
ಹೊಸಕೋಟೆ: ಮೈಲಾಪುರದ ಜಮೀನಿನಲ್ಲಿ ಮಂಗಳವಾರ ವ್ಯಕ್ತಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ಹೊಸಕೋಟೆ ಠಾಣೆಯ ಪೊಲೀಸರ ಕಿರುಕುಳ ಕಾರಣ ಎಂದು ಮೃತನ ಪತ್ನಿ ಮತ್ತು ಮಕ್ಕಳು ನೇರವಾಗಿ ಆರೋಪಿಸಿದ್ದಾರೆ.
ಮೈಲಾಪುರದ ಮಂಜುನಾಥ್ (44) ಮೃತರು. ಮಂಜುನಾಥ್ ಕೆಲಸ ಮಾಡುತ್ತಿದ್ದ ಚಿಮಂಡಹಳ್ಳಿ ಮಂಜು ಎಂಬುವರ ಜಮೀನಿನಲ್ಲಿ ಶವ ಪತ್ತೆಯಾಗಿದೆ.
ಮಹಿಳೆಯೊಬ್ಬರ ನಾಪತ್ತೆ ಪ್ರಕರಣದ ವಿಚಾರಣೆ ನೆಪದಲ್ಲಿ ಹೊಸಕೋಟೆ ಪೊಲೀಸ್ ಠಾಣೆಯ ಅಂಬರೀಷ್ ಎಂಬ ಪೇದೆ ಪದೇ ಪದೇ ನೀಡುತ್ತಿದ್ದ ಕಿರುಕುಳ ಮತ್ತು ಬೆದರಿಕೆಯಿಂದ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರ ಮತ್ತು ಮೃತನ ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ. ಈ ದಿಕ್ಕಿನಲ್ಲಿ ಪ್ರಕರಣದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಿವೈಎಸ್ಪಿ ಮಲ್ಲೇಶ್, ‘ಮೇಲ್ನೋಟಕ್ಕೆ ಇದು ಆತ್ಮಹತ್ಯೆ ರೀತಿ ಕಾಣುತ್ತಿದೆ. ಪೊಲೀಸರ ವಿಚಾರಣೆಗೆ ಭಯಪಟ್ಟು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಯಾರೂ ಹೊಣೆಯಲ್ಲ. ಮರಣೋತ್ತರ ಪರೀಕ್ಷೆ ನಡೆಸಿದರೆ ಕೊಲೆ ಅಥವಾ ಆತ್ಮಹತ್ಯೆ ಎಂದು ನಿಜಾಂಶ ತಿಳಿಯುತ್ತದೆ. ಕುಟುಂಬಸ್ಥರು ದೂರು ನೀಡಿದರೆ ತನಿಖೆಗೆ ಆದೇಶಿಸುತ್ತೇನೆ’ ಎಂದು ಭರವಸೆ ನೀಡಿದರು.
ಮಂಜುನಾಥ್ ಮೈಲಾಪುರದ ಚಿಮಂಡಹಳ್ಳಿ ಮಂಜು ಎಂಬುವವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಪಕ್ಕದ ದಬ್ಬಗುಂಟೆ ಗ್ರಾಮದ ಮಹಿಳೆ ಈ ಜಮೀನಿಗೆ ಕೂಲಿ ಕೆಲಸಕ್ಕೆ ಬರುತ್ತಿದ್ದರು. ಇಬ್ಬರ ನಡುವೆ ಅನೈತಿಕ ಸಂಬಂಧ ಇದೆ ಎಂದು ಮಹಿಳೆಯ ಪತಿ ಮುನಿರಾಜು ಆರೋಪ ಮಾಡಿದ್ದರು. ವಾರದ ಹಿಂದೆ ಮಹಿಳೆ ಮನೆಯಲ್ಲಿದ್ದ ಚಿನ್ನದೊಂದಿಗೆ ಕಣ್ಮರೆಯಾಗಿದ್ದರು.
ಪತ್ನಿ ಕಾಣೆಯಾದ ಬಗ್ಗೆ ಮುನಿರಾಜು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಮಂಜುನಾಥ್ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಮಂಜುನಾಥ್ ಅವರನ್ನು ವಿಚಾರಣೆಗಾಗಿ ಎರಡು ಬಾರಿ ಠಾಣೆಗೆ ಕರೆಸಿಕೊಳ್ಳಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸೋಮವಾರವೂ ವಿಚಾರಣೆಗೆ ಬರುವಂತೆ ಪೊಲೀಸ್ ಪೇದೆ ಅಂಬರೀಷ್ ಕರೆ ಮಾಡಿ ಬೆದರಿಸಿದ್ದರು. ಇದರಿಂದ ಭಯಭೀತರಾದ ಮಂಜುನಾಥ್ ಸಂಜೆಯೇ ಮನೆ ತೊರೆದಿದ್ದರು. ಸಂಬಂಧಿಕರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಮುಂಜಾನೆ ತೋಟದ ಗೇಟ್ ಬಳಿ ಮಂಜುನಾಥ್ ಬೈಕ್ ಗಮನಿಸಿದ ಸಂಬಂಧಿಕರು ಹುಡುಕಾಟ ನಡೆಸಿದಾಗ ಮರದಲ್ಲಿ ನೇಣು ಬೀಗದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ’ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪೊಲೀಸರೇ ಹೊಣೆ: ನಾಪತ್ತೆಯಾದ ಮಹಿಳೆ ಪತ್ತೆಗೆ ಮುಂದಾಗದ ಪೊಲೀಸರು ವಿಚಾರಣೆ ನೆಪದಲ್ಲಿ ಮಂಜುನಾಥ್ ಅವರನ್ನು ಎಲ್ಲೆಂದರಲ್ಲಿ ಕರೆಸಿಕೊಂಡು ಚಿತ್ರಹಿಂಸೆ ನೀಡಿದ್ದಾರೆ. ಪದೇ ಪದೇ ಬೆದರಿಕೆ ಒಡ್ಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪೊಲೀಸರೇ ನೇರ ಹೊಣೆ ಎಂದು ಮೃತನ ಪತ್ನಿ ಮತ್ತು ಮಕ್ಕಳು ದೂರಿದ್ದಾರೆ.
ಗ್ರಾಮಸ್ಥರ ಪ್ರತಿಭಟನೆ: ‘ಮಂಜುನಾಥ್ ಪೊಲೀಸರ ವಿಚಾರಣೆಯಿಂದ ನೊಂದಿದ್ದು ನಿಜ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಶವದ ಸ್ಥಿತಿ ಗಮನಿಸಿದರೆ ಯಾರೋ ಅವರನ್ನು ನೇಣು ಬಿಗಿದು ಕೊಲೆ ಮಾಡಿರುವ ರೀತಿ ಕಾಣುತ್ತಿದೆ. ಆದ್ದರಿಂದ ಪೊಲೀಸರು ತನಿಖೆ ಮಾಡಬೇಕು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮತ್ತು ಶ್ವಾನ ದಳ ಬರಬೇಕು. ಅಲ್ಲಿಯವರೆಗೆ ಮೃತದೇಹವನ್ನು ಮುಟ್ಟಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದ ಗ್ರಾಮಸ್ಥರು ಪ್ರತಿಭಟನೆ ನಡಸಿದರು.
ಸ್ಥಳಕ್ಕೆ ಬಂದ ಪೊಲೀಸ್ ಇನ್‌ಸ್ಪೆಕ್ಟರ್ ಗೋವಿಂದ್ ಹಾಗೂ ಸಿಬ್ಬಂದಿ ಸ್ಥಳ ಮಹಜರು ಮಾಡಿ ಶವ ಕೆಳಗಿಳಿಸಲು ಮುಂದಾದಾಗ ಗ್ರಾಮಸ್ಥರು ಮತ್ತು ಸಂಬಂಧಿಕರು ಅವಕಾಶ ನೀಡಲಿಲ್ಲ. ಸ್ಥಳಕ್ಕೆ ಬಂದ ಡಿವೈಎಸ್‌ಪಿ ಗ್ರಾಮಸ್ಥರು ಮತ್ತು ಕುಟುಂಬಸ್ಥರ ಮನವೊಲಿಸಿ ಮಹಜರು ನಡೆಸಲು ಅವಕಾಶ ಕಲ್ಪಿಸಿದರು.
ಅಂಬರೀಷ್ ಎಂಬ ಪೇದೆ ನಿನ್ನೆ ಸಂಜೆ ಕರೆ ಮಾಡಿ ಅಪ್ಪನಿಗೆ ವಿಚಾರಣೆ ನೆಪದಲ್ಲಿ ಬೆದರಿಕೆ ಒಡ್ಡಿದ್ದಾರೆ. ಇದರಿಂದ ಭಯಗೊಂಡ ಅಪ್ಪ ನಾಪತ್ತೆಯಾಗಿದ್ದರು. ಈಗ ಶವವಾಗಿ ಪತ್ತೆಯಾಗಿದರೆ. ಇದಕ್ಕೆ ಯಾರು ಹೊಣೆಸೋನಿಯಾ ಮೃತರು ಪುತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.