ADVERTISEMENT

ಸದಾಶಿವ ವರದಿ ಅನುಷ್ಠಾನಕ್ಕೆ ಒತ್ತಾಯ

ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಸಚಿವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 3:02 IST
Last Updated 2 ಆಗಸ್ಟ್ 2021, 3:02 IST
ದೆಹಲಿಯಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರನ್ನು ದೇವನಹಳ್ಳಿ ಪುರಸಭಾ ಮಾಜಿ ಅಧ್ಯಕ್ಷ ಎಂ. ನಾರಾಯಣಸ್ವಾಮಿ ಸನ್ಮಾನಿಸಿ ಮನವಿ ಸಲ್ಲಿಸಿದರು
ದೆಹಲಿಯಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರನ್ನು ದೇವನಹಳ್ಳಿ ಪುರಸಭಾ ಮಾಜಿ ಅಧ್ಯಕ್ಷ ಎಂ. ನಾರಾಯಣಸ್ವಾಮಿ ಸನ್ಮಾನಿಸಿ ಮನವಿ ಸಲ್ಲಿಸಿದರು   

ದೇವನಹಳ್ಳಿ:ಸ್ವಾತಂತ್ರ್ಯ ಪೂರ್ವದಿಂದಲೂ ಶೋಷಣೆಗೆ ಒಳಗಾಗಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಎಡಗೈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಪುರಸಭಾ ಮಾಜಿ ಅಧ್ಯಕ್ಷ ಎಂ. ನಾರಾಯಣಸ್ವಾಮಿ ಮನವಿ ಮಾಡಿದರು.

ದೆಹಲಿಯಲ್ಲಿ ಸಚಿವ ಎ. ನಾರಾಯಣಸ್ವಾಮಿ ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿರುವ ಅವರು, ಸದಾಶಿವ ಆಯೋಗದ ವರದಿ ಜಾರಿಗೆ ತರಲು ರಾಜ್ಯ ಸರ್ಕಾರ, ವಿಧಾನಸಭಾ ಅಧಿವೇಶನದಲ್ಲಿ ವರದಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಬೇಕು ಎಂದು ಸಮುದಾಯದಿಂದ ಹೋರಾಟ ನಡೆದಿದೆ. ಆದರೆ, ರಾಜ್ಯದ ನಾಯಕರು ಭರವಸೆ ಕೊಟ್ಟಿದ್ದಾರೆಯೇ ಹೊರತು, ಇದುವರೆಗೂ ಕಾರ್ಯಗತಗೊಳಿಸಿಲ್ಲ ಎಂದು ಹೇಳಿದರು.

ಪರಿಶಿಷ್ಟ ಜಾತಿಯಲ್ಲಿ ಮೊದಲು ಅಸ್ಪೃಶ್ಯ ಜಾತಿಗಳು ಮಾತ್ರ ಇದ್ದವು. ಬಳಿಕ ಲಂಬಾಣಿ, ಬಂಜಾರ, ಭೋವಿ (ವಡ್ಡರ), ಕೊರಮ, ಕೊರಚ ಜಾತಿಗಳು ಸೇರಿಕೊಂಡು ಅಸ್ಪೃಶ್ಯ ಜಾತಿಗಳ ಮೀಸಲಾತಿ ಸೌಲಭ್ಯವನ್ನು ಕಬಳಿಸುತ್ತಿವೆ. ಇದರಿಂದ ಅಸ್ಪೃಶ್ಯ ಜಾತಿಗಳಿಗೆ ಸೌಲಭ್ಯ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದರು.

ADVERTISEMENT

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಉಪಾಧ್ಯಕ್ಷ ಶಾಂತಪ್ಪ ಮಾತನಾಡಿ, ಶೋಷಿತ ಸಮಯದಾಯಗಳಿಗೆ ನ್ಯಾಯ ಒದಗಿಸುವಂತಹ ಕೆಲಸವನ್ನು ಈಗಿನ ಸರ್ಕಾರ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಕಗ್ಗಂಟಾಗುತ್ತದೆ. ಸಂವಿಧಾನಬದ್ಧವಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲಿಕ್ಕಾಗಿ ಎಲ್ಲಾ ಸಮುದಾಯಗಳಿಗೂ ಹಕ್ಕಿದೆ ಎಂದು ಹೇಳಿದರು.

ಆದರೆ, ಸರ್ಕಾರಗಳು, ಮತ ಬ್ಯಾಂಕಿಗಾಗಿ ಕೆಲವೇ ಸಮುದಾಯಗಳನ್ನು ಓಲೈಕೆ ಮಾಡಲು ಸರ್ಕಾರವೇ ನೇಮಕ ಮಾಡಿರುವ ಆಯೋಗದ ವರದಿಯನ್ನು ಅಂಗೀಕರಿಸಿಲ್ಲ. ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದೇ ತಟಸ್ಥ ನೀತಿ ಅನುಸರಿಸುತ್ತಿರುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಸರ್ಕಾರದ ಮೇಲೆ ಒತ್ತಡ ಹೇರುವಂತಹ ಕಾರ್ಯವಾಗಬೇಕು ಎಂದರು.

ಕೇಂದ್ರ ಸಚಿವ ನಾರಾಯಣಸ್ವಾಮಿ ಮಾತನಾಡಿ, ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕೆನ್ನುವುದು ನಮ್ಮ ಒತ್ತಾಯವೂ ಆಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರುಲು ಇರುವಂತಹ ತೊಡಕುಗಳನ್ನು ನಿವಾರಣೆ ಮಾಡಿಕೊಳ್ಳ ಬೇಕು. ಸಾಧ್ಯವಾದರೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದರೆ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದರು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.