್ಮಾಣಕ್ಕೆ ಬುಧವಾರ ನಗರದ ಹಿಂದೂಪುರ ಬೆಂಗಳೂರು ರಾಜ್ಯ ಹೆದ್ದಾರಿಯ ಡಿ.ಕ್ರಾಸ್‌ ಸಮೀಪ ಶಾಸಕ ಧೀರಜ್‌ ಮುನಿರಾಜ್‌ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಧರ್ಮಾವರಂ, ಕಂಚಿ ಸೇರಿದಂತೆ ಇತರೆಡೆಗಳಲ್ಲಿ ಸ್ಥಳೀಯವಾಗಿ ನೇಯುವ ಸೀರೆಗಳ ಮಾರಾಟಕ್ಕಾಗಿಯೇ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಅದೇ ಮಾದರಿಯಲ್ಲಿಯೇ ರಾಜ್ಯ ಹೆದ್ದಾರಿ ಅಂಚಿನ 10 ಗುಂಟೆ ಪ್ರದೇಶದಲ್ಲಿ ಎರಡು ಹಂತಸ್ತಿನಲ್ಲಿ 30 ಮಳಿಗೆಗಳನ್ನು ನಿರ್ಮಿಸಲಾಗುವುದು. ಮೊದಲ ಹಂತದಲ್ಲಿ ₹1.25 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಜವಳಿ ಇಲಾಖೆಯಿಂದ ಹಂತ ಹಂತವಾಗಿ ಹಣ ತರುವ ಮೂಲಕ ಭವನದ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸಲಾಗುವುದು. ಸ್ಥಳೀಯವಾಗಿ ನೇಯುವ ಸೀರೆಗಳ ಮಾರಾಟಕ್ಕೆ ಹಾಗೂ ಸ್ಥಳೀಯ ನೇಕಾರರಿಗೆ ಮಾತ್ರ ಇಲ್ಲಿನ ಮಳಿಗೆಗಳನ್ನು ನೀಡಲಾಗುವುದು ಎಂದರು.

ADVERTISEMENT

ಸಮಾರಂಭಗಳನ್ನು ನಡೆಸಲು ನೇಕಾರ ಭವನ ನಿರ್ಮಾಣಕ್ಕಾಗಿ ಕುರುಬರಹಳ್ಳಿ ಗ್ರಾಮದ ರಾಷ್ಟ್ರಿಯ ಹೆದ್ದಾರಿಗೆ ಸಮೀಪದಲ್ಲೇ ಇರುವ ರೇಷ್ಮೆ ಇಲಾಖೆಗೆ ಸೇರಿರುವ ಜಮೀನಿನಲ್ಲಿ 2 ಎಕರೆ ಮಂಜೂರು ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಭವನ ನಿರ್ಮಾಣಕ್ಕೂ ಸರ್ಕಾರದಿಂದ ಅನುದಾನ ಪಡೆಯಲಾಗುವುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾಆನಂದ್‌, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್‌.ರವಿಕುಮಾರ್‌, ದೇವಾಂಗ ಮಂಡಳಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್‌  ಇದ್ದರು. 

ಫೆ.21ರಂದು ಸೀರೆ ಮಾರಾಟ ಮೇಳ

ಕೊಂಗಾಡಿಯಪ್ಪ ಜನ್ಮದಿನಾಚರಣೆ ಅಂಗವಾಗಿ ಫೆ.21ರಂದು ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಸ್ಥಳೀಯ ನೇಕಾರರು ನೇಯ್ದಿರುವ ಸೀರೆಗಳ ಬೃಹತ್‌ ಮಾರಾಟ ಮೇಳ ಆಯೋಜಿಸಲು ಸಿದ್ಧತೆ ನಡೆಯುತ್ತಿವೆ. ಮೇಳದಿಂದ ಬಿಕ್ಕಟ್ಟಿಗೆ ಸಿಲುಕಿರುವ ನೇಕಾರಿಕೆ ಉಳಿವಿಗೆ ಹಾಗೂ ಸೀರೆಗಳ ಮಾರಾಟಕ್ಕೆ ವೇದಿಕೆ ದೊರೆಯಲಿದೆ. ದೊಡ್ಡಬಳ್ಳಾಪುರ ಸೀರೆಗೆ ರಾಜ್ಯಮಟ್ಟದಲ್ಲಿ ಬ್ರ್ಯಾಂಡ್‌ ದೊರೆಯಲು ಸಹಕಾರಿಯಾಗಲಿದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.