ADVERTISEMENT

ಮಕ್ಕಳಿಗೆ ಉನ್ನತ ವಿಚಾರ ಪರಿಚಯಿಸಿ

‘ಜ್ಞಾನ ಸಹ್ಯಾದ್ರಿ ಸಂಭ್ರಮ’ –‘ಪ್ರತಿಭಾ ಪುರಸ್ಕಾರ’

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 13:26 IST
Last Updated 28 ಡಿಸೆಂಬರ್ 2019, 13:26 IST
ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು
ಶಾಲಾ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು   

ದೊಡ್ಡಬಳ್ಳಾಪುರ: ಮಕ್ಕಳನ್ನು ಅಂಕ ಗಳಿಕೆಗೆ ಸೀಮಿತವಾಗಿರಿಸಿ ಅವರ ಸೃಜನಶೀಲ ವ್ಯಕ್ತಿತ್ವವನ್ನು ಹಾಳು ಮಾಡುವ ಪರಿಸ್ಥಿತಿ ಇಂದು ಹೆಚ್ಚಾಗುತ್ತಿದೆ. ಈ ದಿಸೆಯಲ್ಲಿ ಮಕ್ಕಳಲ್ಲಿ ಸಾಮಾನ್ಯ ಜ್ಞಾನದ ಅರಿವಿನೊಂದಿಗೆ ಮುನ್ನಡೆಸುವ ಅಗತ್ಯವಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಹೇಳಿದರು.

ಜ್ಞಾನಗಂಗಾ ವಿದ್ಯಾಸಂಸ್ಥೆ ಮತ್ತು ಸಹ್ಯಾದ್ರಿ ವಿದ್ಯಾ ಟ್ರಸ್ಟ್ ನೇತೃತ್ವದಲ್ಲಿ ಮಾಂಗಲ್ಯ ಸಮುದಾಯ ಭವನದಲ್ಲಿ ನಡೆದ ಜ್ಞಾನಗಂಗಾ ಮತ್ತು ಸಹ್ಯಾದ್ರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ‘ಜ್ಞಾನ ಸಹ್ಯಾದ್ರಿ ಸಂಭ್ರಮ 2019’ ಮತ್ತು ‘ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳಿಗೆ ಉನ್ನತ ವಿಚಾರಗಳನ್ನು ಮುಟ್ಟಿಸುವಲ್ಲಿ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ. ಪರಿಸರದ ಒಡನಾಟದೊಂದಿಗೆ ಕಲಿಯುವ ಶಿಕ್ಷಣ ಹೆಚ್ಚು ಪರಿಣಾಮಕಾರಿಯಾಗಿದೆ. ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಬೆಳೆಸಬೇಕಿದೆ. ಮಹಾತ್ಮ ಗಾಂಧಿ, ಕುವೆಂಪು ಮೊದಲಾದ ಮಹನೀಯರ ಚಿಂತನೆಗಳನ್ನು ತಿಳಿಸಿ ನಾಯಕತ್ವ ಬೆಳೆಸಬೇಕಿದೆ ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್ ಮಾತನಾಡಿ, ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕಾದ ಅಗತ್ಯವಿದೆ. ಪಠ್ಯದೊಂದಿಗೆ ಕ್ರೀಡೆ, ಯೋಗ ಇತ್ಯಾದಿ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕಿದೆ. ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿದ್ಯಾಸಂಸ್ಥೆ ಹೆಚ್ಚಿನ ಒತ್ತು ನೀಡಲಿ ಎಂದು ಆಶಿಸಿದರು.

ಜ್ಞಾನಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಆರ್.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಳೆದ ಸಾಲಿನ ಎಸ್.ಎಸ್.ಎಲ್.ಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಆರ್.ವಿ.ಲಿಖಿತ ಮತ್ತು ವಿ.ಅನುಶ್ರೀ ಕಾರ್ಯಕ್ರಮ ಉದ್ಘಾಟಿಸಿದರು.

ಅನಿಕೇತನ ಟ್ರಸ್ಟ್‍ನ ಎನ್.ಎಂ.ನಟರಾಜ್, ಜ್ಞಾನಗಂಗಾ ವಿದ್ಯಾಸಂಸ್ಥೆಯ ನಿರ್ದೇಶಕ ಗದಗಯ್ಯ ಹೀರೇಮಠ್, ಮಹೇಶ್, ಸತೀಶ್, ಪುಟ್ಟರಾಜು, ಜ್ಞಾನಗಂಗಾ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಕೆ.ಎನ್.ಹನುಮೇಗೌಡ, ಜಗದೀಶ್ ಇದ್ದರು.

ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತ್ಯುನ್ನತ ದರ್ಜೆ ಪಡೆದ 27 ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ವತಿಯಿಂದ ಪ್ರತಿಭಾ ಪರಸ್ಕಾರ ನೀಡಲಾಯಿತು. ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.