
ಆನೇಕಲ್: ಕೈಗಾರಿಕಾ ಪ್ರದೇಶ ಆನೇಕಲ್ ಬಾಂಗ್ಲಾ ಅಕ್ರಮ ವಲಸಿಗರ ತಾಣವಾಗುತ್ತಿದೆ. ಕಳೆದೊಂದು ವಾರದಲ್ಲಿ ತಾಲ್ಲೂಕಿನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 53ಕ್ಕೂ ಹೆಚ್ಚು ಬಾಂಗ್ಲಾದೇಶೀಯರನ್ನು ಪತ್ತೆ ಹಚ್ಚಿ ಬೆಂಗಳೂರಿನ ವಿದೇಶಿ ನೋಂದಾಣಿ ಕೇಂದ್ರಗೆ ಹಸ್ತಾಂತರಿಸಲಾಗಿದೆ.
ಆನೇಕಲ್ ಸುತ್ತಮುತ್ತ ಮತ್ತಷ್ಟು ಅಕ್ರಮ ಬಾಂಗ್ಲಾ ವಲಸಿಗರು ಆಧಾರ್ ಕಾರ್ಡ್ ನೆರವಿನೊಂದಿಗೆ ನೆಲೆಸಿರುವ ಶಂಕೆ ಇದ್ದು, ಅವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ತಾಲ್ಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದ 20 ಮಂದಿ ಮತ್ತು ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದ 16 ಬಾಂಗ್ಲಾ ದೇಶೀಯರನ್ನು ಪತ್ತೆ ಹಚ್ಚಿ ವಿದೇಶಿ ನೋಂದಣಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ.
ಇವರೆಲ್ಲರ ಬಳಿ ಪಶ್ಚಿಮ ಬಂಗಳಾದ ಆಧಾರ್ ಕಾರ್ಡ್‌ಗಳಿವೆ. ಆದರೆ, ಕೌಟುಂಬಿಕ ಹಿನ್ನೆಲೆ, ಮೂಲ ಊರು ಹಾಗೂ ಇತರ ದಾಖಲೆಗಳಿಲ್ಲ.
ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇಡಹಳ್ಳಿ ಸಮೀಪ ಜ.12ರಂದು ಶಂಕಿತ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎನ್ನಲಾದ ಗುಡಿಸಲುಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಗುಡಿಸಲು ತೆರವು ಕಾರ್ಯಾಚರಣೆ ಆರಂಭಿಸಿದ್ದರು. ಮೂಲ ದಾಖಲೆ ಸಲ್ಲಿಸಲು ಒಂದು ದಿನದ ಕಾಲಾವಕಾಶ ಕೇಳಿದ್ದರು.
ಮರುದಿನ ಆಧಾರ್ ಕಾರ್ಡ್ ಮಾತ್ರ ಸಲ್ಲಿಸಿದ್ದು, ತಂದೆ, ತಾಯಿ ದಾಖಲೆ ಮತ್ತು ಇತರ ಗುರುತಿನ ಪತ್ರ ನೀಡಿಲ್ಲ. ಹೀಗಾಗಿ ಇಲ್ಲಿ ವಾಸವಿದ್ದ 15 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ದಾಖಲಾತಿ ಪರಿಶೀಲನೆಗಾಗಿ ವಿದೇಶಿ ನೋಂದಣಿ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ. ಇದರಲ್ಲಿ ಕೆಲವರು ಬನ್ನೇರುಘಟ್ಟದಲ್ಲಿ ತಮ್ಮ ಸಂಬಂಧಿಕರು ಇರುವುದಾಗಿ ಹೇಳಿದ್ದು, ಪರಿಶೀಲನೆಗೆ ಪೊಲೀಸರು ಕರೆದೊಯ್ದಿದ್ದಾರೆ.
ಪ. ಬಂಗಾಳದ ಆಧಾರ್ ಕಾರ್ಡ್: ಬಾಂಗ್ಲಾ ವಲಸಿಗರೆಂದು ಶಂಕಿಸಲಾದ ಪ್ರತಿಯೊಬ್ಬರ ಬಳಿಯೂ ಆಧಾರ್ ಕಾರ್ಡ್‌ಗಳಿವೆ. ಇದರಲ್ಲಿ ಬಹುತೇಕ ಎಲ್ಲರ ಆಧಾರ್ ಕಾರ್ಡ್‌ಗಳಲ್ಲಿಯೂ ಪಶ್ಚಿಮ ಬಂಗಾಳದ ವಿಳಾಸವಿದೆ. ತಂದೆ–ತಾಯಿಯ ದಾಖಲೆ ಕೇಳಿದರೆ ದಾಖಲೆ ತರಿಸಲು ಸಮಯ ಬೇಕು ಎನ್ನುತ್ತಾರೆ.
ಜೈ ಬಾಂಗ್ಲಾ ಘೋಷಣೆ: ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಡಿಸಲು ತೆರವು ಸಂದರ್ಭದಲ್ಲಿ ಮಹಿಳೆಯೊಬ್ಬರು ಜೈ ಬಾಂಗ್ಲಾ ಘೋಷಣೆ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಘೋಷಣೆ ಕೂಗಿದ ಸರ್ಬಾನು ಖಾತುನ್(25) ಎಂಬ ಮಹಿಳೆಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಚಿಂದಿ ಆಯುವ ಕೆಲಸ: ಶಂಕಿತರು ಬಹುತೇಕ ಮಂದಿ ಚಿಂದಿ ಸಂಗ್ರಹ ಗೋದಾಮುಗಳಲ್ಲಿ ವಾಸವಾಗಿದ್ದಾರೆ. ಆನೇಕಲ್ ಸಮೀಪದ ಮೇಡಹಳ್ಳಿಯಲ್ಲಿ ಮಹಿಳೆಯರು, ಮಕ್ಕಳು ಸಹ ಅಲ್ಲಿಯೇ ಇದ್ದಾರೆ. ಎಲ್ಲರೂ ಚಿಂದಿ ಆಯುವುದು, ಕಬ್ಬಿಣ, ಪ್ಲಾಸ್ಟಿಕ್ ಆಯುತ್ತಾರೆ.
ಇವರಿಗೆ ಆಧಾರ್ ಕಾರ್ಡ್ ಮಾಡಿಕೊಟ್ಟವರು ಯಾರು? ಗಡಿ ದಾಟಿದ್ದು ಹೇಗೆ? ಆನೇಕಲ್ ಸುತ್ತಮುತ್ತ ಬಂದು ನೆಲೆಸಲು ಕಾರಣವೇನು? ಯಾರ ಸಹಾಯದಿಂದ ಬಂದರು? ಕಳೆದ ನಾಲ್ಕೈದು ವರ್ಷಗಳಿಂದ ಇವರು ಇಲ್ಲಿಯೇ ಇದ್ದರೂ ಯಾರಿಗೂ ಮಾಹಿತಿ ದೊರೆಯದಿರಲು ಕಾರಣವೇನು ಎಂಬ ಹಲವು ಪ್ರಶ್ನೆ ಮೂಡಿವೆ.
₹1,500ಕ್ಕೆ ಆಧಾರ್ ಕಾರ್ಡ್: ಬನ್ನೇರುಘಟ್ಟ ಸಮೀಪದ ಬೆಟ್ಟದಾಸಪುರ ಗ್ರಾಮದಲ್ಲಿ ನೆಲೆಸಿರುವ ಬಾಂಗ್ಲಾ ವಲಸಿಗ ಕಾರ್ಮಿಕ ₹1,500 ನೀಡಿ ಆಧಾರ್ ಕಾರ್ಡ್ ಮಾಡಿಸಿಕೊಂಡಿರುವುದಾಗಿ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವ್ಯಕ್ತಿಯ ಬಳಿ ಬಾಂಗ್ಲಾ ದೇಶದ ಜನನ ಪತ್ರ, ಅಲ್ಲಿಯ ವಾಹನ ಚಾಲನ ಪರವಾಗಿ ಇದೆ. ಎರಡು ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಕೂಡ ಇದೆ.
ಆನೇಕಲ್ ತಾಲೂಕಿನ ಸ್ಕ್ರ್ಯಾಪ್ ಶೆಡ್ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಶಂಕಿತ ಬಾಂಗ್ಲಾದೇಶಿ ವಲಸಿಗರ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ದಾಳಿ ನಡೆಸಿ ಅವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ವಿದೇಶಿ ನೋಂದಣಿ ಕೇಂದ್ರಕ್ಕೆ ಹಸ್ತಾಂತರಿಸಲಾಗುತ್ತಿದೆಮೋಹನ್ ಕುಮಾರ್ ಡಿವೈಎಸ್ಪಿ ಆನೇಕಲ್ ಉಪ ವಿಭಾಗ
ಮಾನವ ಹಕ್ಕು ಉಲ್ಲಂಘನೆ
ಮಕ್ಕಳು ಮಹಿಳೆಯರು ಹೆಚ್ಚಿರುವ ಈ ಗುಂಪುಗಳನ್ನು ಏಕಾಏಕಿ ಖಾಲಿ ಮಾಡಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಬಾಂಗ್ಲಾ ದೇಶೀಯರನ್ನು ಗಡಿಯೊಳಗೆ ಬಿಡಲು ಕಾರಣರಾದವರನ್ನು ಪತ್ತೆ ಹಚ್ಚಿ ಅವರಿಗೆ ಮೊದಲು ಶಿಕ್ಷೆ ನೀಡಬೇಕು. ಆಧಾರ್ ಕಾರ್ಡ್ ನಕಲಿ ಮಾಡಿಕೊಟ್ಟವರ ಬಗ್ಗೆ ಕ್ರಮ ವಹಿಸಬೇಕು. ಬಾಂಗ್ಲಾ ದೇಶದವರಾಗಿದ್ದರೂ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಇಲ್ಲದಿದ್ದರೆ ಮಹಿಳೆಯರು ಮಕ್ಕಳಿಗೆ ಸಮಸ್ಯೆಯಾಗಲಿದೆ. ಹಸುಳೆಗಳಿಗೆ ಬೀದಿ ಬದಿಯಲ್ಲಿ ಹಾಲುಣಿಸುತ್ತಿದ್ದ ದೃಶ್ಯ ಮೇಡಹಳ್ಳಿಯಲ್ಲಿ ಕಂಡು ಬಂತು. ಹಾಗಾಗಿ ಅವರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಿ ಬಾಂಗ್ಲಾ ದೇಶಕ್ಕೆ ಹಸ್ತಾಂತರಿಸಬೇಕು ಪುರುಷೋತ್ತಮ ಚಿಕ್ಕಹಾಗಡೆ ವಕೀಲ ಜಂಟಿ ಪರಿಶೀಲನೆ ನಡೆಸಿ ಆನೇಕಲ್ ತಾಲ್ಲೂಕಿನಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಜೊತೆ ಸೇರಿ ಪೊಲೀಸ್ ಇಲಾಖೆ ಜಂಟಿ ಪರಿಶೀಲನೆ ನಡೆಸಬೇಕು. ಆಗ ಮಾತ್ರ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಬಹುದು. ತಾಲ್ಲೂಕಿನ ಮರಸೂರು ಹೀಲಲಿಗೆ ಸೇರಿದಂತೆ ಹಲವೆಡೆ ಶಂಕಿ ಬಾಂಗ್ಲಾ ವಲಸಿಗರು ಇರುವ ಬಗ್ಗೆ ಮಾಹಿತಿ ಇದೆ. ಸ್ಥಳೀಯ ಗ್ರಾಮ ಪಂಚಾಯಿತಿ ಪೊಲೀಸರು ಪರಿಶೀಲನೆ ನಡೆಸಬೇಕು. ಇವರಿಗೆ ಆಧಾರ್ ಕಾರ್ಡ್ ನೀಡಿದವರು ಮತ್ತು ಕೆಲಸ ನೀಡಿದವರು ಬಗ್ಗೆ ಪರಿಶೀಲನೆ ನಡೆಸಬೇಕು ಭರತ್ ಬಿಜೆಪಿ ಮುಖಂಡ
ದಾಖಲಾತಿಗಳ ಪರಿಶೀಲನೆಗೆ ಸೂಚನೆ
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇದುವರೆಗೂ ಬಾಂಗ್ಲದೇಶದ ಅಕ್ರಮ ವಲಸಿಗರ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ದೂರುಗಳು ದಾಖಲಾಗಿಲ್ಲ. ಆದರೆ ಎರಡು ತಿಂಗಳ ಹಿಂದೆ ನೇಕಾರಿಕೆಯಲ್ಲಿ ತೊಡಗಿರುವ ಉತ್ತರ ಭಾರತದವರಲ್ಲಿ ಅಕ್ರಮ ಬಾಂಗ್ಲವಲಸಿಗರು ಇದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ನಗರ ಠಾಣೆ ಪೊಲೀಸರ ಸಮ್ಮುಖದಲ್ಲಿ ವಿವಿಧ ನೇಕಾರ ಸಂಘಟನೆಗಳ ಮುಖಂಡರ ಸಭೆ ನಡೆಸಿ ಹೊರಗಿನವರಿಗೆ ಮನೆ ಬಾಡಿಗೆ ನೀಡುವಾಗ ನೇಕಾರಿಕೆ ಸೇರಿದಂತೆ ಯಾವುದೇ ಕೆಲಸ ನೀಡುವಾಗ ಅಗತ್ಯ ದಾಖಲೆಗಳ ಪರಿಶೀಲನೆಗೆ ಪೊಲೀಸ್ ಠಾಣೆಯ ಗಮನಕ್ಕೆ ತರುವಂತೆ ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.