ADVERTISEMENT

ಶೋಷಿತರ ಬಾಳಿನ ಎರಡು ಧ್ರುವತಾರೆ

ಬಾಬಾ ಸಾಹೇಬ್, ಬಾಬೂಜಿ ದೇಶದ ಎರಡು ಕಣ್ಣು

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 2:21 IST
Last Updated 8 ಜುಲೈ 2025, 2:21 IST
ಹೊಸಕೋಟೆ ತಾಲ್ಲೂಕು ಕಚೇರಿಯಲ್ಲಿ ಮಾಜಿ ಪ್ರಧಾನಿ ಬಾಬೂ ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಲಾಯಿತು
ಹೊಸಕೋಟೆ ತಾಲ್ಲೂಕು ಕಚೇರಿಯಲ್ಲಿ ಮಾಜಿ ಪ್ರಧಾನಿ ಬಾಬೂ ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಲಾಯಿತು   

ಹೊಸಕೋಟೆ: ದೇಶದಲ್ಲಿ ತುಳಿತಕ್ಕೆ ಒಳಪಟ್ಟ ಎಲ್ಲಾ ವರ್ಗದ ಜನರಿಗಾಗಿ ತನ್ನ ಇಡೀ ಜೀವನವನ್ನು ತ್ಯಾಗ ಮಾಡಿ ಸಂವಿಧಾನ ಜಾರಿಗೆ ತಂದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂದರೆ, ಆ ಸಂವಿಧಾನದ ಆಶಯಗಳನ್ನು ಜಾರಿಗೆ ತರುವ ಮಹತ್ತರ ಕೆಲಸವನ್ನು ಮಾಜಿ ಉಪ ಪ್ರಧಾನಿ ಬಾಬೂ ಜಗಜೀವನ್‌ರಾಂ ಮಾಡಿದರು ಎಂದು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಹೇಳಿದರು.

ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಬಾಬೂ ಜಗಜೀವನ್ ರಾಂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೀನ ದಲಿತರನ್ನು ಅತ್ಯಂತ ನಿಕೃಷ್ಟವಾಗಿ ನೋಡುತ್ತಿದ್ದ ಸಂದರ್ಭದಲ್ಲಿ ಈ ಎರಡೂ ಧ್ರುವತಾರೆಗಳು ಶೋಷಿತರ ಬಾಳಿನಲ್ಲಿ ಬೆಳಕು ತಂದವರು. ಎರಡೂ ಶಕ್ತಿಗಳನ್ನು ಇಂದು ದೇಶ ದಲಿತ ವರ್ಗಕ್ಕೆ ಸೇರಿದವರು ಎಂದು ನೋಡುತ್ತದೆ. ಆದರೆ ಸಂವಿಧಾನದಿಂದ ದೇಶದ ಕಟ್ಟಕಡೆಯ ವ್ಯಕ್ತಿಯೂ ಸ್ವಾಭಿಮಾನದಿಂದ ಧೈರ್ಯವಾಗಿ ಬದುಕುವಂತಾಗಿದೆ ಎಂದು ತಿಳಿಸಿದರು.

ADVERTISEMENT

ಅದೇ ರೀತಿ ಸಂವಿಧಾನದ ಮೂಲಕ ಉಪ ಪ್ರಧಾನಿಯಾದ ಬಾಬೂ ಜಗಜೀವನ್ ರಾಮ್ ಅವರು ಹಸಿರು ಕ್ರಾಂತಿಯ ಮೂಲಕ ಇಡೀ ದೇಶದ ಹಸಿವು ನೀಗಿಸಿದರು. ದೇಶ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ನೆರವಾದರು ಎಂದು ಸ್ಮರಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜು, ಅಂಬೇಡ್ಕರ್‌ ಮತ್ತು ಬಾಬೂ ಜಗ ಜೀವನ್‌ರಾಂ ಎಂಬ ಎರಡೂ ಧ್ರುವತಾರೆಗಳು ತಮ್ಮ ಜೀವನ ತ್ಯಾಗ ಮಾಡಿ ತುಳಿತಕ್ಕೆ ಒಳಗಾದವರ ಶ್ರೇಯಸ್ಸಿಗಾಗಿ ಹೋರಾಡಿದರು. ಆದರೆ ಅದೇ ವರ್ಗ ಅವರ ಆಶಯಗಳನ್ನು ಮರೆತಿರುವುದು ಬೇಸರ ತರಿಸಿದೆ ಹೇಳಿದರು.

ಹಿಂದೆಂದಿಗಿಂತಲೂ ಇಂದು ಅಂಬೇಡ್ಕರ್ ಮತ್ತು ಜಗಜೀವನ್ ರಾಂ ಅವರ ಆಶಯಗಳು ಸಮಾಜಕ್ಕೆ ಬೇಕಿದೆ. ಅವರ ಆಶಯಗಳಿಗೆ ತಕ್ಕಂತೆ ಜೀವನ ನಡೆಸುವುದನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ತಾ.ಪಂ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ, ನಗರ ಯೋಜನಾ ಪ್ರಾದಿಕಾರದ ನಿರ್ದೇಶಕ ಎಚ್.ಎಂ.ಸುಬ್ಬರಾಜು, ಮುನಿರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.