ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಹೋಬಳಿಯ ಬೀರಸಂದ್ರದ ಜಿಲ್ಲಾಡಳಿತ ಭವನದ ಸಮೀಪದ ಚಪ್ಪರಕಲ್ಲು ವೃತ್ತದಲ್ಲಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಮಳಿಗೆಗಳನ್ನು ಅಲೂರು ದುದ್ದನಹಳ್ಳಿ ಗ್ರಾಪಂ ಕಾರ್ಯಾಲಯ ಹಾಗೂ ವಿಶ್ವನಾಥಪುರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬುಧವಾರ ತೆರವು ಮಾಡಲಾಯಿತು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಅಂಗಡಿ ಇಟ್ಟುಕೊಂಡು ಸ್ಥಳೀಯರು ವ್ಯಾಪಾರ ಮಾಡುತ್ತಿದ್ದರು. ಇದರು ವಿರುದ್ಧ ಸಾಕಷ್ಟು ಸಂಘಟನೆಗಳು ದೂರು ಸಲ್ಲಿಸಿದ್ದವು.
‘ಚಪ್ಪರದಕಲ್ಲು ವೃತ್ತದಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಾಗಿದೆ. ರಸ್ತೆಗೆ ತೊಂದರೆಯಾಗುವಂತೆ ಅಡ್ಡದಿಡ್ಡಿಯಾಗಿ ಅನಧಿಕೃತವಾಗಿ ಹಾಕಲಾಗಿದ್ದ ಅಂಗಡಿಗಳನ್ನು ಸಾರ್ವಜನಿಕರ ಹಿತ ದೃಷ್ಟಿಯಿಂದ ಹಾಗೂ ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ತೆರವು ಮಾಡಲಾಗಿದೆ’ ಎಂದು ಆಲೂರು ದುದ್ದನಹಳ್ಳಿ ಗ್ರಾಪಂ ಪಿಡಿಒ ನಂದಿನಿ ತಿಳಿಸಿದರು.
‘ಈಗಾಗಲೇ ಅನಧಿಕೃತ ಮಳಿಗೆ ತೆರವು ಮಾಡುವಂತೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ತೊಂದರೆ ಆಗುವಂತೆ ಸರ್ಕಾರಿ ಜಾಗವನ್ನು ದುರ್ಬಳಕೆ ಮಾಡುವವರ ವಿರುದ್ಧ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ರಾಜ್ ಅಧಿನಿಯಮದ ಅಡಿಯಲ್ಲಿ ಕ್ರಮ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.
‘ಬೀರಸಂದ್ರ ಗ್ರಾಮದ ಸರ್ವೆ ನಂ 11ದ್ದು, ಸರ್ಕಾರಿ ಜಾಗವಾಗಿದ್ದು, ಇಲ್ಲಿ ಸಾಕಷ್ಟು ವರ್ಷಗಳಿಂದ ಅನಧಿಕೃತವಾಗಿ ವ್ಯಾಪಾರ ಮಳಿಗೆಗಳು ಕಾರ್ಯ ನಿರ್ವಹಣೆ ಮಾಡುತ್ತಿದ್ದವು, ಇದನ್ನು ತೆರವು ಮಾಡಿರುವುದು ಸಾಗತಾರ್ಹ ಬೆಳವಣಿಗೆ, ಇದೇ ಜಾಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೌಚಾಲಯ ನಿರ್ಮಿಸಬೇಕು’ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ನಿಖಿಲ್ ಆಗ್ರಹಿಸಿದರು.
ತೆರವು ಕಾರ್ಯಾಚರಣೆಯಲ್ಲಿ ವಿಶ್ವನಾಥಪುರ ಪೊಲೀಸ್ ಇನ್ ಪೆಕ್ಟರ್ ಶ್ರೀನಿವಾಸ, ಈ-ಹೊಸೂರು ಗ್ರಾಮದ ಮುಖಂಡ ಮುರಳಿ, ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.