ADVERTISEMENT

ಹೊಸಕೋಟೆ: ಹಿಂದೂ–ಮುಸ್ಲಿಮರಿಂದ ಗಣೇಶೋತ್ಸವ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2023, 5:00 IST
Last Updated 23 ಸೆಪ್ಟೆಂಬರ್ 2023, 5:00 IST
ಹೊಸಕೋಟೆ ತಾಲ್ಲೂಕಿನ ಚಿಕ್ಕಹುಲ್ಲೂರು ಗ್ರಾಮದಲ್ಲಿ ನಡೆಯುತ್ತಿರುವ ಭಾವೈಕ್ಯ ಗಣೇಶೋತ್ಸವದಲ್ಲಿ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಿ ಪೂಜೆ ಸಲ್ಲಿಸಿದರು
ಹೊಸಕೋಟೆ ತಾಲ್ಲೂಕಿನ ಚಿಕ್ಕಹುಲ್ಲೂರು ಗ್ರಾಮದಲ್ಲಿ ನಡೆಯುತ್ತಿರುವ ಭಾವೈಕ್ಯ ಗಣೇಶೋತ್ಸವದಲ್ಲಿ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಿ ಪೂಜೆ ಸಲ್ಲಿಸಿದರು   

ಹೊಸಕೋಟೆ: ಚಿಕ್ಕಹುಲ್ಲೂರಿನಲ್ಲಿ ಹಿಂದೂ-ಮುಸ್ಲಿಂ ಸಮುದಾಯ ಸೇರಿ ವಿನಾಯಕ ಗೆಳೆಯರ ಬಳಗದ ನೇತೃತ್ವದಲ್ಲಿ ಗಣೇಶೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಶರತ್ ಬಚ್ಚೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಚಿಕ್ಕಹುಲ್ಲೂರು ಗ್ರಾಮದಲ್ಲಿ ನಡೆಯುತ್ತಿರುವ ಭಾವೈಕ್ಯ ಗಣೇಶೋತ್ಸವದಲ್ಲಿ ಅವರು ಮಾತನಾಡಿದರು.

ಸಮುದಾಯಗಳನ್ನು ಒಗ್ಗೂಡಿಸುವ ದೃಷ್ಟಿಯಿಂದ ಬಾಲಗಂಗಾಧರ್ ನಾಥ್ ತಿಲಕರು ಗಣೇಶೋತ್ಸವವನ್ನು ಗಲ್ಲಿಗಳಲ್ಲಿಯೂ ಆಚರಿಸುವ ಸಂಸ್ಖೃತಿ ಆರಂಭಿಸಿದರು. ಇದರ ಪರಿಣಾಮವಾಗಿ ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವವರ ನಡುವೆಯೂ ಗ್ರಾಮಗಳಲ್ಲಿ ಭಾವೈಕ್ಯತೆಯ ಗಣೇಶೋತ್ಸವ ನಡೆಸುತ್ತಿರುವುದು ಒಗ್ಗಟ್ಟಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶ್ಲಾಘಿಸಿದರು.

ADVERTISEMENT

ಚಿಕ್ಕಹುಲ್ಲೂರು ಸರ್ವೇ ನಂ. 30ರಲ್ಲಿ ಸುಮಾರು 20 ವರ್ಷಗಳಿಂದ 4 ಎಕರೆ 30 ಗುಂಟೆ ಜಾಗದಲ್ಲಿ ಆಶ್ರಯ ಯೋಜನೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಈ ಸಂಬಂಧ ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಿ. ಶೀಘ್ರವೇ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮದಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದರಿಂದ ಸರ್ವೆ ನ.  20ರಲ್ಲಿ 10 ಎಕರೆ ಜಾಗವನ್ನು ಆಶ್ರಯ ಯೋಜನೆಗೆ ಮಂಜೂರು ಮಾಡಿಸಿಕೊಡಲಾಗುವುದು ಎಂದು ತಿಳಿಸಿದರು.

ತಾ.ಪಂ ಮಾಜಿ ಸದಸ್ಯ ರಾಮೇಗೌಡ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಲ್‌ಎನ್‌ಟಿ ಮಂಜುನಾಥ್, ಗ್ರಾ.ಪಂ ಉಪಾಧ್ಯಕ್ಷ ಆಂಜಿನಪ್ಪ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ವಸಂತ್ ಕುಮಾರ್, ಎಂಪಿಸಿಎಸ್ ನಿರ್ದೇಶಕ ಚಂದ್ರಶೇಖರ್, ಯುವ ಮುಖಂಡರಾದ ಸಿಕೆಎಂ ಮಂಜುನಾಥ್, ರಮೇಶ್, ನಾಸೀರ್ ಪಾಷ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.