ADVERTISEMENT

ಮದ್ಯ ಮಳಿಗೆಗೆ ಅನುಮತಿ ಬೇಡ: ‘ಜನಸ್ಪಂದನ ಕಾರ್ಯಕ್ರಮ’ದಲ್ಲಿ ಮನವಿ

ತೂಬಗೆರೆ ನಾಡಕಚೇರಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 13:31 IST
Last Updated 16 ಅಕ್ಟೋಬರ್ 2018, 13:31 IST
ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ಜಿಲ್ಲಾಧಿಕಾರಿ ಕರೀಗೌಡ ಅವರಿಗೆ ಮನವಿ ಪತ್ರಸಲ್ಲಿಸಲಾಯಿತು  
ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ಜಿಲ್ಲಾಧಿಕಾರಿ ಕರೀಗೌಡ ಅವರಿಗೆ ಮನವಿ ಪತ್ರಸಲ್ಲಿಸಲಾಯಿತು     

ತೂಬಗೆರೆ (ದೊಡ್ಡಬಳ್ಳಾಪುರ): ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತೂಬಗೆರೆ ಹೋಬಳಿ ಮಟ್ಟದ ನಡೆದ ‘ಜನಸ್ಪಂದನ ಕಾರ್ಯಕ್ರಮ’ ತೂಬಗೆರೆ ನಾಡಕಚೇರಿ ಆವರಣದಲ್ಲಿ ನಡೆಯಿತು.

ಕಂದಾಯ, ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ, ಸರ್ಕಾರಿ ರಸ್ತೆಗಳ ಒತ್ತುವರಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಯಿತು.ಇನ್ನು ಹಲವಾರು ಅರ್ಜಿಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ವಹಿಸುವ ಮೂಲಕ ಕಾಲಮಿತಿಯಲ್ಲಿ ಬಗೆಹರಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಪ್ರಮೀಳಮ್ಮ, ಅಣ್ಣಮ್ಮ ಕಳಂಜಿಯಂ, ವರಲಕ್ಷ್ಮೀ ಸ್ವಸಹಾಯ ಸಂಘ ಸೇರಿದಂತೆ ವಿವಿಧ ಸ್ವಸಹಾಯಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಹಾಡೋನಹಳ್ಳಿ ಗ್ರಾಮದಲ್ಲಿ ಎಂ.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆಯನ್ನು ಮುಖ್ಯರಸ್ತೆ ಬದಿಯಲ್ಲಿ ಪ್ರಾರಂಭಿಸಲು ಸಿದ್ಧತೆಗಳು ನಡೆದಿವೆ. ಇದು ಸಾರ್ವಜನಿಕರಿಗೆ ಹಾಗೂ ಘಾಟಿ ಕ್ಷೇತ್ರದ ಭಕ್ತಾದಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇಲ್ಲಿ ಯಾವುದೇ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

ADVERTISEMENT

ಹಾಡೋನಹಳ್ಳಿ ಗ್ರಾಮ ರಾಜ್ಯದ ಪ್ರಸಿದ್ದ ಪುಣ್ಯಕ್ಷೇತ್ರ ಘಾಟಿ ಸಮೀಪದಲ್ಲಿಯೇ ಇದೆ. ನಿತ್ಯ ಈ ರಸ್ತೆಯಲ್ಲಿ ಸಹಸ್ರಾರು ಜನ ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆದರೆ ಮುಖ್ಯ ರಸ್ತೆ ಬದಿಯಲ್ಲಿಯೇ ಎಂ.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆ ಸ್ಥಾಪಿಸಿದರೆ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ. ಈ ಮಳಿಗೆಯ ಆಸುಪಾಸಿನಲ್ಲಿಯೇ ಬಸ್ಸುಗಳಿಗೆ ಹೋಗಲು ಶಾಲಾ ಮಕ್ಕಳು ನಿಲ್ಲುತ್ತಾರೆ. ಸಮೀಪದಲ್ಲಿಯೇ ಗ್ರಾಮ ಪಂಚಾಯಿತಿ ಕಟ್ಟಡವಿದೆ. ಎಸ್.ಸಿ.ಕಾಲೊನಿಯಿದೆ ಎಂದು ಗಮನ ಸೆಳೆದರು.

ಈ ಸ್ಥಳ ಗ್ರಾಮದ ಪ್ರಮುಖ ವೃತ್ತವಾಗಿರುವುದರಿಂದ ಮಹಿಳೆಯರು ಮಕ್ಕಳು ಸಂಚರಿಸುತ್ತಿರುತ್ತಾರೆ. ಕೃಷಿ ವಿಜ್ಞಾನ ಕೇಂದ್ರಕ್ಕೆ ತರಬೇತಿಗಾಗಿ ಹಾಗೂ ಸರ್ವೇ ತರಬೇತಿ ಪಡೆಯಲು ವಿದ್ಯಾರ್ಥಿಗಳು ಬರುತ್ತಿರುತ್ತಾರೆ. ದೂರದ ಮದ್ಯದಂಗಡಿಗಳಲ್ಲಿ ಕುಡಿದು ಬಂದು ದಾಂದಲೆ ಮಾಡುವ ಕಿಡಿಗೇಡಿಗಳಿದ್ದು, ಇಲ್ಲಿಯೇ ಮದ್ಯ ಲಭಿಸಿದರೆ, ಹೆಚ್ಚಿನ ಅಪರಾಧ ಕೃತ್ಯಗಳು ನಡೆಯುವ ಸಂಭವವಿದೆ ಎಂದು ವಿವರಿಸಿದರು.

‘ಸುತ್ತ ಗುಡ್ಡಗಾಡು ಪ್ರದೇಶಗಳಿದ್ದು, ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ನಮ್ಮ ಗ್ರಾಮದಲ್ಲಿ ಯಾವುದೇ ಮದ್ಯದ ಅಂಗಡಿಯನ್ನು ತೆರೆಯಲು ಅನುಮತಿ ನೀಡಬಾರದು’ ಎಂದು ಮನವಿ ಸಲ್ಲಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಂ.ದ್ಯಾಮಪ್ಪ, ತೂಬಗೆರೆ ಹೋಬಳಿ ಉಪತಹಶೀಲ್ದಾರ್ ನಾರಾಯಣಸ್ವಾಮಿ ಇದ್ದರು. ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.