ಹೊಸಕೋಟೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೆಚ್ಚುವರಿ ಕಾರ್ಯಭಾರ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಎರಡು ತಿಂಗಳ ಕೆಲಸಕ್ಕೆ ಕೇವಲ 15 ದಿನದ ವೇತನ ಮಾತ್ರ ನೀಡಲಾಗಿದೆ.
ವೇತನವನ್ನೇ ನಂಬಿ ಜೀವನ ನಡೆಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮೂರನೇ ಎರಡರಷ್ಟಿರುವ ಅತಿಥಿ ಉಪನ್ಯಾಸಕರು ಪಗಾರ ಇಲ್ಲದೆ ಜೀವನ ನಿರ್ವಹಣೆಗೂ
ಪರದಾಡುವಂತಾಗಿದೆ.
ಈ ಹಿಂದೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದವರನ್ನೇ 2024-25ನೇ ಸಾಲಿನಲ್ಲೂ ಮುಂದುವರೆಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಅದರಂತೆ ಅಕ್ಟೋಬರ್‌ನಿಂದ ಅತಿಥಿ ಉಪನ್ಯಾಸಕರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.
ಆದರೆ, ಇದುವರೆಗೂ ಕೇವಲ ಅಕ್ಟೋಬರ್ ತಿಂಗಳ ವೇತನ ಮಾತ್ರ ನೀಡಲಾಗಿದೆ. ನವೆಂಬರ್ ಮತ್ತು ಡಿಸೆಂಬರ್ ಈ ಎರಡು ತಿಂಗಳು ಸೇರಿಸಿ ಕೇವಲ 15 ದಿನದ ವೇತನ ನೀಡಿಲಾಗಿದೆ. ಒಂದೂವರೆ ತಿಂಗಳ ಪಗಾರ ತಡೆ ಹಿಡಿಯಲಾಗಿದೆ.
ಪ್ರತಿ ವರ್ಷ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡಲು 12 ಸಾವಿರ ಅತಿಥಿ ಉಪನ್ಯಾಸಕರು ಬೇಕಾಗುತ್ತದೆ. ಈ ಸಂಖ್ಯೆಗೆ ಒಂದು ವರ್ಷಕ್ಕೆ ಬೇಕಾಗುವ ಗೌರವಧನದ ಅನುದಾನ ಮೀಸಲಾಗಿ ಇಡಬೇಕು. ಪ್ರತಿ ತಿಂಗಳೂ 1ನೇ ತಾರೀಖು ಅತಿಥಿ ಉಪನ್ಯಾಸಕರ ಖಾತೆಗೆ ಗೌರವಧನ ಜಮಾ ಮಾಡಬೇಕು. ಆದರೆ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಮೂರನೇ ಎರಡರಷ್ಟಿರುವ ಅತಿಥಿ ಉಪನ್ಯಾಸಕರಿಗೆ ಕನಿಷ್ಠಪಕ್ಷ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ವೇತನವನ್ನೂ ನೀಡುತ್ತಿಲ್ಲ ಎನ್ನುತ್ತಾರೆ ಸಂತ್ರಸ್ತ ಅತಿಥಿ ಉಪನ್ಯಾಸಕ ರಮೇಶ್.
ಕುಟುಂಬ ನಿರ್ವಹಣೆ ಕಷ್ಟ
ಅತಿಥಿ ಉಪನ್ಯಾಸಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಈ ಹಿಂದೆ ಅತಿಥಿ ಉಪನ್ಯಾಸಕರು ಹೋರಾಟ ಮಾಡಿದ ಸಂದರ್ಭದಲ್ಲಿ ‘ನಾನೂ ಶಿಕ್ಷಕನಾಗಿ ಕೆಲಸ ಮಾಡಿದ್ದು ನಿಮ್ಮ ಸಮಸ್ಯೆ ಗೊತ್ತಿದೆ. ಪರಿಹಾರ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಹೇಳಿದ್ದರು. ಅವರ ಮಾತು ನಂಬಿ ಹೋರಾಟ ಹಿಂಪಡೆಯಲಾಗಿತ್ತು. ಗೌರವಧನ ವಿಳಂಬವಾಗುತ್ತಿದೆ. ಮಕ್ಕಳ ಶಿಕ್ಷಣ ಮನೆ ಬಾಡಿಗೆ ಮತ್ತು ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ.–ಮಂಜುಳಾ, ಅತಿಥಿ ಉಪನ್ಯಾಸಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.