ADVERTISEMENT

ಹೊಸಕೋಟೆ: ಬಸ್ ನಿಲುಗಡೆ ಇಲ್ಲದೆ ಪ್ರಯಾಣಿಕರ ಪರದಾಟ

ಸೆಟ್ಲ್‌ ಬಸ್‌–ಬಿಎಂಟಿಸಿ ಬಸ್ ಬೇಡಿಕೆಗೆ ಕಿವಿಯಾಗದ ಜನಪ್ರತಿನಿಧಿಗಳು, ಅಧಿಕಾರಿಗಳು

ಎನ್.ಡಿ.ವೆಂಕಟೇಶ್‌
Published 20 ಜನವರಿ 2025, 4:10 IST
Last Updated 20 ಜನವರಿ 2025, 4:10 IST
<div class="paragraphs"><p>ಹೊಸಕೋಟೆ ಬಸ್ ನಿಲ್ದಾಣದಲ್ಲಿ ಬಸ್ ಸಂಖ್ಯೆ ಕಡಿಮೆ ಇರುವ ಕಾರಣ‌ ಬಂದ ಬಸ್ ಗೆ ಹತ್ತಲು ನೂಕು ನುಗ್ಗಲು ಉಂಟಾಗಿರುವುದು</p></div>

ಹೊಸಕೋಟೆ ಬಸ್ ನಿಲ್ದಾಣದಲ್ಲಿ ಬಸ್ ಸಂಖ್ಯೆ ಕಡಿಮೆ ಇರುವ ಕಾರಣ‌ ಬಂದ ಬಸ್ ಗೆ ಹತ್ತಲು ನೂಕು ನುಗ್ಗಲು ಉಂಟಾಗಿರುವುದು

   

ಹೊಸಕೋಟೆ: ‌ತಾಲ್ಲೂಕಿನಲ್ಲಿ ಎರಡು ಹೆದ್ದಾರಿ ಹಾದು ಹೋಗುತ್ತದೆ. ಆದರೆ ಹಳ್ಳಿಗಳ ಗೇಟ್‌ಗಳಲ್ಲಿ ಬಸ್‌ಗಳು ನಿಲ್ಲಿಸದ ಕಾರಣ ಪ್ರಯಾಣಿಕರು ವೇಗದೂತ ಬಸ್ ಹತ್ತಲು ನಿಲುಗಡೆ ಇರುವ ದೂರದ ಊರುಗಳಿಗೆ ಹೋಗಬೇಕಿದೆ. ಇದನ್ನು ತಪ್ಪಿಸಲು ತಾಲ್ಲೂಕಿನ ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಸೆಟ್ಲ್‌ ಬಸ್‌ ಮತ್ತು ಬಿಎಂಟಿಸಿ ಬಸ್‌ಗಳನ್ನು ನಿಯೋಜಿಸಬೇಕೆಂಬ ‍ಪ್ರಯಾಣಿಕರ ಬೇಡಿಕೆ ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಕೇಳಿಸದಾಗಿದೆ.

ಬೆಂಗಳೂರು–ಚೆನ್ನೈ ಹೆದ್ದಾರಿ ಹಾಗೂ ಬೆಂಗಳೂರು-ಕಡಪಾ-ಅಮರಾವತಿ ಹೆದ್ದಾರಿ ನಗರ ಮತ್ತು ತಾಲ್ಲೂಕಿನ ಮೂಲಕ ಹಾದು ಹೋಗುತ್ತದೆ. ಇವೆರಡು ಹೆದ್ದಾರಿ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ.

ADVERTISEMENT

ಎರಡೂ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೇಗದೂತ ಬಸ್‌ಗಳು ಸಂಚರಿಸುತ್ತವೆ. ಅವು ನಿಗದಿತ ಸ್ಥಳಗಳಲ್ಲಿ ಮಾತ್ರ ನಿಲುಗಡೆ ಮಾಡುತ್ತಿವೆ. ಹೀಗಾಗಿ ರಸ್ತೆ ಇಕ್ಕೆಲ್ಲಗಳಲ್ಲಿರುವ ಸಣ್ಣಪುಟ್ಟ ಹಳ್ಳಿಗಳ ಪ್ರಯಾಣಿಕರು ಆ ನಿಲುಗಡೆಗೆ ಹೋಗಬೇಕಿದೆ. ಇದರಿಂದ ನಗರಕ್ಕೆ ಬರುವ ರೈತರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಮ್ಮ ಗಮ್ಯ ಸ್ಥಾನ ತಲುಪಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ.

ಕೋಲಾರ ರಸ್ತೆಯ ತಾವರೆಕೆರೆ, ಮುಗಬಾಳ ಗ್ರಾಮಗಳ ಬಳಿ ಬಸ್ ನಿಲುಗಡೆ ಇದೆ. ಎರಡೂ ಕಡೆ ಮೇಲ್ಸೇತುವೆ ಇರುವ ಕಾರಣ ಬಸ್‌ಗಳು ಸೇತುವೆಯಿಂದ ಕೆಳಗೆ ಇಳಿಯದೆ ನೇರವಾಗಿ ಸಂಚರಿಸುತ್ತಿವೆ. ಇದರಿಂದ ಪ್ರಯಾಣಿಕರು ಗಂಟೆ ಗಟ್ಟಲೇ ಬಸ್‌ಗಾಗಿ ಕಾಯಬೇಕಿದೆ ದುಸ್ಥಿತಿ.

ಚಿಂತಾಮಣಿ ರಸ್ತೆಯಲ್ಲಿ ಚಿಕ್ಕ ಹುಲ್ಲೂರು, ದೊಡ್ಡಹುಲ್ಲೂರು, ಭೀಮಕನಹಳ್ಳಿ, ಡಿ.ಶೆಟ್ಡಿಹಳ್ಳಿ, ಸತ್ಯವಾರ, ಕರಪ್ಪನಹಳ್ಳಿ, ಶಿವನಾಪುರ ಕ್ರಾಸ್, ಬನಹಳ್ಳಿ, ಹಿಂಡಿಗನಾಳ, ಲಕ್ಷ್ಮೀಪುರ ಹಳ್ಳಿಗಳು ಇವೆ. ಈ ಎಲ್ಲಾ ಹಳ್ಳಿಗಳಿಗೂ ಪಿಲ್ಲಗುಂಪೆ, ಮಲ್ಲಿಮಾಕನಪುರ, ನಂದಗುಡಿ, ಡಿ.ಶೆಟ್ಟಹಳ್ಳಿ, ನಂದಗುಡಿಗಳಲ್ಲಿ ಮಾತ್ರ ವೇಗಧೂತ ಬಸ್‌ ಗಳು ನಿಲುಗಡೆ ಮಾಡುತ್ತವೆ. ಉಳಿದಂತೆ ಎಲ್ಲಾ ಹಳ್ಳಿಗಳೂ ಈ ಹಳ್ಳಿಗಳಿಗೆ ಬಂದು ಬಸ್ ಹತ್ತಬೇಕು.

ಈ ಭಾಗದಲ್ಲಿ ದಿನದಲ್ಲಿ ಬೆರಳೆಣಿಕೆಯಷ್ಟು ಬಾರಿ ಮಾತ್ರ ಬಿಎಂಟಿಸಿ ಮತ್ತು ಚಿಂತಾಮಣಿಯ ಕೆಎಸ್ಆರ್‌ಸಿ ಸೆಟ್ಲ್ ಬಸ್‌ ಸಂಚರಿಸುತ್ತಿವೆ. ಆದರೆ ಅವುಗಳಿಗೆ ಗಂಟೆಗಟ್ಟಲೆ ಕಾಯಬೇಕಿದೆ. ಆದ್ದರಿಂದ ಹೊಸಕೋಟೆ ತಾಲ್ಲೂಕು ವ್ಯಾಪ್ತಿಯ ಜನರಿಗೆ ಅನುಕೂಲವಾಗುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಬಿಎಂಟಿಸಿ ಬಸ್‌ ನಿಯೋಜಿಸಬೇಕೆಂಬುದು ಸ್ಥಳೀಯರ ಬಹುದಿನದ ಬೇಡಿಕೆಯಾಗಿದೆ.

ನರಕಯಾತನೆ: ಹಬ್ಬ ಹರಿದಿನದ ಸಂದರ್ಭ ಬೆಂಗಳೂರಿನಿಂದಲೇ ಬಸ್‌ಗಳು ತುಂಬಿ ತುಳುಕಿಕೊಂಡು ಬರುತ್ತವೆ. ಹೊಸಕೋಟೆಯಲ್ಲೂ ಬಸ್‌ ನಿಲ್ಲುವುದಿಲ್ಲ. ಆ ಸಂದರ್ಭದಲ್ಲಿ ಹೊಸಕೋಟೆಯಿಂದ ಎರಡೂ ರಸ್ತೆಗಳ ಮೂಲಕ ಪ್ರಯಾಣಿಸಲು ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಾರೆ. ಅಂತಹ ಸಂದರ್ಭದಲ್ಲಿ ಬಿಎಂಟಿಸಿ, ಕೆಎಸ್ಆರ್‌ಟಿಸಿ ಸೆಟ್ಲ್ ಬಸ್‌ ನಿಯೋಜಿಸಿದರೆ ಅನುಕೂಲ ಆಗುತ್ತದೆ ಎನ್ನುತ್ತಾರೆ ಪ್ರಯಾಣಿಕರು.

ಜನ ಏನಂತಾರೆ?

ಮನವಿ ನೀಡಿದರೂ ಪ್ರಯೋಜನ ಇಲ್ಲ ಚಿಂತಾಮಣಿಯಿಂದ ಹೊಸಕೋಟೆಗೆ ನೀಲಿ ಬಣ್ಣದ ಸೆಟ್ಲ್ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ಅವು ಈಗ ಕಡಿಮೆಯಾಗಿವೆ. ಇದರಿಂದ ತುಂಬಾ ತೊಂದರೆಯಾಗಿದೆ. ಈ ಕುರಿತು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಅನುಕೂಲ ಆಗಲಿಲ್ಲ. ಈ ಸಮಸ್ಯೆಯಿಂದ ರೈತ ಕೃಷಿ ಕಾರ್ಮಿಕ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.

-ಮೋಹನ್ ಬಾಬು ಪ್ರಯಾಣಿಕ ಹಿಂಡಿಗನಾಳ

ಉಪಯೋಗ ಆಗದ ‘ಶಕ್ತಿ’. ಕೋಲಾರ ರಸ್ತೆಯ ಮೂಲಕ ಹೊಸಕೋಟೆಗೆ ತೆರಳಬೇಕಾದರೆ ಹರಸಾಹಸಪಡಬೇಕಿದೆ. ಸರ್ಕಾರ ಶಕ್ತಿ ಯೋಜನೆ ಮೂಲಕ ಉಚಿತ ಬಸ್ ಪ್ರಯಾಣ ಕಲ್ಪಿಸಿದೆ. ಆದರೆ ಸರ್ಕಾರಿ ಬಸ್‌ ಸೌಲಭ್ಯ ಸರಿಯಾಗಿ ಇಲ್ಲದ ಕಾರಣ ‘ಶಕ್ತಿ’ ಉಪಯೋಗ ಆಗುತ್ತಿಲ್ಲ. ಕೋಲಾರ ರಸ್ತೆಯಲ್ಲಿ ಎಲ್ಲಾ ಗ್ರಾಮಗಳ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಬೇಕು.

-ಶಾರದಮ್ಮ ಗೃಹಿಣಿ ಮೈಲಾಪುರ

ನಮ್ಮ ಗ್ರಾಮದ ಬಳಿ ಎಲ್ಲಾ ಎಕ್ಸ್‌ಪ್ರೆಸ್‌ ಬಸ್‌ಗಳು ನಿಲ್ಲಿಸುತ್ತವೆ. ಇಲ್ಲಿಗೆ ಹಲವು ಗ್ರಾಮಗಳ ಜನರು ಬಸ್ಸಿಗಾಗಿ ಬರುತ್ತಾರೆ.  ಈಗ ಬರುತ್ತಿರುವ ಬಸ್‌ಗಳ ಸಂಖ್ಯೆ ಕಡಿಮೆ ಇದೆ. ಇದರಿಂದ ಬಸ್‌ಗಳು ಸದಾ ತುಂಬಿರುತ್ತದೆ. ಈ ಅನಾನುಕೂಲ ತಪ್ಪಿಸಲು ಬಸ್‌ಗಳನ್ನು ಈ ಮಾರ್ಗದಲ್ಲಿ ನಿಯೋಜಿಸಬೇಕು.

-ತೇಜಸ್ ವಿದ್ಯಾರ್ಥಿ ಮುಗಬಾಳ

ಬಸ್‌ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಸಂದರ್ಭದಲ್ಲಿ ಅಂತೂ ಪರದಾಡಬೇಕಾಗುತ್ತಿದೆ. ಶಾಲಾ –ಕಾಲೇಜುಗಳ ಸಮಯಕ್ಕೆ ಎಲ್ಲ ಗ್ರಾಮಗಳಲ್ಲಿ ನಿಲುಗಡೆ ಕೊಡುವ ಬಸ್‌ಗಳನ್ನು ಕೋಲಾರ ಮತ್ತು ಚಿಂತಾಮಣಿ ರಸ್ತೆಯಲ್ಲಿ ನಿಯೋಜಿಸಬೇಕು

- ವೈಷ್ಣವಿ ವಿದ್ಯಾರ್ಥಿನಿ ನಂದಗುಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.