ADVERTISEMENT

ದೊಡ್ಡಬಳ್ಳಾಪುರ | ಹೂವು ಮಾರಾಟಕ್ಕೆ ಪ್ರತ್ಯೇಕ ಸ್ಥಳ ನಿಗದಿ ಮಾಡುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 13:14 IST
Last Updated 24 ಜನವರಿ 2024, 13:14 IST
ದೊಡ್ಡಬಳ್ಳಾಪುರ ಎಪಿಎಂಸಿ ಹೂವಿನ ಮಾರುಕಟ್ಟೆ ಸ್ಥಳಕ್ಕೆ ಜಿಲ್ಲಾ ಎಪಿಎಂಸಿ ನಿರ್ದೇಶಕಿ ಹಾಗೂ ಎಪಿಎಂಸಿ ಆಡಳಿತ ಅಧಿಕಾರಿ ವಿಜಯಲಕ್ಷ್ಮಿ ಮಂಗಳವಾರ ಭೇಟಿ ನೀಡಿ ಹೂವಿನ ಬೆಳೆಗಾರರು ಹಾಗೂ ವರ್ತಕರೊಂದಿಗೆ ಚರ್ಚೆ ನಡೆಸಿದರು
ದೊಡ್ಡಬಳ್ಳಾಪುರ ಎಪಿಎಂಸಿ ಹೂವಿನ ಮಾರುಕಟ್ಟೆ ಸ್ಥಳಕ್ಕೆ ಜಿಲ್ಲಾ ಎಪಿಎಂಸಿ ನಿರ್ದೇಶಕಿ ಹಾಗೂ ಎಪಿಎಂಸಿ ಆಡಳಿತ ಅಧಿಕಾರಿ ವಿಜಯಲಕ್ಷ್ಮಿ ಮಂಗಳವಾರ ಭೇಟಿ ನೀಡಿ ಹೂವಿನ ಬೆಳೆಗಾರರು ಹಾಗೂ ವರ್ತಕರೊಂದಿಗೆ ಚರ್ಚೆ ನಡೆಸಿದರು   

ದೊಡ್ಡಬಳ್ಳಾಪುರ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸ್ವಚ್ಛತೆ ಕೊರತೆ, ರಾತ್ರಿ ವೇಳೆ ಕುಡುಕರ ಹಾವಳಿ, ರಸ್ತೆ ಬದಿಯಲ್ಲಿ ವಿದ್ಯುತ್‌ ದೀಪಗಳು ಇಲ್ಲದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಮಂಗಳವಾರ ಜಿಲ್ಲಾ ಎಪಿಎಂಸಿ ನಿರ್ದೇಶಕಿ ಹಾಗೂ ದೊಡ್ಡಬಳ್ಳಾಪುರ ಎಪಿಎಂಸಿ ಆಡಳಿತ ಅಧಿಕಾರಿ ವಿಜಯಲಕ್ಷ್ಮಿ ಅವರೊಂದಿಗೆ ನಡೆದ ಸಭೆಯಲ್ಲಿ ರೈತರು ಹಾಗೂ ವರ್ತಕರು ತಿಳಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ತರಕಾರಿ ಮಂಡಿವರ್ತಕ ರಾಮಣ್ಣ, ಬಿಜೆಪಿ ಸರ್ಕಾರದಲ್ಲಿ ಹೊಸ ಎಪಿಎಂಸಿ ಕಾಯ್ದೆ ಜಾರಿಯಾದ ನಂತರ ಆರ್ಥಿಕ ಕೊರತೆ ಕಾರಣ ನೀಡುತ್ತ ಸ್ವಚ್ಛತೆ ಸೇರಿದಂತೆ ಎಲ್ಲವು ಕಡಿತವಾಗಿವೆ. ವರ್ತಕರು ತರಕಾರಿಗಳನ್ನು ರಾತ್ರಿ ವೇಳೆ ಹೊರಗಡೆ ಇಟ್ಟಿರುತ್ತಾರೆ. ಇತ್ತೀಚೆಗೆ ಕಳವು ಹೆಚ್ಚಾಗುತ್ತಿವೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಮೆರಾಗಳನ್ನು ಅಳವಡಿಸಬೇಕು. ಕುಡಿಯುವ ನೀರಿನ ಸೌಲಭ್ಯ ಇಲ್ಲದಾಗಿದೆ. ಶೌಚಾಲಯ ಇದ್ದರು ನೀರಿನ ಕೊರತೆಯಿಂದಾಗಿ ಸೂಕ್ತ ನಿರ್ವಹಣೆ ಇಲ್ಲದಾಗಿದೆ ಎಂದರು.

ಎಪಿಎಂಸಿ ಆವರಣದಲ್ಲಿ ಹೂವು ಬೆಳೆಗಾರರು ಹಾಗೂ ವರ್ತಕರು ಒಟ್ಟಾಗಿ ಹೊಸದಾಗಿ ಹೂವಿನ ಮಂಡಿಗಳನ್ನು ಪ್ರಾರಂಭ ಮಾಡಲಾಗಿದೆ. ಇದಕ್ಕಾಗಿಯೇ ಪ್ರತ್ಯೇಕ ಮಾರುಕಟ್ಟೆ ಸ್ಥಳವನ್ನು ಗುರುತಿಸಲಾಗಿದೆ. ಎಲ್ಲ ಹೂವಿನ ಹರಾಜಿನ ಮಂಡಿಗಳು ಒಂದೇ ಕಡೆಗೆ ಇರುವಂತೆ ಮಾಡಬೇಕು. ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯಲು ಸಹಕಾರಿಯಾಗಲಿದೆ. ತಾಲ್ಲೂಕಿನಲ್ಲಿ ಹೂವು ಬೆಳೆಗಾರರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಹೊರಗಿನಿಂದ ಇಲ್ಲಿನ ಹೂವುಗಳನ್ನು ಖರೀದಿಸಲು ಬರುವ ವರ್ತಕರ ಸಂಖ್ಯೆಯು ಹೆಚ್ಚಾಗುತ್ತಿದೆ. ಈ ಕಾರಣಗಳಿಂದ ಹೂವಿನ ಹರಾಜು ಮಂಡಿಗಳು ಒಂದೇ ಕಡೆ ಇರುವಂತೆ ಸೌಲಭ್ಯ ಕಲ್ಪಿಸಬೇಕು ಎಂದು ಹೂವು ಬೆಳೆಗಾರ ಮತ್ತು ರೈತ ಮುಖಂಡ ಪ್ರಕಾಶ್‌, ವಾಸು ಅವರು ಎಪಿಎಂಸಿ ಜಿಲ್ಲಾ ನಿರ್ದೇಶಕರಿಗೆ ಮನವಿ ಮಾಡಿದರು.

ADVERTISEMENT

ರೈತರು ಹಾಗೂ ವರ್ತಕರ ದೂರುಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಎಪಿಎಂಸಿ ನಿರ್ದೇಶಕಿ ವಿಜಯಲಕ್ಷ್ಮಿ, ಚಿಕ್ಕಬಳ್ಳಾಪುರ, ತುಮಕೂರಿನಲ್ಲಿ ಹೂವಿನ ಹರಾಜು ಮಂಡಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ. ಒಮ್ಮೆ ಅಲ್ಲಿನ ಮಾರುಕಟ್ಟೆಗಳಿಗೆ ರೈತರು, ಅಧಿಕಾರಿಗಳು ಭೇಟಿ ನೀಡಿ ಅಧ್ಯಯನ ಮಾಡಿದ ನಂತರ ಸೂಕ್ತ ನಿರ್ಧಾರ ಮಾಡಿದರೆ ಒಳಿತಾಗಲಿದೆ. ಎಪಿಎಂಸಿಯಲ್ಲಿನ ಕುಂದು ಕೊರತೆಗಳ ಕುರಿತಂತೆ ಸಾಧ್ಯ ಇರುವ ಎಲ್ಲವನ್ನು ಕಾಲ ಮಿತಿಯಲ್ಲಿ ಸರಿಪಡಿಸಲಾಗುವುದು ಎಂದರು.

ನಗರದ ಎಪಿಎಂಸಿ ಕಾರ್ಯರ್ದರ್ಶಿ ಅಭಿದಅಂಜುಂ ಹಾಗೂ ವರ್ತಕರು, ರೈತ ಸಂಘಟನೆಯ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.