ದೊಡ್ಡಬಳ್ಳಾಪುರ: ಮಾದಿಗರು ಬೀದಿಗೀಳಿದು ಪ್ರತಿಭಟನೆ ನಡೆಸುವ ಮುನ್ನ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲವೆ ಕುರ್ಚು ಖಾಲಿ ಮಾಡಬೇಕೆಂದು ಆಗ್ರಹಿಸಿ ಆಗಸ್ಟ್ 1 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸುವುದಾಗಿ ವಿವಿಧ ದಲಿತ ಸಂಘಟನೆಗಳು ತಿಳಿಸಿವೆ.
ಸೋಮವಾರ ನಡೆದ ವಿವಿಧ ಸಂಘಟನೆಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಚ್ಚಹಳ್ಳಿ ನಾಗರಾಜ್, ವೆಂಕಟೇಶ್, ಹನುಮಣ್ಣ ಮಾತನಾಡಿ, ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿ ಇದೇ ಆಗಸ್ಟ್‌ಗೆ ಒಂದು ವರ್ಷ ಆಗುತ್ತಿದೆ. ಆದರೆ ಇದುವರೆಗೂ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಆಗಸ್ಟ್ 1 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಒಳಮೀಸಲಾತಿ ಜಾರಿಗಾಗಿ ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗ ನಡೆಸಿದ್ದ ಸಮೀಕ್ಷೆಯಲ್ಲಿನ ಅಂಕಿ–ಅಂಶಗಳು ಸರಿ ಇಲ್ಲ ಎನ್ನುವ ಕಾರಣದಿಂದ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಮತ್ತೆ ಸಮೀಕ್ಷೆ ನಡೆಸಿದೆ. ಆದರೆ ಈ ಸಮೀಕ್ಷೆ ಮುಕ್ತಾಯವಾಗಿದ್ದರೂ ಇದುವರೆಗೂ ಸರ್ಕಾರ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ ಎಂದರು.
ದಲಿತ ಸಂಘಟನೆಗಳ ಮುಖಂಡರಾದ ಟಿ.ಡಿ.ಮುನಿಯಪ್ಪ, ತಳವಾರ್ ನಾಗರಾಜ್, ನಾರಾಯಣಪ್ಪ, ಹರ್ಷ, ಗಂಗರಾಜ್, ನರಸಪ್ಪ, ರವಿಕುಮಾರ್, ಕಾಂತರಾಜ್, ಕದಿರಪ್ಪ, ಕೆ.ವಿ.ಮುನಿಯಪ್ಪ, ಮೂರ್ತಿ, ಎಂ.ಡಿ.ನರಸಿಂಹಮೂರ್ತಿ, ಗಜೇಂದ್ರ, ಮುತ್ತುರಾಜ್ ಇದ್ದರು.
ಅಧಿವೇಶನಲ್ಲಿ ಮಂಡಿಸಲು ಗಡುವು
ಇತ್ತೀಚಿನ ಕೆಲ ಮುಖಂಡರಿಂದ ದಲಿತರಲ್ಲಿ ಎಡ ಬಲ ಎರಡೂ ಸಮುದಾಯಗಳಿಗೆ ಸಮವಾಗಿ ಮೀಸಲಾತಿ ಹಂಚಿಕೆ ಮಾಡುವ ಮಾತುಗಳು ಕೇಳಿಬರುತ್ತಿವೆ. ಇಷ್ಟೆಲ್ಲಾ ಸಮೀಕ್ಷೆಗಳ ನಂತರವು ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಹಂಚಿಕೆ ಮಾಡದೇ ಇರುವುದಾದರೆ ಸಮೀಕ್ಷೆ ನಡೆಸಿದ್ದು ವ್ಯರ್ಥವಾಗಲಿದೆ. ಹೆಚ್ಚು ಜನ ಸಂಖ್ಯೆ ಹೊಂದಿರುವ ಮಾದಿಗ ಜನಾಂಗಕ್ಕೆ ಅನ್ಯಾಯವಾಗಲಿದೆ. ಈ ಎಲ್ಲಾ ಕಾರಣಗಳಿಂದ ಒಳಮೀಸಲಾತಿ ವರದಿಯನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲು ಆಗಸ್ಟ್ 16 ರವರೆಗೆ ಗಡುವು ನೀಡಲಾಗುವುದು. ನಂತರದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ವಿವಿಧ ಸಂಘಟನೆ ಮುಖಂಡರು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.