ADVERTISEMENT

ಹೊಸಕೋಟೆ: ಗುಂಡಿಗಳ ಸಾಮ್ರಾಜ್ಯಕ್ಕೆ ಸಿಗವುದೇ ಮುಕ್ತಿ?

ಹೊಸಕೋಟೆ ನಗರ, ಹೊರವಲಯದ ರಸ್ತೆ ಸಂಚಾರ ದುಸ್ತರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 8:10 IST
Last Updated 22 ಅಕ್ಟೋಬರ್ 2025, 8:10 IST
ಚೌಡೇಶ್ವರಿ ನಗರದಲ್ಲಿ ದಶಕಗಳಿಂದ ಡಾಂಬರ್ ಕಾಣದ ರಸ್ತೆ ಸ್ಥಿತಿ
ಚೌಡೇಶ್ವರಿ ನಗರದಲ್ಲಿ ದಶಕಗಳಿಂದ ಡಾಂಬರ್ ಕಾಣದ ರಸ್ತೆ ಸ್ಥಿತಿ   

ಹೊಸಕೋಟೆ: ನಗರ ಮತ್ತು ನಗರಕ್ಕೆ ಹೊಂದಿಕೊಂಡ ಹೊರವಲಯದ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಪಾದಚಾರಿಗಳ ಓಟಾಟ ಸ್ವಲ್ಪವೂ ಸುರಕ್ಷಿತವಲ್ಲ. ಯಾವುದೇ ಅಪಘಾತ ಸಂಭವಿಸಿದರೆ ಆಸ್ಪತ್ರೆ ಸೇರುವುದು ಖಚಿತ ಎನ್ನುವಂತಿದೆ ಇಲ್ಲಿನ ಪರಿಸ್ಥಿತಿ. ಎಲ್ಲಿ ನೋಡಿದರೂ ಗುಂಡಿಗಳದ್ದೆ ಸಾಮ್ರಾಜ್ಯ. ಚರಂಡಿ ನೀರು ತುಂಬಿ ಇದು ರಸ್ತೆಯೋ ಅಥವಾ ಚರಂಡಿಯೋ ಎನ್ನುವಂತಹ ದುಸ್ಥಿತಿ ಇಲ್ಲಿದೆ.

ಇಂತಹ ರಸ್ತೆಗಳಲ್ಲಿ ಪ್ರತಿದಿನ ದ್ವಿಚಕ್ರ ವಾಹನಗಳಲ್ಲಿ ಕಚೇರಿಗೆ ಹೋಗುವವರ ಸ್ಥಿತಿ ನರಕತಯಾತನೆ. ಶಾಲಾ–ಕಾಲೇಜುಗಳಿಗೆ ತೆರಳುವ ಮಕ್ಕಳು ಮತ್ತು ಹಿರಿಯರು ಪ್ರತಿದಿನವೂ ಪರದಾಡಬೇಕಾಗಿದೆ.

ಎಲ್ಲೆಲ್ಲಿ ಕಚ್ಚಾ ರಸ್ತೆಗಳಿವೆ: ನಗರಸಭೆ ಮತ್ತು ಪಂಚಾಯಿತಿ ವ್ಯಾಪ್ತಿಗೆ ಬರುವ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿಯ ಕೆಲವು ಓಣಿಗಳು. 29 ಮತ್ತು 31ನೇ ವಾರ್ಡ್‌ನ ಕೆಲ ಓಣಿ. ಮುನಿಯಪ್ಪ ಬಡಾವಣೆ, ಮಲ್ಲಣ್ಣ ಬಡಾವಣೆ, ಭಜಂತ್ರಿ ಬಡಾವಣೆ, ಪಾರ್ವತಿ ನಗರ, ಅನ್ನಪೂರ್ಣೇಶ್ವರಿ ನಗರ, ಕಮ್ಮವಾರಿ ನಗರದ ಚೌಡೇಶ್ವರಿ ದೇವಾಲಯದ ರಸ್ತೆ ಮತ್ತು ಕೆಲವು ಓಣಿ.

ADVERTISEMENT

23ನೇ ವಾರ್ಡ್‌ನ ಕೆಲ ಓಣಿ. ಗಣಗಲು ರಸ್ತೆ, ರಾಘವೇಂದ್ರ ಟಾಕೀಸ್ ಸರ್ಕಲ್ ಬಳಿ ಕೆಲ ಓಣಿಯಲ್ಲಿ ಕಚ್ಚಾ ರಸ್ತೆಗಳು ಇವೆ. ನಗರಕ್ಕೆ ಹೊಂದಿಕೊಂಡ ಪಂಚಾಯಿತಿ ವ್ಯಾಪ್ತಿಯ ಕೆಲವು ಬಡಾವಣೆಗಳ ಓಣಿಗಳ ಸ್ಥಿತಿಯೂ ಇದೇ ರೀತಿ ಇದೆ.  

ಕಮ್ಮವಾರಿ ನಗರದ 29ನೇ ವಾರ್ಡ್‌ನ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಡಾಂಬರಿಕರಣ ಕಂಡು ಎಷ್ಟೋ ವರ್ಷಗಳಾಗಿವೆ ಎನ್ನುತ್ತಾರೆ ಸ್ಥಳೀಯರು. ಇದೇ ರಸ್ತೆಯಲ್ಲೇ ಕಾಲ್ಡ್ ವೆಲ್ ಅಕಾಡೆಮಿ ಮತ್ತು ಮೇಧಶ್ರೀ ಎಂಬ ಎರಡು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸುಮಾರು 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ಈ ಹದಗೆಟ್ಟ ರಸ್ತೆಯಲ್ಲಿಯೇ ದ್ವಿಚಕ್ರ ವಾಹನಗಳಲ್ಲಿ ತಮ್ಮ ಮಕ್ಕಳನ್ನು ಬಿಡಲು ಬರುವ ಪಾಲಕರ ಪರಿಸ್ಥಿತಿಯಂತೂ ಹೇಳತೀರದು ಎನ್ನುತ್ತಾರೆ ಸ್ಥಳೀಯರು.

ಶಾಸಕರು, ನಗರಸಭೆ, ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪರಿಣಾಮವಾಗಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಚುನಾಯಿತ ಪ್ರತಿನಿಧಿಗಳು ‘ಒಂದು ತಿಂಗಳಲ್ಲೇ ಎಲ್ಲವೂ ಸರಿಹೋಗುತ್ತೆ’ ಎಂದು ದಶಕಗಳ ಕಾಲ ಭರವಸೆ ನೀಡುತ್ತಾ ಬಂದಿದ್ದಾರೆ. ಆದರೆ, ಯಾವುದೂ ಈಡೇರಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವಂತ ಹಣದಲ್ಲಿ ಮಣ್ಣು ಹಾಕಿಸಿಕೊಳ್ಳುವ, ಹದಗೆಟ್ಟ ಜಾಗಕ್ಕೆ ಸಿಮೆಂಟ್‌ನಿಂದ ತೇಪೆ ಹಾಕಿಸಿಕೊಳ್ಳುವ ಪರಿಸ್ಥಿತಿ ಇದೆ. ಮಳೆನೀರು ನಿಂತು ಕೆಸರು ರಾಡಿಯಾಗುವುದು, ಅಧ್ವಾನಗೊಂಡ ಚರಂಡಿಗಳಿಂದ ಕಲುಷಿತ ನೀರು ಮಣ್ಣಿನ ರಸ್ತೆಗೆ ಸೇರುವುದು ಮಾಮೂಲಿ ಆಗಿದೆ ಎನ್ನುತ್ತಾರೆ ಸ್ಥಳೀಯರು.

ಎಂಟಿಬಿ ಪಾರ್ಕ್ ಬಳಿ ರಸ್ತೆ ಸ್ಥಿತಿ
ಹೂಮಂಡಿ ಮಾರುಕಟ್ಟೆ ಬಳಿಯ ರಸ್ತೆ 
ಅನ್ನಪೂರ್ಣೇಶ್ವರಿ ನಗರದ ಕಚ್ಚಾ ರಸ್ತೆ 
ಕಾಲ್ಡ್ ವೆಲ್ ಶಾಲೆ ರಸ್ತೆ
ರಸ್ತೆಗಳು ಡಾಂಬರೇ ಕಂಡಿಲ್ಲ. ಎಷ್ಟೋ ವರ್ಷಗಳಿಂದ ಪರಿಸ್ಥಿತಿ ಹೀಗೆಯೇ ಇದೆ. ಯಾರಿಗೆ ಹೇಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ.
ಬಾಲರಾಜ್ 29ನೇ ವಾರ್ಡ್ ನಿವಾಸಿ ಕಮ್ಮವಾರಿ ನಗರ
ಬೆಂಗಳೂರು ಸೆರೆಗಿನ ‌ಹೊಸಕೋಟೆ ಇಂದಿಗೂ ಅಭಿವೃದ್ಧಿ ಕಂಡಿಲ್ಲ. ನಗರದ ಕೆಲವು ಓಣಿಗಳು ಇಂದಿಗೂ ಡಾಂಬರ್ ಆಗಲಿ ಸಿಸಿ ರಸ್ತೆಯನ್ನಾಗಲಿ ಕಂಡಿಲ್ಲ
ಮುನಿರಾಜು ಅಂಬೇಡ್ಕರ್ ನಗರ ನಿವಾಸಿ
ಪ್ರತಿಯೊಬ್ಬ ಚುನಾಯಿತ ನಗರಸಭೆ ಸದಸ್ಯರು ನಿಸ್ವಾರ್ಥದಿಂದ ಕೆಲಸ ಮಾಡಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಹದಗೆಟ್ಟ ಕಚ್ಚಾ ರಸ್ತೆಗಳೇ ನಮಗೆ ಗ್ಯಾರಂಟಿಗಳು.
ಆನಂದ್ ಮಿಲನ ಕಲ್ಯಾಣ ಮಂಟಪ ಸಮೀಪ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.