
ಹೊಸಕೋಟೆ: ಚಳಿಗೆ ಅರಳದ ಗುಲಾಬಿ.. ಬಾಡಿದ ಬೆಳೆಗಾರರ ಮೊಗ
ಹೊಸಕೋಟೆ: ವಿಪರೀತ ಮಂಜು, ಶೀತ, ಚಳಿ ಹಾಗೂ ಬಕುಂಗ್ ಚಂಡಮಾರುತದಿಂದಗಿ ಗುಲಾಬಿ ಹೂ ಅರಳುತ್ತಿಲ್ಲ. ಇದರಿಂದ ರಾಜದಲ್ಲೇ ಅತಿ ಹೆಚ್ಚು ಬಟನ್(ಗುಲಾಬಿ) ಬೆಳೆಯುವ ಹೊಸಕೋಟೆ ತಾಲ್ಲೂಕಿನಲ್ಲಿ ಇಳುವರಿ ಕುಸಿಯುವ ಆತಂಕ ಶುರುವಾಗಿದೆ.
ತಾಲ್ಲೂಕಿನಲ್ಲಿ ಕಳೆದ ತಿಂಗಳು ದಿತ್ವಾ, ಈಗ ಬಕುಂಗ್ ಚಂಡಮಾರುತದ ಪ್ರಭಾವ ವಾತಾವರಣದಲ್ಲಿ ವಿಪರೀತ ಚಳಿ, ಮತ್ತು ಮಂಜು ಆವರಿಸಿದೆ. ಸೋನೆ ಬೀಳುತ್ತಿರುವುದರಿಂದ ವಾತಾವರಣದಲ್ಲಿ ತಾಪಮಾನ 13 ಡಿಗ್ರಿಗೆ ಕುಸಿದಿದೆ. ಇದರಿಂದ ಗುಲಾಬಿ ಮಗ್ಗು ಮೂರ್ನಾಲ್ಕು ದಿನ ಕಳೆದರೂ ಅರಳುತ್ತಿಲ್ಲ. ಅವಧಿ ಮೀರಿ ಅರಳುವ ಹೂ ಮಾರುಕಟ್ಟೆಗೆ ಸಾಗಿಸುವ ಮುನ್ನವೇ ಬಾಡಿ ಹೋಗುತ್ತದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ.
ದಸರಾ ಹಬ್ಬ, ದೀಪಾವಳಿ ಹಬ್ಬದ ನಂತರ ಬಟನ್ಸ್ ಬೆಲೆ ಕುಸಿದಿದೆ. ಒಂದು ಕೆ.ಜಿ ₹40ರಿಂದ ₹45ಗೆ ಮಾರಾಟವಾಗುತ್ತಿದೆ. ಬೆಲೆಯೊಂದಿಗೆ ಇಳುವರಿಯೂ ಕುಸಿದಿರುವುದರಿಂದ ರೈತರಲ್ಲಿ ನಷ್ಟದ ಭೀತಿ ಮೂಡಿದೆ.
ತಾಲ್ಲೂಕಿನಲ್ಲಿ ಒಟ್ಟು ಎರಡು ಸಾವಿರ ಹೆಕ್ಟೇರ್‌ನಲ್ಲಿ ಗುಲಾಬಿ ಬೆಳೆಯಲಾಗುತ್ತಿದೆ. ಹೊಸಕೋಟೆಯ ಕಸಬಾ, ಸೂಲಿಬೆಲೆ, ನಂದಗುಡಿ ಹೋಬಳಿಗಳಲ್ಲಿ ಕರಿಷ್ಮ, ಎಲ್ಲೋರೊಸ್, ಪನ್ನೀರ್ ರೋಸ್, ಮೆರಾಬೂಲ್, ಮೋದಿ, ಓಪನ್ ರೋಸ್ ಬೆಳೆಯುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮೆರಾಬೂಲ್ ರೋಸ್ ಅನ್ನು ಮಾತ್ರ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಇತ್ತೀಚೆಗೆ ಹೆಚ್ಚಾದ ಚಳಿಯಿಂದ ಕೊಳಪೆ, ಚುಕ್ಕೆ, ಬೆಂಕಿ ರೋಗಕ್ಕೆ ತುತ್ತಾಗಿ ಗುಲಾಬಿ ಗಿಡ ಎಲೆ ಉದುರುತ್ತಿದೆ.
ತಾಲ್ಲೂಕಿನ ಬೇರೆ ಬೇರೆ ತಳಿಯ ರೋಸ್ ಹೂ ಚೆನ್ನೈ, ರಾಜಮಂಡ್ರಿ, ಕರ್ನೂಲ್, ಕಡಪ, ಹೈದ್ರಾಬಾದ್, ಬಳ್ಳಾರಿ ಮೊದಲಾದ ಪ್ರದೇಶಗಳಿಗೆ ಪ್ರತಿನಿತ್ಯ ರಫ್ತು ಮಾಡಲಾಗುತ್ತದೆ.
ಚಳಿ ಮತ್ತು ಮಳೆಗೆ ಮೊಗ್ಗು ಮೂರು ದಿನ ಆದರೂ ಅರಳುವ ಮುನ್ಸೂಚನೆ ಇಲ್ಲ. ಅಲ್ಲಲ್ಲಿ ಅರಳಿದರೂ ಕಟಾವು ಮಾಡಲು ಕೂಲಿ ಆಳು ಬರುತ್ತಿಲ್ಲ. ಸಂಜೆ ಕಿತ್ತರೆ ಬೆಳಿಗ್ಗೆ ಮಾರುಕಟ್ಟೆಯಲ್ಲಿ ಅದಕ್ಕೆ ಉತ್ತಮ ಬೆಲೆ ಸಿಗುವುದಿಲ್ಲ ಎಂದು ರೋಸ್ ಬೆಳೆಗಾರರು ಕಂಗಾಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.