
ಹೊಸಕೋಟೆ: ನಗರದ ಕಾವೇರಿ ನಗರ ಮತ್ತು ಎಸ್ಎಸ್ಎಂ ಬಡಾವಣೆ ನಿವಾಸಿಗಳು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಪ್ರತಿ ಭಾನುವಾರ ಕಾವೇರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಕಟ್ಟಿಕೊಂಡು ಕಾವೇರಿ ನಗರದ ಮುಖ್ಯ, ಅಡ್ಡರಸ್ತೆ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿದ್ದಾರೆ.
ಕಾವೇರಿ ನಗರದ 5ನೇ ಮುಖ್ಯ ರಸ್ತೆಯ 4ನೇ ಅಡ್ಡರಸ್ತೆಯಲ್ಲಿ ನಗರ ಗ್ರಂಥಾಲಯ ಸುತ್ತಮುತ್ತ, ರಸ್ತೆಯ ಇಬ್ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿದರು. ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಎಲ್ಲಂದರಲ್ಲಿ ಕಸ ಹಾಕಿದರೆ ₹1ಸಾವಿರ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು ಎಂದು ಕಸ ಹಾಕಿದವರ ಫೋಟೊ ಎಲ್ಲೆಡೆ ಹಾಕಲಾಗುವುದು ಮತ್ತು ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಅಲ್ಲಲ್ಲಿ ಬೋರ್ಡ್ ನೇತುಹಾಕಿದ್ದಾರೆ. ಆ ಮೂಲಕ ಸಾರ್ವಜನಿಕರಿಗೂ ಅರಿವು ಮತ್ತು ಎಚ್ಚರಿಕೆಯ ಸಂದೇಶವನ್ನು ನೀಡುವ ಕೆಲಸವನ್ನು ಕಾವೇರಿ ನಗರದ ನಿವಾಸಿಗಳು ಮಾಡುತ್ತಿದ್ದಾರೆ.
ಕಾವೇರಿ ನಗರದ ನಿವಾಸಿ ಮತ್ತು ನಗರ ಸಭೆ ಸದಸ್ಯ ಎಂ. ವಿ. ಸೋಮಶೇಖರ್, ಕಾವೇರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಡಾ. ತಮ್ಮಾರೆಡ್ಡಿ, ನಿವೃತ್ತ ಮುಖ್ಯ ಶಿಕ್ಷಕ ವಿ ಕೆ ವೆಂಕಟೇಶ್, ಕಾವೇರಿ ನಗರದ ನಿವಾಸಿಗಳು ಪಾಲ್ಗೊಂಡಿದ್ದರು.
ನಮ್ಮ ಮನೆ ಬಳಿ ಕಸ ಇದ್ದರೆ ಅದರಿಂದ ನಮಗೆ ಕಾಯಿಲೆ ಬರುತ್ತದೆ. ಬಡಾವಣೆಯ ನಿವಾಸಿಗಳೆಲ್ಲ ಸೇರಿ ಕಳೆದ ಹತ್ತು ವರ್ಷಗಳಿಂದ ಪ್ರತಿ ಭಾನುವಾರ ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆಗಾಗಿ ನಮ್ಮನ್ನು ನಾವೇ ಮಿಸಲಿಟ್ಟುಕೊಂಡಿದ್ದೇವೆ ಎಂದು ಕಾವೇರಿ ನಗರದ ನಿವಾಸಿ ಎಂ. ವಿ. ಸೋಮಶೇಖರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.