
ಹೊಸಕೋಟೆ: ತಾಲ್ಲೂಕಿನ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲೆಂದು 2022ರಲ್ಲಿ ನಿರ್ಮಾಣ ಆರಂಭವಾದ 100 ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆಯಾಗದೆ ದೂಳು ಹಿಡಿದಿದೆ. ಈ ವಿಳಂಬಕ್ಕೆ ರಾಜಕೀಯ ಕಾರಣಗಳೇ ಮೂಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
ನಗರದ ಸಮೀಪದ ಕೊಳತೂರು ಗ್ರಾಮದಲ್ಲಿ 4 ಎಕರೆ 20 ಗುಂಟೆ ವಿಸ್ತೀರ್ಣದಲ್ಲಿ ₹130 ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಿದೆ. ಆಗಿನ ಬಿಜೆಪಿ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಮತ್ತು ಪೌರಾಡಳಿತ ಸಚಿವರಾಗಿದ್ದ ಎಂಟಿಬಿ ನಾಗರಾಜ್ ಅವರು 2022ರಲ್ಲಿ ಭೂಮಿಪೂಜೆ ನೆರವೇರಿಸಿದ್ದರು. ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ನಿರ್ಮಾಣ ಕಾರ್ಯ ಮುಂದುವರಿದು ಪೂರ್ಣಗೊಂಡಿದೆ.
ಆದರೆ, ಉದ್ಘಾಟನೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಬಡವರ ಬದುಕಿಗೆ ಆಶಾಕಿರಣವಾಗಬೇಕಿದ್ದ ಆಸ್ಪತ್ರೆ ಪಾಳು ಬೀಳುವ ಸ್ಥಿತಿ ತಲುಪಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳ ಲಾಭಿಯೇ ಕಾರಣ?: ಖಾಸಗಿ ಆಸ್ಪತ್ರೆಗಳ ಆದಾಯಕ್ಕೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ ಪ್ರಭಾವಿಗಳ ಮೂಲಕ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಅಡ್ಡಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಕೇಳಿ ಬಂದಿದೆ.
ರಾಜಕೀಯ ಗುದ್ದಾಟ: ಉದ್ಘಾಟನೆ ವಿಳಂಬಕ್ಕೆ ರಾಜಕೀಯ ಕಾರಣಗಳಿರಬಹುದು. ಬಿಜೆಪಿ ಅವಧಿಯಲ್ಲಿ ಮಂಜೂರಾದ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಉದ್ಘಾಟಿಸಲು ಹಿಂದೇಟು ಹಾಕುತ್ತಿದೆ ಎಂಬ ಆರೋಪವಿದೆ. ಬದಲಿಗೆ, ಅದೇ ಜಾಗದಲ್ಲಿ ಮತ್ತೊಂದು ಸಾರ್ವಜನಿಕ ಆಸ್ಪತ್ರೆ ಮಂಜೂರು ಮಾಡಿಸಿ ಅದರ ಕಾಮಗಾರಿ ಪೂರ್ಣಗೊಳ್ಳುವವರೆಗೂ ಉದ್ಘಾಟಿಸದಿರಲು ಜನಪ್ರತಿನಿಧಿಗಳು ರಾಜಕೀಯ ಹಠಕ್ಕೆ ಬಿದ್ದಿರುವುದಾಗಿ ಸ್ಥಳೀಯರು ಆರೋಪಿಸುತ್ತಾರೆ.
ಮೊದಲು ರಸ್ತೆ ಸಮಸ್ಯೆ ಬಗೆಹರಿಸಿ: ಆಸ್ಪತ್ರೆ ಇರುವ ಸ್ಥಳಕ್ಕೆ ತಲುಪಲು ಎರಡು ಮಾರ್ಗಗಳಿವೆ. ಹೊಸಕೋಟೆ-ಮಾಲೂರು ಹೆದ್ದಾರಿಯಲ್ಲಿ ಐಒಸಿ ಮಾರ್ಗವಾಗಿ ಅಥವಾ ಹೊಸಕೋಟೆ-ಕೋಲಾರ ಹೆದ್ದಾರಿ ಮೂಲಕ ಕೊಳತೂರು ಮಾರ್ಗವಾಗಿ ಆಸ್ಪತ್ರೆ ತಲುಪಬಹುದು. ಆದರೆ, ಎರಡೂ ರಸ್ತೆಗಳು ಅತ್ಯಂತ ಹದಗೆಟ್ಟಿವೆ. ರೋಗಿಗಳು ಮತ್ತು ಗರ್ಭಿಣಿಯರು ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ. ಆಸ್ಪತ್ರೆ ಉದ್ಘಾಟನೆಗೂ ಮುನ್ನ ಈ ರಸ್ತೆಗಳನ್ನು ಡಾಂಬರೀಕರಣಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತಾಯಿ-ಮಕ್ಕಳ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಿರುವುದು ಖುಷಿ ತಂದ ಸಂಗತಿ. ಆದರೆ ನಾಲ್ಕು ವರ್ಷಗಳಾದರೂ ರಾಜಕೀಯ ಹಠಕ್ಕೆ ಬಿದ್ದು ಲೋಕಾರ್ಪಣೆ ಮಾಡದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಡವರ ಆರೋಗ್ಯದ ವಿಚಾರದಲ್ಲಿ ರಾಜಕೀಯ ಮಾಡಬಾರದುತಾರಾ ವೆಂಕಟೇಶ್, ಸಾಮಾಜಿಕ ಕಾರ್ಯಕರ್ತೆ ತಗ್ಗಲಿ ಹೊಸಹಳ್ಳಿ
ಬಡವರಿಗೆ ಆದ ಅನ್ಯಾಯ
ಬಿಜೆಪಿ ಅವಧಿಯಲ್ಲಿ 2022ರಲ್ಲಿ ಮಂಜೂರಾದ ತಾಯಿ ಮಕ್ಕಳ ಸರ್ಕಾರಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿದ್ದರೂ ಲೋಕಾರ್ಪಣೆ ಮಾಡದೆ ಕಾಂಗ್ರೆಸ್ ಅವಧಿಯಲ್ಲಿ ಮತ್ತೊಂದು ಸಾರ್ವಜನಿಕ ಆಸ್ಪತ್ರೆಯನ್ನು ಮಂಜೂರು ಮಾಡಿಸಿಕೊಂಡು ಅದರ ಕಾಮಗಾರಿ ಪೂರ್ಣಗೊಳ್ಳುವವರೆಗೂ ಲೋಕಾರ್ಪಣೆ ಮಾಡುವುದು ಬೇಡ ಎಂದು ಹಠಕ್ಕೆ ಬಿದ್ದಿರುವುದು ಬಡವರಿಗೆ ಮಾಡುತ್ತಿರುವ ಅನ್ಯಾಯ ಕೆ.ಟಿ.ವೆಂಕಟೇಶ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಬಳಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.