ವಿಜಯಪುರ (ದೇವನಹಳ್ಳಿ): ಪಟ್ಟಣದಲ್ಲಿ ಹಲವು ವರ್ಷದಿಂದ ನನೆಗುದಿಗೆ ನೆನಗುದಿಗೆ ಬಿದ್ದಿದ್ದ ಇಂದಿರಾ ಕ್ಯಾಟೀನ್‌ಗೆ ಕೊನೆಗೂ ಉದ್ಘಾಟನೆ ಭಾಗ್ಯ ದೊರೆತಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಶನಿವಾರ ಮಧ್ಯಾಹ್ನ ಊಟ ಸೇವಿಸುವ ಮೂಲಕ ಕ್ಯಾಂಟೀನ್ ಆರಂಭಕ್ಕೆ ಚಾಲನೆ ನೀಡಿದರು.
ಕ್ಯಾಂಟೀನ್ ಸೇವೆ ಆರಂಭಗೊಂಡ ಮೊದಲ ದಿನವಾದ ಶನಿವಾರ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರಂಭಗೊಂಡ ಮೊದಲ ದಿನ ಸುಮಾರು 500 ಕ್ಕೂ ಹೆಚ್ಚು ಜನ ಊಟ ಸವಿದಿದ್ದಾರೆ ಎಂದು ಪುರಸಭೆ ಮಾಹಿತಿ ನೀಡಿದೆ.
ಬಡವರ ಅನುಕೂಲಕ್ಕಾಗಿ 2017 ರಲ್ಲಿ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕೆ ತಂದಿದ್ದರೂ, ವಿಜಯಪುರ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಸೇವೆ ಆರಂಭಗೊಂಡಿರಲಿಲ್ಲ. ಕ್ಯಾಂಟೀನ್ ಸ್ಥಾಪನೆಗೆ ಸ್ಥಳದ ಗೊಂದಲ, ಕಾಮಗಾರಿ ವಿಳಂಬ ಸೇರಿದಂತೆ ಹಲವು ಅಡೆತಡೆಯಿಂದ ಕ್ಯಾಂಟೀನ್ ನಿಗದಿತ ಸಮಯದಲ್ಲಿ ಆರಂಭಿಸಲು ಹಿನ್ನೆಡೆಯಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಹಲವು ಬಾರಿ ವರದಿ ಪ್ರಕಟಿಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದಿತ್ತು.
ಬೆಳಗ್ಗೆ 9.30 ವರೆಗೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಸಮಯವನ್ನು ಮೀಸಲಿಡಲಾಗಿತ್ತು. ಆದರೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಮಧ್ಯಾಹ್ನದ ಹೊತ್ತಿಗೆ ಕಾರ್ಯಕ್ರಮಕ್ಕೆ ಆಗಮಿಸಿದರು. ಇಂದಿರಾ ಕ್ಯಾಂಟೀನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಇಂದಿರಾ ಕ್ಯಾಂಟೀನ್‍ನಲ್ಲಿ ಊಟ ಸವಿದರು.
ಬಳಿಕ ಮಾತನಾಡಿದ ಅವರು, ಬಡವರಿಗೆ, ಕೂಲಿ ಕಾರ್ಮಿಕರಿಗೆ, ಉದ್ಯೋಗಿಗಳಿಗೆ ಗುಣಮಟ್ಟದ ತಿಂಡಿ-ಊಟ ನೀಡುವ ಮಹತ್ತರ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಅನ್ನು ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿದೆ. ನಿತ್ಯವೂ ನೂರಾರು ಜನರಿಗೆ ಇಂದಿರಾ ಕ್ಯಾಂಟೀನ್ ಹೊಟ್ಟೆ ತುಂಬಿಸುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಪಂಚ ಗ್ಯಾರಂಟಿಗಳ ಜತೆಗೆ ಮತ್ತೆ ಹೊಸದಾಗಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡುತ್ತಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಸಿಗಲಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕುಕೆ.ಎಚ್. ಮುನಿಯಪ್ಪ ಸಚಿವ
ಇಂದಿರಾ ಕ್ಯಾಂಟೀನ್ ಆರಂಭಿಸಿರುವುದರಿಂದ ನಿತ್ಯ ಪಟ್ಟಣಕ್ಕೆ ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಾರದ ಸಂತೆಗೆ ಬರುವ ರೈತರಿಗೆ ಬಡ ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟ ಸಿಗಲಿದ್ದು ಜನರಿಗೆ ಅನುಕೂಲವಾಗಲಿದೆ.ಶ್ರೀನಿವಾಸ್ ಕಾರ್ಮಿಕ
ಇಂದಿರಾ ಕ್ಯಾಂಟೀನ್ ಸೇವೆ ಆರಂಭಗೊಂಡಿದ್ದು ಬೆಳಗ್ಗಿನ ತಿಂಡಿ ₹5 ಮಧ್ಯಾಹ್ನ ಮತ್ತು ರಾತ್ರಿ ₹10ಕ್ಕೆ ಊಟ ನೀಡಲಾಗುತ್ತಿದೆ. ಇದನ್ನು ಬಡವರು ಸದುಪಯೋಗಪಡಿಸಿಕೊಳ್ಳಬೇಕು.ಭವ್ಯ ಮಹೇಶ್ ಪುರಸಭೆ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.