ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಸಮೇತನಹಳ್ಳಿ ಗ್ರಾಮದಲ್ಲಿ ಕಸ ತೆರವುಗೊಳಿಸಿದ ಗ್ರಾ.ಪಂ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:04 IST
Last Updated 27 ನವೆಂಬರ್ 2025, 5:04 IST
ಸದ್ಯ ಕೆರೆಯ ಅಂಗಳದಲ್ಲಿರುವ ಕಸವನ್ನು ಕೆರೆ ಕಟ್ಟೆ ಮೇಲೆ ಹಾಕಿ ನಂತರ ಬೇರೆಡೆಗೆ ವಿಲೇವಾರಿ ಮಾಡಲಾಗುತ್ತಿದೆ
ಸದ್ಯ ಕೆರೆಯ ಅಂಗಳದಲ್ಲಿರುವ ಕಸವನ್ನು ಕೆರೆ ಕಟ್ಟೆ ಮೇಲೆ ಹಾಕಿ ನಂತರ ಬೇರೆಡೆಗೆ ವಿಲೇವಾರಿ ಮಾಡಲಾಗುತ್ತಿದೆ   

ಸಮೇತನಹಳ್ಳಿ (ಹೊಸಕೋಟೆ): ಸಮೇತನಹಳ್ಳಿ ಗ್ರಾಮದಲ್ಲಿ ರಸ್ತೆಬದಿ, ಕೆರೆಕಟ್ಟೆ, ಕೆರೆ ಅಂಗಳ, ವಸತಿ ಸಮುಚ್ಛಯಗಳ ಬಳಿ ಅನುಪಯುಕ್ತ ತ್ಯಾಜ್ಯ, ಪ್ಲಾಸ್ಟಿಕ್ ಹಾಗೂ ಕಸದ ರಾಶಿಯನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ. 

ಸಮೇತನಹಳ್ಳಿಯ ಗ್ರಾಮದಲ್ಲಿನ ರಸ್ತೆ ಇಕ್ಕೆಲಗಳಲ್ಲಿ ಕೆರೆಕಟ್ಟೆ, ಅಂಗಳ ಮೊದಲಾದೆಡೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ಕಸ ತಂದು ಸುರಿಯಲಾಗುತ್ತಿದೆ. ಕಸ ವಿಲೇವಾರಿಯಾಗದೆ ದುರ್ನಾತ ಬೀರುತ್ತಿದ್ದು, ಸಾರ್ವಜನಿಕರಲ್ಲಿ ಸಾಂಕ್ರಮಿಕ ರೋಗಗಳಿಗೆ ಕಾರಣವಾಗುತ್ತಿದೆ ಎಂಬುದಾಗಿ ಇದೇ 24ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ‘ರಸ್ತೆ ಬದಿ ಕಸಕ್ಕೆ ಯಾರು ಹೊಣೆ’ ಎಂದು ವರದಿ ಪ್ರಕಟಿಸಿತ್ತು. 

ಲೇಕ್ ಪ್ರಂಟ್ ಅಪಾರ್ಟ್ಮೆಂಟ್ ಬಳಿ ಕಸ ತೆರವು ಮಾಡಿರುವುದು

ಈ ಸುದ್ದಿಯಿಂದ ಎಚ್ಚೆತ್ತುಕೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ಈ ಸಂಬಂಧ ಪರಿಶೀಲಿಸಿ ಕಸದ ರಾಶಿಯನ್ನು ತೆರವುಗೊಳಿಸಲು ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಪಿಡಿಒಗೆ ಸೂಚಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗೆ ಸೂಚಿಸಲಾಗಿತ್ತು. ಅಲ್ಲದೆ, ಕಸದ ರಾಶಿಯನ್ನು ತೆರವುಗೊಳಿಸಿದ ಬಳಿಕ ಜಿಪಿಎಸ್ ಫೋಟೊವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಕಳುಹಿಸಬೇಕು ಎಂದು ಆದೇಶಿಸಲಾಗಿದೆ. 

ADVERTISEMENT
ನಾರಾಯಣ ಪಿ ಯು ಕಾಲೇಜು ಬಳಿ ಕಸ ತೆರೆವು ಮಾಡಿರುವುದು ಇನ್ನೂ ಸ್ವಚ್ಚಗೊಳಿಸಬೇಕಿದೆ

ಹೀಗಾಗಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಂಗಳವಾರದಿಂದಲೇ ಕೆರೆಕಟ್ಟೆ ಮತ್ತು ರಾಷ್ಟ್ರೀಯ 207ರ ಇಕ್ಕೆಲಗಳಲ್ಲಿ ಸುರಿಯಲಾಗಿದ್ದ ಕಸವನ್ನು ತೆರವುಗೊಳಿಸಲಾರಂಭಿಸಿದರು. ಕೆರೆಯ ಅಂಗಳದಲ್ಲಿ ಬಿದ್ದಿದ್ದ ಕಸವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. 

ಸಮೇತನಹಳ್ಳಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪ್ರಸಾದ್ ಮಾತನಾಡಿ, ಮಂಗಳವಾರದಿಂದಲೇ ಗ್ರಾಮದ ವಿವಿಧೆಡೆ ಇದ್ದ ಕಸವನ್ನು ಬೇರೆಡೆ ವಿಲೇವಾರಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ತಡೆಯಲು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುವುದು. ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಸಮೇತನಹಳ್ಳಿ ಗ್ರಾಮದಲ್ಲಿ ರಸ್ತೆಬದಿ ಕೆರೆಕಟ್ಟೆ ಕೆರೆ ಅಂಗಳ ವಸತಿ ಸಮುಚ್ಛಯಗಳ ಬಳಿ ಅನುಪಯುಕ್ತ ತ್ಯಾಜ್ಯ ಪ್ಲಾಸ್ಟಿಕ್ ಹಾಗೂ ಕಸದ ರಾಶಿಯನ್ನು ಜೆಸಿಬಿ ಮತ್ತು ಟಿಪ್ಪರ್ ಮೂಲಕ ವಿಲೇವಾರಿ ಮಾಡುತ್ತಿರುವುದು
ಜೆಸಿಬಿ ಮೂಲಕ ಕಸ ತೆರವು ಮಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.