ADVERTISEMENT

ಮೇವು ಬ್ಯಾಂಕ್‌, ಗೋಶಾಲೆ ಆರಂಭಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 13:20 IST
Last Updated 15 ಜುಲೈ 2019, 13:20 IST
ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ ಪಶುಪಾಲಕರು
ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ ಪಶುಪಾಲಕರು   

ದೇವನಹಳ್ಳಿ: ಹೆಚ್ಚುತ್ತಿರುವ ಪಶು ಮೇವಿನ ಕೊರತೆ ನೀಗಿಸಲು ತ್ವರಿತವಾಗಿ ಗೋಶಾಲೆ ಆರಂಭಿಸುವಂತೆ ಪಶುಪಾಲಕರು ಕುಂದಾಣ ನಾಡ ಕಚೇರಿ ಆವರಣದಲ್ಲಿ ಪಶುಗಳೊಂದಿಗೆ ಪ್ರತಿಭಟನೆ ನಡೆಸಿದರು. ‌‌

ಈ ಸಂದರ್ಭದಲ್ಲಿ ಮಾತನಾಡಿದ ಪಶುಪಾಲಕ ನಂಜಮರಿ, ‘ಹಾಲು ಉತ್ಪಾದನೆ ಅವಲಂಬಿಸಿ ಪಶುಪಾಲನೆ ಮಾಡುತ್ತಿದ್ದೇವೆ, ವಾಡಿಕೆ ಮಳೆ ಈ ಬಾರಿ ಕೈಕೊಟ್ಟಿದೆ. ಖರೀದಿಸಿದ ಒಣ ಮೇವು ಖಾಲಿಯಾಗಿದೆ. ಮೇವು ಸಿಗದಿದ್ದರೆ ಕಸಾಯಿಖಾನೆಗೆ ಮಾರಾಟ ಮಾಡಬೇಕಾದ ಸ್ಥಿತಿ ಇದೆ. ರೈತರ ಸಂಕಷ್ಟ ಅರಿತು ಮೇವು ಬ್ಯಾಂಕ್, ಗೋಶಾಲೆ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಸತತ ಬರಗಾಲದಿಂದ ತಾಲ್ಲೂಕು ತತ್ತರಿಸಿದೆ. ಮಳೆಯಾಶ್ರಯದಿಂದ ಬೆಳೆಯುತ್ತಿದ್ದ ರಾಗಿ ಮೇವು ಇಲ್ಲವಾಗಿದೆ. ಬರ ನಿರ್ವಹಣೆಯಡಿ ಸರ್ಕಾರ ಒಂದೊಂದು ಹಸುವಿಗೆ 25ಕೆ.ಜಿ ಭತ್ತದ ಮೇವು ನೀಡುತ್ತಿದೆ. ಇದು ಸಾಕಾಗುವುದಿಲ್ಲ. ಜಾನುವಾರು ಸಾಯುವ ಸ್ಥಿತಿಗೆ ತಲುಪಿವೆ. ಪಶು ಪಾಲಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದೆ ಹಾಯಾಗಿ ಇಲಾಖೆ ಕಚೇರಿಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ನಾಡಕಚೇರಿ ಉಪ ತಹಶೀಲ್ದಾರ್ ನಾಗೇಶ್, ಪಶುಮೇವು ಬ್ಯಾಂಕ್ ಮತ್ತೆ ಆರಂಭಿಸುವಂತೆ ಜಿಲ್ಲಾಧಿಕಾರಿ ಈಗಾಗಲೇ ಸಭೆ ನಡೆಸಿ ಸೂಚನೆ ನೀಡಿದ್ದಾರೆ. ಅವರ ಆದೇಶದ ಮೇರೆಗೆ ಚನ್ನರಾಯಪಟ್ಟಣ ಹೋಬಳಿ ನಲ್ಲೂರು, ಕುಂದಾಣ ಹೋಬಳಿ ಆಲೂರುದುದ್ದನಹಳ್ಳಿ ಮತ್ತು ಕಾರಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಮೇವು ಬ್ಯಾಂಕ್ ಆರಂಭಿಸಲಾಗುವುದು. ಪ್ರತಿ ಕೆ.ಜಿಗೆ ₹2 ನಿಗದಿ ಪಡಿಸಲಾಗಿದೆ. ಇದಕ್ಕೆ ಪಶು ಪಾಲಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಶು ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಕುಂದಾಣ ಗ್ರಾಮದಲ್ಲಿ ಕಳೆದ ತಿಂಗಳು 120ರೈತರಿಗೆ 3,250 ಕೆ.ಜಿ ಪಶು ಮೇವು ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಪಶುಪಾಲಕರಾದ ಮಾರುತಿ, ಮಂಜುನಾಥ್, ಶ್ರೀನಿವಾಸ್, ರಾಮಾಂಜನಿ, ಬಿ.ಮಂಜುನಾಥ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.