ADVERTISEMENT

ಪರ್ಯಾಯ ಮಾರ್ಗಗಳತ್ತ ರೈತರು ಚಿಂತಿಸುವ ಕಾಲ

ರೈತರು – ಗ್ರಾಹಕರ ನಡುವೆ ವಾಟ್ಸ್‌ಆ್ಯಪ್‌ ಗ್ರೂಪ್‌ಗಳು ಸೇತುವೆಯಾಗಿ ಕೆಲಸ ಮಾಡ‌ಲಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 19:30 IST
Last Updated 29 ಮಾರ್ಚ್ 2020, 19:30 IST
ಎಪಿಎಂಸಿ ಮಾರುಕಟ್ಟೆಯಲ್ಲಿ ಭಾನುವಾರ ಬೆಳಿಗ್ಗೆ 5 ಗಂಟೆಗೆ ತರಕಾರಿ ವಹಿವಾಟು ನಡೆಯಿತು
ಎಪಿಎಂಸಿ ಮಾರುಕಟ್ಟೆಯಲ್ಲಿ ಭಾನುವಾರ ಬೆಳಿಗ್ಗೆ 5 ಗಂಟೆಗೆ ತರಕಾರಿ ವಹಿವಾಟು ನಡೆಯಿತು   

ದೊಡ್ಡಬಳ್ಳಾಪುರ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಾರಿಯಾಗಿರುವ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ 5 ಗಂಟೆಯಿಂದ 7ಗಂಟೆವರೆಗೆ ಎಪಿಎಂಸಿ ಆವರಣದಲ್ಲಿ ತರಕಾರಿಗಳ ಮಾರಾಟ ನಡೆಯಿತು.

ಶನಿವಾರ ಜನ ಜಂಗುಳಿ ಹೆಚ್ಚಾಗಿದ್ದರಿಂದ ತರಕಾರಿ ಮಾರಾಟ ರದ್ದುಗೊಳಿಸಿ ಪೊಲೀಸರು ಸಾರ್ವಜನಿಕರನ್ನು ಹೊರಗೆ ಕಳುಹಿಸಿ ಬಂದ್‌ ಮಾಡಿದ್ದರು. ಇದರಿಂದಾಗಿ ಭಾನುವಾರ ಸಗಟು ಖರೀದಿದಾರರು ಮಾತ್ರ ಬಂದಿದ್ದರು. ಉಳಿದಂತೆ ವಾರ್ಡ್‌ಗಳಲ್ಲಿಯೇ ಮನೆಗಳ ಮುಂದೆ ಬರುವ ತಳ್ಳುವ ಗಾಡಿಗಳಲ್ಲಿಯೇ ಗ್ರಾಹಕರು ತರಕಾರಿ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು.

ಪರ್ಯಾಯ ಚಿಂತನೆ ಅಗತ್ಯ: ಕೊರೊನಾ ಸೋಂಕು ಹರಡುವುದೇ ಜನರು ಒಂದೆಡೆ ಹೆಚ್ಚಾಗಿ ಸೇರುವುದರಿಂದ ಎನ್ನುವ ಉದ್ದೇಶದಿಂದಲೇ ಲಾಕ್‌ಡೌನ್‌ ಜಾರಿಗೆ ಬಂದಿದೆ. ಆದರೆ ರೈತರು, ಗ್ರಾಹಕರು, ಸಗಟು ವ್ಯಾಪಾರಸ್ಥರು ಯಾರೊಬ್ಬರು ಸಹ ಪರ್ಯಾಯ ಮಾರುಕಟ್ಟೆ ಕಡೆಗೆ ಚಿಂತನೆ ಮಾಡದೇ ದೂರದ ಊರುಗಳಿಂದ, ನಗರದ ಎಲ್ಲ ವಾರ್ಡ್‌ಗಳಿಂದ ಸಾಮಾನ್ಯ ದಿನಗಳಂತೆಯೇ ಎಪಿಎಂಸಿಗೆ ಬಂದು ಮಾರಾಟ, ಖರೀದಿಗೆ ಮುಗಿಬಿಳುತ್ತಲೇ ಇರುವುದು ಸರಿಯಾದ ಕ್ರಮ ಅಲ್ಲ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.

ADVERTISEMENT

ನಗರದಲ್ಲಿ ಗ್ರಾಹಕರಿಗೆ ಸರಿಯಾದ ತರಕಾರಿ ಸಿಗದೆ ಬೆಲೆ ದುಬಾರಿಯಾಗುತ್ತಿರುವುದು ಒಂದಡೆಯಾದರೆ ಎಪಿಎಂಪಿಸಿ ಯಾವಾಗ ಬಂದ್‌ ಆಗುತ್ತದೆ. ಯಾವಾಗ ತೆರೆದಿರುತ್ತದೆ ಎನ್ನುವ ಮಾಹಿತಿ ತಿಳಿಯದೆ ರೈತರು ಕಂಗಾಲಾಗಿದ್ದಾರೆ. ಗ್ರಾಹಕರಿಗೆ ತರಕಾರಿ ತಲುಪಿಸಲು ಸಾಧ್ಯವಾಗದೇ ತೋಟದಲ್ಲೇ ಒಣಗುತ್ತಿವೆ. ಇಂತಹ ಸಂದಿಗ್ಥ ಸ್ಥಿತಿಯಲ್ಲಿಪರ್ಯಾಯ ಕಡೆಗೆ ಚಿಂತನೆ ನಡೆಸಬೇಕಿದೆ. ರೈತರು – ಗ್ರಾಹಕರ ನಡುವೆ ವಾಟ್ಸ್‌ಆ್ಯಪ್‌ ಗ್ರೂಪ್‌ಗಳು ಸೇತುವೆಯಾಗಿ ಕೆಲಸ ಮಾಡುವಂತಾಗಬೇಕಿದೆ. ಬೆಳಿಗ್ಗೆಯಷ್ಟೇ ಅಲ್ಲದೆ ದಿನದ ಯಾವುದಾದರು ನಿಗದಿತ ಸಮಯದಲ್ಲಿ ತರಕಾರಿ ನಗರದ ವಾರ್ಡ್‌ ಅಥವಾ ಗ್ರಾಮಗಳಿಗೆ ಬರುವ ಸಮಯ, ಲಭ್ಯ ಇರುವ ತರಕಾರಿಯ ಬಗ್ಗೆ ಮಾಹಿತಿ ಹಂಚಿಕೆಯಾಗಬೇಕು. ಸಾಧ್ಯವಾದಷ್ಟು ಆಯಾ ಗ್ರಾಮಗಳಲ್ಲಿ ಬೆಳೆದಿರುವ ತರಕಾರಿ ಅಲ್ಲಿಯೇ ರೈತರೇ ಕುಳಿತು ಮಾರಾಟ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಇದರಿಂದ ಗ್ರಾಹಕರು, ರೈತರ ನಡುವೆ ನೇರ ಸಂಪರ್ಕ ಬೆಳೆಯಲು ಅನುಕೂಲವಾಗಲಿದೆ. ಈ ಸಂಪರ್ಕ ಕೊರೊನಾ ಸೋಂಕು ನಿವಾರಣೆಯಾದ ನಂತರವೂ ಮುಂದುವರೆದರೆ ರೈತರು ತಾವು ಬೆಳೆದ ತರಕಾರಿಗೆ ಬೆಲೆ ಇಲ್ಲ ಎನ್ನುವುದು, ಗ್ರಾಹಕರು ದುಬಾರಿ ಬೆಲೆ ಎನ್ನುವುದು ತಪ್ಪಲಿದೆ.

ಹಣ್ಣು ಬೆಳೆದ ರೈತರ ಬದುಕು ಹಣ್ಣು: ತರಕಾರಿ ಬೆಳೆದ ರೈತರ ಸಮಸ್ಯೆಗಿಂತಲೂ ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವುದು ಹಣ್ಣುಗಳನ್ನು ಬೆಳೆದಿರುವ ರೈತರ ಬದುಕು.

ತಾಲ್ಲೂಕಿನ ಹಸನ್‌ಘಟ್ಟ ಗ್ರಾಮದಲ್ಲಿ ಮಂಜುನಾಥ್‌, ನಾರಾಯಣಸ್ವಾಮಿ, ಚಂದ್ರಶೇಖರ್‌ ಸೇರಿದಂತೆ ಹಲವಾರು ಜನ ರೈತರು ಸುಮಾರು 20ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಕಪ್ಪು ದ್ರಾಕ್ಷಿ ಬೆಳೆದಿದ್ದಾರೆ. 10 ದಿನಗಳ ಹಿಂದೆಯೇ ಹಣ್ಣು ಮಾರುಕಟ್ಟೆಗೆ ತಲುಪಬೇಕಿತ್ತು. ಆದರೆ, ಜನತಾ ಕರ್ಫ್ಯೂ ಬಂತು. ನಂತರ ಸರಿ ಹೋಗಬಹುದು ಎಂದು ಕಾದು ಕುಳಿತ ರೈತರು ಹಣ್ಣುಗಳ ಖರೀದಿಗೆ ಯಾರು ಬಾರದೆ ಈಗ ಕಂಗಾಲಾಗಿದ್ದಾರೆ.

‘ಹಣ್ಣುಗಳನ್ನು ಕತ್ತರಿಸಿ ಮಾರಾಟ ಮಾಡದಿದ್ದರೂ ಗಿಡದಿಂದ ಕಿತ್ತು ಹೊರಗೆ ಸಾಗಿಸಲೇಬೇಕು. ಇಲ್ಲವಾದರೆ ಹತ್ತಾರು ವರ್ಷಗಳಿಂದ ಬೆಳೆಸಿರುವ ದ್ರಾಕ್ಷಿ ಗಿಡಗಳು ರೋಗಕ್ಕೆ ತುತ್ತಾಗಿ ಹಾಳಾಗಲಿವೆ. ಹಣ್ಣು ಬೆಳೆಯಲು, ಗೊಬ್ಬರ,ಔಷಧ, ಕೂಲಿಗೆ ಖರ್ಚು ಮಾಡಿರುವ ಹಣವೇ ಇಲ್ಲದಾಗಿದೆ. ಇನ್ನು ಹಣ್ಣುಗಳನ್ನು ಕಿತ್ತು ಹೊರಗೆ ಸಾಗಿಸಲು ಕೂಲಿ ನೀಡಲು ಹಣ ಇಲ್ಲದಾಗಿದೆ’ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ಎಪಿಎಂಸಿಯಲ್ಲಿ ತರಕಾರಿಗಳ ಬೆಲೆ ಪ್ರತಿ ಕೆ.ಜಿ ಲೆಕ್ಕದಲ್ಲಿ

ದಂಟಿನ ಸೊಪ್ಪು; ₹15*

ಕೊತ್ತಂಬರಿ ಸೊಪ್ಪು‍; ₹ 15*

ಹುರಳಿಕಾಯಿ (ಬಿನ್ಸ್‌); ₹ 60

ಹಸಿ ಮೆಣಸಿನ ಕಾಯಿ; ₹ 200

ಹಿರೇಕಾಯಿ; ₹40

ಈರುಳ್ಳಿ‍; ₹36

ಬೆಳ್ಳುಳ್ಳಿ; ₹130

ಕ್ಯಾರೇಟ್‌; ₹40

ಬದನೆಕಾಯಿ; ₹40

ತೊಂಡೆಕಾಯಿ ; ₹30

ಟೊಮೊಟೊ; ₹30

ಆಲೂಗಡ್ಡೆ; ₹38

*ಪ್ರತಿ ಕಟ್ಟಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.