(ಸಂಗ್ರಹ ಚಿತ್ರ)
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಸಂಸದ ಅನಂತಕುಮಾರ ಹೆಗಡೆ ಅವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು. ಸಂವಿಧಾನದ ಮೇಲೆ ಬಿಜೆಪಿಗೆ ಗೌರವ ಇದ್ದರೆ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ತಾಲ್ಲೂಕಿನ ದುದ್ದನಹಳ್ಳಿಯಲ್ಲಿ ಸೋಮವಾರ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಹೆಗಡೆ ಮಾತುಗಳಿಂದ ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ ಎಂದರು. ಇಡೀ ವಿಶ್ವವೇ ಭಾರತ ಸಂವಿಧಾನವನ್ನು ಶ್ರೇಷ್ಠ ಗ್ರಂಥ ಎಂದು ಒಪ್ಪಿಕೊಂಡಿದೆ. ಅದು ಬಿಜೆಪಿಗರಿಗೆ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.
‘ಸಂವಿಧಾನ ರಕ್ಷಣೆಗೆ ಮತ್ತೊಂದು ಸ್ವಾತಂತ್ರ್ಯ ದಂಗೆ’
‘ಸಂವಿಧಾನ ಬದಲಾಯಿಸಲು ಯತ್ನಿಸಿದರೇ ಮತ್ತೊಂದು ಸ್ವಾತಂತ್ರ್ಯ ದಂಗೆ ನಡೆಸಬೇಕಾಗುತ್ತದೆ. ಕಾಂಗ್ರೆಸ್ಸಿಗರು ಪ್ರಾಣ ತ್ಯಾಗ ಮಾಡಿ ಬಾಬಾ ಸಾಹೇಬರ ಸಂವಿಧಾನ ಉಳಿಸುತ್ತೇವೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ಬಿಜೆಪಿಗರು ಸುಳ್ಳುಬುರುಕರು. ಮೊದಲಿನಿಂದಲೂ ಅವರಿಗೆ ಸಂವಿಧಾನದ ಬಗ್ಗೆ ಅಸೂಯೆ, ದ್ವೇಷ ಇದ್ದೇ ಇದೆ. ಅದನ್ನ ಈಗ ಈಡೇರಿಸಿಕೊಳ್ಳಲು ಹೊರಟ್ಟಿದ್ದಾರೆ. ದಲಿತರು, ಅಲ್ಪಸಂಖ್ಯಾತರು ಉದ್ಧಾರ ಆಗುವುದನ್ನು ಸಹಿಸದೆ ಮೀಸಲಾತಿಯನ್ನು ದ್ವೇಷ ಮಾಡುತ್ತಿದ್ದಾರೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ ಎಂದು ಅವರು ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಪದವನ್ನು ನಕಲು ಮಾಡಿದ ಮಾತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಗೆಲ್ಲುವುದಿಲ್ಲ. ಈ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಯು ಕರ್ನಾಟಕದ ಜನಪ್ರಿಯ ಮಾದರಿಯಾದ ಗ್ಯಾರಂಟಿಯನ್ನು ಅನುಸರಿಸುವ ನಾಟಕವಾಡುತ್ತಿದೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.