ಹೊಸಕೋಟೆ: ನೆಲಮಂಗಲ ತಾಲ್ಲೂಕಿನ ದಾಬಸ್‌ಪೇಟೆಯಿಂದ ತಮಿಳುನಾಡಿನ ಹೊಸೂರು ವರೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ–207 ನಿರ್ಮಾಣಕ್ಕೆ ಭೂಮಿ ನೀಡಿದ ರೈತರು ಓಡಾಡಲು ರಸ್ತೆ ಇಲ್ಲದೆ ದಿಕ್ಕು ತೋಚದಂತಾಗಿದೆ.
ಹೆದ್ದಾರಿ ನಿರ್ಮಾಣಕ್ಕೆ ಹೋಸಕೋಟೆ ಮತ್ತು ಕೋಲಾರ ಜಿಲ್ಲೆ ಮಾಲೂರು ರೈತರ ಭೂಮಿ ಸ್ವಾಧೀನವಾಗಿದೆ. ಇದರಲ್ಲಿ ಉಳಿದುಕೊಂಡ ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಆದರೆ ಹೆದ್ದಾರಿಗೆ ಸರ್ವಿಸ್ ರಸ್ತೆ ನಿರ್ಮಿಸದ ಕಾರಣ ರೈತರ ಜಮೀನುಗಳಿಗೆ ಹೋಗಲು ದಾರಿ ಇಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಇರುವ ಹಳ್ಳಿಯ ಗ್ರಾಮಸ್ಥರು ಓಡಾಡಲು ದಾರಿ ಹುಡುಕಿಕೊಂಡು ಪರದಾಡುತ್ತಿದ್ದಾರೆ.
ದಾಬಸ್‌ಪೇಟೆಯಿಂದ ಹೊಸೂರು ವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಉದ್ದ ಒಟ್ಟು 139 ಕಿಲೋಮೀಟರ್. ಇದರಲ್ಲಿ ಸುಮಾರು 122 ಕಿಲೋಮೀಟರ್ ರಾಜ್ಯದಲ್ಲೇ ಹಾದು ಹೋಗುತ್ತದೆ. ಹೆದ್ದಾರಿಯಿಂದ ರಾಜ್ಯದ ಸಾರಿಗೆ ಸಂಪರ್ಕಕ್ಕೆ ವೇಗ ಸಿಗುತ್ತದೆ. ಆದರೆ ಸ್ಥಳೀಯರಿಗೆ ಅನುಕೂಲ ಆಗುವಂತ ಸರ್ವಿಸ್ ರಸ್ತೆ ನಿರ್ಮಿಸದೆ ಇರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಹೆದ್ದಾರಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮತ್ತು ಕೋಲಾರ ಜಿಲ್ಲೆಯ ಮಾಲೂರು ಮೂಲಕ ಹಾದು ಹೋಗುತ್ತದೆ. ಹೊಸಕೋಟೆ ಮತ್ತು ಕೋಲಾರ ಭಾಗದ ಸುಮಾರು 52 ಕಿ. ಮೀ ಉದ್ದದ ರಸ್ತೆಗೆ ಸೂಕ್ತ ಸುರಕ್ಷಿತ ಕ್ರಮ ಕೈಗೊಂಡಿಲ್ಲ. ವೈಜ್ಞಾನಿಕ ಸರ್ವೀಸ್ ರಸ್ತೆಯನ್ನೇ ನಿರ್ಮಾಣ ಮಾಡಿಲ್ಲ.
ಅಲ್ಲಲ್ಲಿ ಕಾಟಾಚಾರಕ್ಕೆ ಎಂಬಂತೆ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರಿಂದ ಸ್ಥಳೀಯರು ತಮ್ಮ ಊರಿನಿಂದ ಹೊರಗಡೆ ಮತ್ತು ರೈತರು ತಮ್ಮ ಜಮೀನಿಗಳಿಗೆ ಓಡಾಡಲು ಆಗುತ್ತಿಲ್ಲ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೊಸಕೋಟೆ ತಾಲ್ಲೂಕಿನ ದೊಡ್ಡಹುಲ್ಲೂರು ಗ್ರಾಮದವರೆಗೆ ಸರ್ವೀಸ್ ರಸ್ತೆ ನಿರ್ಮಿಸಿದೆ. ಆದರೆ ಇದನ್ನು ಮುಂದುವರೆಸಿಲ್ಲ. ಇದರಿಂದ ಈ ರಸ್ತೆ ಮುಂದುವರೆದ ಭಾಗದ ಇಕ್ಕೆಲ್ಲದ ಗ್ರಾಮಗಳ ಜನರಿಗೆ ರಸ್ತೆ ಸಂಪರ್ಕ ಇಲ್ಲದೆ ತುಂಬಾ ದೂರ ಸುತ್ತಾಡಿಕೊಂಡು ಸಂಚರಿಸಬೇಕಿದೆ.
ರಸ್ತೆ ನಿರ್ಮಾಣಕ್ಕೆ ಸಾವಿರಾರು ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅದೆಷ್ಟೋ ರೈತರ ಜಮೀನಿನ ಮಧ್ಯಭಾಗದಲ್ಲಿ ರಸ್ತೆ ಹಾದು ಹೋಗಿದೆ. ಇದರಿಂದ ರಸ್ತೆಯ ಎರಡೂ ಭಾಗದಲ್ಲಿಯೂ ಸ್ವಲ್ಪ ಜಮೀನು ಉಳಿದುಕೊಂಡಿದೆ. ಎರಡು ಜಮೀನಿಗೆ ಓಡಾಡಲು ರಸ್ತೆ ಇಲ್ಲ. ರಸ್ತೆಗೆ ಜಮೀನು ಕೊಟ್ಟು ನಾವು ಓಡಾಡಲು ಜಾಗ ಇಲ್ಲವೆಂದು ರೈತರು ಪರಿತಪಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ನಡೆಯಿಂದ ಬೇಸತ್ತಿರುವ ಕೆಲವು ರೈತರು ಹಲವು ಕಡೆ ತಾವೇ ಸ್ವತಃ ರಸ್ತೆ ನಿರ್ಮಿಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನೆರವು ಪಡೆದುಕೊಳ್ಳುತ್ತಿದ್ದಾರೆ.
ಪ್ರಸ್ತುತ ಹೊಸಕೋಟೆ ಕೋಲಾರ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರರದಿಂದ ₹400 ಕೋಟಿ ಪಾಲಿಗಾಗಿ ಮನವಿ ಮಾಡಿದ್ದೇವೆ. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಈವರೆಗೂ ಬಂದಿಲ್ಲ. ಸುಮಾರು 152 ಉದ್ದದ(ಇಕ್ಕೆಲಗಳಲ್ಲಿ) ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಯೋಜನೆ ಸಿದ್ಧ ಇದ್ದೇವೆ. ಇದಕ್ಕಾಗಿ ರಾಜ್ಯ ಸರ್ಕಾರ ನಮಗೆ ನೆರವು ನೀಡಬೇಕಿದೆ. ಹೆಸರು ಹೇಳಲು ಇಚ್ಚಿಸದ ಅಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಕಳೆದ ಡಿಸೆಂಬರ್‌ನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಎನ್.ಶಿವಶಂಕರ್ ಮತ್ತು ಅಧಿಕಾರಿಗಳ ತಂಡ ಹೆದ್ದಾರಿಯನ್ನು ಪರಿಶೀಲಿಸಿದ ನಂತರ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಸೂಕ್ತ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಈವರೆರೂ ಸರ್ವೀಸ್ ರಸ್ತೆ ನಿರ್ಮಾಣ ಕುರಿತು ಯಾವುದೇ ನಿರ್ಧಾರ ಆಗಿಲ್ಲ. ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರ್ವಿಸ್ ರಸ್ತೆ ಮತ್ತು ಕೇಳಸೇತುವೆ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಭಿವೃದ್ಧಿಗೆ ರೈತರ ಬಲಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ನಿರ್ಲಕ್ಷಿಸುತ್ತಿವೆ. ಅಭಿವೃದ್ಧಿಗೆ ಮೊದಲು ಬಲಿಯಾಗುತ್ತಿರುವುದು ರೈತರು. ಅದಕ್ಕೆ ತಾಜಾ ಉದಾಹರಣೆ ಇದು. ಹೆದ್ದಾರಿಯ ನಿರ್ಮಾಣದಿಂದ ಜಮೀನು ಕಳೆದುಕೊಳ್ಳುವ ಜೊತೆಗೆ ಇರುವ ಜಮೀನನ್ನು ಸಮರ್ಥವಾಗಿ ಬಳಸಿಕೊಳ್ಳಲು ಆಗುತ್ತಿಲ್ಲ. ಇದನ್ನು ಅರಿತು ಸಂಬಂಧಪಟ್ಟವರು ರೈತರ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ದೊಡ್ಡಮಟ್ಟದ ರೈತ ಹೋರಾಟಕ್ಕೆ ಕರೆ ನೀಡಲಾಗುವುದು.ಹರೀಂದ್ರ ಸಿಐಟಿಯು ಮುಖಂಡ ರೈತ
ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡಲು ಒಂದು ಕಿಲೋ ಮೀಟರ್‌ಗೆ ₹750 ಕೋಟಿ ನೀಡುತ್ತಿರುವ ಸರ್ಕಾರಕ್ಕೆ 152 ಕಿಲೋಮೀಟರ್ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಬೇಕಾದ ₹400 ಕೋಟಿ ಹೊರೆಯೇ?. ಆದಷ್ಟು ಬೇಗ ರಾಜ್ಯ ಸರ್ಕಾರ ₹400 ಕೋಟಿ ಹಣವನ್ನು ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಚಳುವಳಿ ಆರಂಭಿಸಲಾಗುವುದು.ಮೋಹನ್‌ಬಾಬು ರೈತ ಮುಖಂಡ
ತಮಿಳುನಾಡಿನಲ್ಲಿ ಹಾದು ಹೋಗಿರುವ ಇದೇ ರಾಷ್ಟ್ರೀಯ ಹೆದ್ದಾರಿಗೆ ತಮಿಳುನಾಡು ಮುಖ್ಯಮಂತ್ರಿ ಖುದ್ದು ಭೇಟಿ ನೀಡಿ ರೈತರಿಗೆ ಸಮಸ್ಯೆಯಾಗದಂತೆ ಹೆದ್ದಾರಿ ನಿರ್ಮಾಣಕ್ಕೆ ಸೂಚಿಸಿದ್ದಾರೆ. ಅದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ಮುಖ್ಯಮಂತ್ರಿಗಳು ನಮ್ಮ ಸಮಸ್ಯೆಗೆ ಕಿವಿಯಾಗಲಿ.ರಾಮಾಂಜಿನಿ ಗೌಡ ರೈತ
ರೈತರ ಅನುಕೂಲಕ್ಕಾಗಿ ಸರ್ವೀಸ್ ರಸ್ತೆ ನಿರ್ಮಿಸಬೇಕೆಂದು ಸಂಸದ ಶಾಸಕ ಕೇಂದ್ರ ಹೆದ್ದಾರಿ ಮಂತ್ರಿಗಳ ಆದಿಯಾಗಿ ಎಲ್ಲರನ್ನೂ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಮ್ಮ ಸಮಸ್ಯೆಯನ್ನು ಪರಿಹರಿಸುವ ಕುರಿತು ಯಾರ ಬಳಿ ಹೋಗಬಹುದು ಎಂಬುದೇ ತೋಚುತ್ತಿಲ್ಲ ಎಂದು ಅಲವತ್ತುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.