
ದೊಡ್ಡಗಟ್ಟಿಗನಬ್ಬೆ(ಹೊಸಕೋಟೆ): ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆಯಿಂದ ₹1 ಕೋಟಿ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೀಮಂಡಹಳ್ಳಿಯಕೆರೆಗೆ ಪೈಪ್‌ಲೈನ್ ಮೂಲಕ ನೀರು ಹರಿಸಲು ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಣ್ಣುರಹಳ್ಳಿ ಗ್ರಾಮದ ಸಮೀಪವೇ ಇರುವ ಚೀಮಂಡಹಳ್ಳಿ ನೀರು ಹರಿಸಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಅಲ್ಲಿನ ದೊಡ್ಡಕೆರೆ ಮತ್ತು ಚಿಕ್ಕಕೆರೆಗೆ ನೀರು ಹರಿಸಿದರೆ ಕೆರೆ ತುಂಬಿದಾಗ ಆ ನೀರನ್ನು ಪುನಃ ಗಣಗಲು, ಪೇತ್ನಹಳ್ಳಿ ಕೆರೆಗಳಿಗೂ ಹರಿಯತ್ತದೆ ಸುತ್ತಲಿನ ರೈತರಿಗೆ ಅನುಕೂಲವಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನೀರು ಹರಿಸಲಾಗಿದೆ. ಮುಂದಿನ ದಿನಗಳಲ್ಲಿ ಚೀಮಂಡಹಳ್ಳಿ ಚಿಕ್ಕ ಕೆರೆ, ಗಣಗಲು, ಪೇತ್ನಹಳ್ಳಿ ಕೆರೆಗಳಿಗೆ ನೀರು ಹರಿಸಲು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆಯಿಂದ ತಾಲ್ಲೂಕಿನ ವಾಗಟ, ಜಿನ್ನಗಾರ ಹರಳುರು, ಕೊಳತೂರು ಮೊದಲಾದ ಗ್ರಾಮಗಳ ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸಲಾಗಿತ್ತು. ಅದನ್ನು ಕಣ್ಣುರಹಳ್ಳಿ ಗ್ರಾಮದ ಕೆರೆಗೂ ನೀರು ಹರಿಸುವ ಯೋಜನೆ ಇತ್ತು. ಆದರೆ ಅದಕ್ಕೆ ಕಾರಣಾಂತರಗಳಿಂದ ಈ ಯೋಜನೆಗೆ ತಡೆಯಾಗಿದೆ ಎಂದು ತಿಳಿಸಿದರು.
ಇದೇ ಗ್ರಾಮದಲ್ಲಿ ₹10 ಲಕ್ಷ ವೆಚ್ಚದಲ್ಲಿ ಸ್ಮಶಾನ ನಿರ್ಮಾಣ ಕಾಮಗಾರಿಯನ್ನು ಶಾಸಕರು ಉದ್ಘಾಟಿಸಿದರು.
ಬಮುಲ್ ನಿರ್ದೇಶಕ ಸತೀಶಗೌಡ, ಕೋಡಿಹಳ್ಳಿ ಸುರೇಶ್, ಭೈರೇಗೌಡ, ಕೃಷ್ಣಮೂರ್ತಿ, ಬಿಎಂಆರ್‌ಡಿ ನಿರ್ದೇಶಕ ಕೇಶವಮೂರ್ತಿ, ಸಿ. ಜಯರಾಜ್, ಮಂಜು, ಸುಬ್ಬಣ್ಣ, ಗೋಪಿ, ಕೊರಳೂರು ಸುರೇಶ್, ಪಿಡಿಒ ಸುಬ್ರಮಣಿ, ಬಸವರಾಜ್, ಮುನಿಶ್ಯಾಮಣ್ಣ ಉಪಸ್ಥಿತರಿದ್ದರು.
ತಾಲ್ಲೂಕಿನ ದೊಡ್ಡ ಕೆರೆಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸದೆಂತೆ ನ್ಯಾಯಾಲಯದ ತಡೆಯಾಜ್ಞೆ ನೀಡಿದೆ. ಇದು ಇತ್ಯರ್ಥವಾಗುವ ತನಕ ಸಣ್ಣ ಪುಟ್ಟ ಕರೆಗೆಳಲ್ಲಿ ಮಾತ್ರ ಕಾಮಗಾರಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದುಶರತ್ ಬಚ್ಚೇಗೌಡ ಶಾಸಕ
₹1.3 ಕೋಟಿ ವೆಚ್ಚದಲ್ಲಿ ಚಿಕ್ಕಕೆರೆ ಅಭಿವೃದ್ಧಿ
ನಂತರ ಅದೇ ಗ್ರಾಮದಲ್ಲಿನ ಚಿಕ್ಕಕೆರೆಯನ್ನು ಯುನೈಟೆಡ್ ವೇ ಬೆಂಗಳೂರು ಕಂಪನಿಯು ಸಿಎಸ್‌ಆರ್ ಅನುದಾನದಡಿ ₹1.3 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ಮುಂದಿನ ವರ್ಷದ ಜೂನ್ ಜುಲೈಗೆ ಕೆರೆಗೆ ನೀರು ಹರಿಸಲು ಅನುಕೂಲವಾಗುವಂತೆ ಕೆರೆ ಅಭಿವೃದ್ಧಿಗೊಳಿಸಲಾಗುವುದು. ನಂತರ ಉಳಿದ ಕಾಮಗಾರಿಯನ್ನು 2027ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಯುನೈಟೆಡ್ ವೇ ಬೆಂಗಳೂರು ಕಂಪನಿ ವ್ಯವಸ್ಥಾಪಕ ಪ್ರದೀಪ್ ತಿಳಿಸಿದರು. ಕೆರೆಯಲ್ಲಿ ಅಂಗಳ ಸಮತಟ್ಟುಗೊಳಿಸಿ ಕೆರೆ ಕಟ್ಟೆಗೆ ಕಲ್ಲುಚಪ್ಪಡಿ ಜೋಡಿಸಿ ಸುತ್ತಲೂ ತಂತಿ ಬೇಲಿ ಹಾಕಲಾಗುವುದು ವಾಯುವಿಹಾರದ ಪಥ ನಿರ್ಮಾಣ ವಿಶ್ರಾಂತಿ ಆಸನ ಒಂದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಜೊತೆಗೆ ಬೆಳಕಿನ ಕಂಬ ನೆಡುವ ಕಾಮಗಾರಿ ನಡೆಸಲಾಗುವುದು ಎಂದು ಕಂಪನಿಯ ದೀಪಕ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.