ADVERTISEMENT

ಹೊಸಕೋಟೆ | ಆಮೆಗತಿಯ ಕಾಮಗಾರಿ: ತೆರೆವಾಗದ ತ್ಯಾಜ್ಯ, ವ್ಯಾಪಾರಕ್ಕೆ ಪೆಟ್ಟು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 1:55 IST
Last Updated 13 ಆಗಸ್ಟ್ 2025, 1:55 IST
<div class="paragraphs"><p>ಕಾಲೇಜು ರಸ್ತೆಯಲ್ಲಿ ಚರಂಡಿ ಮತ್ತು ಕೇಬಲ್ ಕಾಮಗಾರಿಗೆ ರಸ್ತೆ ಅಗೆದಿರುವುದು</p></div>

ಕಾಲೇಜು ರಸ್ತೆಯಲ್ಲಿ ಚರಂಡಿ ಮತ್ತು ಕೇಬಲ್ ಕಾಮಗಾರಿಗೆ ರಸ್ತೆ ಅಗೆದಿರುವುದು

   

ಹೊಸಕೋಟೆ: ದೊಡ್ಡ ಗಟ್ಟಿಗನಬ್ಬೆ ರಸ್ತೆಯ ಕೆಇಬಿ ವೃತ್ತದಿಂದ ಮೋರ್ ಶಾಪಿಂಗ್ ಮಾಲ್‌ವರೆಗೆ ಕೇಬಲ್ ಅಳವಡಿಕೆಗಾಗಿ ಒಂದು ತಿಂಗಳ ಹಿಂದೆ ರಸ್ತೆಯನ್ನು ಅಗೆಯಲಾಗಿದೆ. ಅಲ್ಲದೆ, ರಸ್ತೆ ಅಗೆದು ತೆಗೆಯಲಾದ ಕಲ್ಲು ಮತ್ತು ಮಣ್ಣನ್ನು ರಸ್ತೆ ಪಕ್ಕದಲ್ಲೇ ಹಾಕಲಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ರಸ್ತೆಯಲ್ಲಿ ಓಡಾಡುವುದೇ ಕಷ್ಟಕರ ಎನ್ನುವಂತಾಗಿದೆ. 

ಜನರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಕಾರಣ ಅಗೆದ ರಸ್ತೆಯ ಪಕ್ಕದ ಅಂಗಡಿಗಳಿಗೆ ಗ್ರಾಹಕರು ಬಾರದೆ, ಬಡ ಮತ್ತು ಮಧ್ಯಮ ಅಂಗಡಿ ಮಾಲೀಕರು ನಷ್ಟದ ಭೀತಿ ಎದುರಿಸುತ್ತಿದ್ದಾರೆ. ತಮ್ಮ ಅಂಗಡಿಗಳ ಮುಂದೆ ಬಿದ್ದಿರುವ ಮಣ್ಣಿನ ರಾಶಿ ಮತ್ತು ಇತರ ತ್ಯಾಜ್ಯವನ್ನು ತಾವೇ ತೆರವು ಮಾಡಿಸಿಕೊಳ್ಳಬೇಕಾದ ಸ್ಥಿತಿ ಉದ್ಭವಿಸಿದೆ ಎಂದು ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ADVERTISEMENT

ಕೇಬಲ್ ಅಳವಡಿಸುವ ಕಾಮಗಾರಿಗಾಗಿ ರಸ್ತೆಯನ್ನು ಬೇಕಾಬಿಟ್ಟಿಯಾಗಿ ಅಗೆದು, ಇದೀಗ ಮುಚ್ಚದಿರುವ ಬಗ್ಗೆ ತಾಲ್ಲೂಕು ಆಡಳಿತ ಮತ್ತು ನಗರಸಭೆ ವಿರುದ್ಧ ಬೀದಿಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು ಮತ್ತು ಜನಸಾಮಾನ್ಯರು ಹಿಡಿಶಾಪ ಹಾಕುತ್ತಿದ್ದಾರೆ. 

ಇದರ ನಡುವೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಆದರೆ, ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥಿತವಾದ ಚರಂಡಿ ವ್ಯವಸ್ಥೆ ಇಲ್ಲ. ಜೊತೆಗೆ ಸ್ಥಳೀಯ ನಿವಾಸಿಗಳು, ಕಸವನ್ನು ಚರಂಡಿ ಅಥವಾ ರಸ್ತೆ ಬದಿಯಲ್ಲಿ ಬಿಸಾಡಿ ಹೋಗುತ್ತಾರೆ. ಇದರಿಂದಾಗಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಹೋಗದೆ, ಚರಂಡಿಗಳು ದುರ್ನಾತ ಬೀರುತ್ತಿವೆ. ಇದರ ನಡುವೆ, ಅವೈಜ್ಞಾನಿಕ ಕಾಮಗಾರಿಯಿಂದ ಜನರು ಪ್ರತಿನಿತ್ಯ ದುರ್ನಾತದಲ್ಲೇ ದಿನ ದೂಡುವಂತಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುವರು. 

ಕಳಪೆ ಗುಣಮಟ್ಟ ಚರಂಡಿ, ಕೇಬಲ್ ಕಾಮಗಾರಿ: ಚರಂಡಿ ಮತ್ತು ಕೇಬಲ್ ಅಳವಡಿಕೆ ಕಾಮಗಾರಿಗೆ ಕಳಪೆ ಗುಣಮಟ್ಟದ ಕಬ್ಬಿಣ ಮತ್ತು ಸಿಮೆಂಟ್ ಬಳಸಲಾಗಿದ್ದು, ಚರಂಡಿ ಮತ್ತು ಕೇಬಲ್ ಅಳವಡಿಕೆಗೆ ಹಾಕಲಾದ ಕಾಂಕ್ರೀಟ್ ಒಂದೇ ವಾರದಲ್ಲಿ ಕಿತ್ತುಬರುತ್ತಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಸಂಬಂಧ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ. 

ಹೊಸಕೋಟೆ ಪಟ್ಟಣದಲ್ಲಿನ ಸಂತೆಗೇಟ್‌ವರೆಗಿನ ರಾಷ್ಟ್ರೀಯ ಹೆದ್ದಾರಿ 75ರ ಎರಡೂ ಬದಿಯಲ್ಲಿ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಕಾಮಗಾರಿ ಕೈಗೊಳ್ಳಲಾದ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ನಾತ ಬೀರುತ್ತಿದ್ದು, ಉಸಿರುಗಟ್ಟಿಸುವ ವಾತಾವರಣವಿದೆ. ಕನಕ ಭವನ ರಸ್ತೆ, ಗಂಗಮ್ಮ ಗುಡಿ ರಸ್ತೆ, ಚೆನ್ನಬೈರೇಗೌಡ ಕ್ರೀಡಾಂಗಣದಿಂದ ಚಿಕ್ಕಕೆರೆ ಸಮೀಪದವರೆಗಿನ ಕಾಮಗಾರಿಗಳು ಇದಕ್ಕಿಂತ ಭಿನ್ನವಾಗಿಲ್ಲ. ಈ ಕಾಮಗಾರಿಗಳು ನಡೆಯುವ ಸ್ಥಳದಲ್ಲಿ ಜನರು ಸ್ವಲ್ಪ ಯಾಮಾರಿದರೂ, ಅಪಾಯ ತಪ್ಪಿದ್ದಲ್ಲ. 

ಕೇಬಲ್ ಅಳವಡಿಕೆ ಕಾಮಗಾರಿಯನ್ನು 10–12 ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಸುಮಾರು ಒಂದು ತಿಂಗಳಾಗುತ್ತಾ ಬಂದರೂ, ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಅಂಗಡಿ ಮಾಲೀಕರೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.