ADVERTISEMENT

‘ಸ್ವಂತ ಹಣದಲ್ಲಿ ಮನೆ ನಿರ್ಮಿಸಿಕೊಡುವೆ’

ಶಾಸಕ ನಿಸರ್ಗ ನಾರಾಯಣಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2019, 15:00 IST
Last Updated 14 ಜನವರಿ 2019, 15:00 IST
ನಿವೇಶನ ನೀಡಬೇಕೆಂದು ಸಂಸದ ಡಾ.ಎಂ.ವೀರಪ್ಪ ಮೊಯಿಲಿ ಅವರಿಗೆ ಮನವಿ ಸಲ್ಲಿಸಿದರು ಮಹಿಳೆಯರು, ಶಾಸಕ ನಿಸರ್ಗ ನಾರಾಯಣಸ್ವಾಮಿ ಇದ್ದರು
ನಿವೇಶನ ನೀಡಬೇಕೆಂದು ಸಂಸದ ಡಾ.ಎಂ.ವೀರಪ್ಪ ಮೊಯಿಲಿ ಅವರಿಗೆ ಮನವಿ ಸಲ್ಲಿಸಿದರು ಮಹಿಳೆಯರು, ಶಾಸಕ ನಿಸರ್ಗ ನಾರಾಯಣಸ್ವಾಮಿ ಇದ್ದರು   

ವಿಜಯಪುರ: ‘ನಮಗೆ ನಿವೇಶನಗಳಿಲ್ಲದೆ ಪರದಾಡುತ್ತಿದ್ದೇವೆ. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ರೇಷ್ಮೆ ಬೆಳೆ ಬೆಳೆಯುತ್ತೇವೆ. ಇದರಲ್ಲಿ ಬಂದ ಹಣವೂ ಮನೆ ಬಾಡಿಗೆ ಕಟ್ಟಲಿಕ್ಕೆ ಆಗುತ್ತದೆ. ಈಗಿನ ದುಬಾರಿ ಬೆಲೆಗಳಲ್ಲಿ ನಾವು ನಿವೇಶನ ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ನಮಗೆ ನಿವೇಶನಗಳನ್ನು ಕೊಡಿ’ ಎಂದು ಸಂಸದ ಎಂ.ವೀರಪ್ಪ ಮೊಯಿಲಿ ಅವರಿಗೆ ಮಹಿಳೆಯರು ಮನವಿ ಪತ್ರವನ್ನು ಸಲ್ಲಿಸಿದರು.

ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ವೇದಿಕೆಯಲ್ಲಿ ಮನವಿ ಪತ್ರ ಸ್ವೀಕರಿಸಿದಮಾತನಾಡಿದ ಅವರು, ’ಬಡವರಿಗೆ ವಸತಿ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅನುಕೂಲ ಮಾಡಿಕೊಡುವಂತಹ ಕೆಲಸ ಮಾಡುತ್ತೇವೆ‘ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ’ಸ್ಲಂ ಬೋರ್ಡ್‌ನಿಂದ 5 ಮನೆ ಮಂಜೂರು ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದೇನೆ. ಇಲ್ಲಿ ಭೂಮಿಯ ಲಭ್ಯತೆಯು ಕಡಿಮೆಯಿದೆ. ಆದ್ದರಿಂದ ಎಲ್ಲರಿಗೂ ನಿವೇಶನ ಮಂಜೂರು ಮಾಡಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದ ಭೂಮಿಯನ್ನು ಖರೀದಿಸಿ ಮನೆಗಳನ್ನು ನಿರ್ಮಿಸುವಂತಹ ಕಾರ್ಯ ಮಾಡುತ್ತೇವೆ‘ ಎಂದರು.

’ಈಗಾಗಲೇ ಸ್ಲಂ ಬೋರ್ಡ್‌ನಿಂದ ನಿವೇಶನ ರಹಿತ ಫಲಾನುಭವಿಗಳ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಒಂದು ವೇಳೆ ಸರ್ಕಾರ ಭೂಮಿ ಖರೀದಿಸದಿದ್ದರೆ ಸ್ವಂತ ಖರ್ಚಿನಲ್ಲಿ ಭೂಮಿ ಖರೀದಿಸಿ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಿಕೆ ಮಾಡುತ್ತೇನೆ‘ ಎಂದರು

’ಜನರು ಪುರಸಭೆಗೆ ಕಟ್ಟಬೇಕಾಗಿರುವ ತೆರಿಗೆ ಹಣ ಕಟ್ಟಬೇಕು. ಒಂದು ಕಾಲದಲ್ಲಿ ಬೇರೆ ಪುರಸಭೆಗಳಿಗೆ ಸಾಲ ಕೊಡುತ್ತಿದ್ದ ವಿಜಯಪುರ ಪುರಸಭೆ ಇಂದು ದಿವಾಳಿಯಾಗುತ್ತಿದೆ. ಆದ್ದರಿಂದ ಮೊದಲಿನ ಸ್ಥಿತಿಗೆ ತರಬೇಕಾಗಿದೆ. ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಎಂದಿಗೂ ಸಾಧ್ಯವಾಗುವುದಿಲ್ಲ‘ ಎಂದರು.

ತಹಶೀಲ್ದಾರ್ ರಾಜಣ್ಣ, ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಕೆ.ಪಿ.ಸಿ.ಸಿ. ಕಾರ್ಯದರ್ಶಿ ವಿ.ಮಂಜುನಾಥ್, ಸದಸ್ಯರಾದ ಎಸ್.ಭಾಸ್ಕರ್, ಎಂ.ಸತೀಶ್ ಕುಮಾರ್, ಅನಸೂಯಮ್ಮ, ಮುನಿಚಿನ್ನಪ್ಪ, ಮುಬಾರಕ್, ಮಹೇಶ್ ಕುಮಾರ್, ಎಂ.ನಾಗರಾಜ್, ಮುಖಂಡ ಹನೀಪುಲ್ಲಾ, ತಿರುಮಲೇಶ್, ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT