ADVERTISEMENT

ವೈಭವದ ಹೊಳೆದಬ್ಬಗೂಳೇಶ್ವರ ಅಗ್ನಿಕೊಂಡ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 16 ಮೇ 2023, 20:33 IST
Last Updated 16 ಮೇ 2023, 20:33 IST
ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯಲ್ಲಿ ಹೊಳೆದಬ್ಬಗೂಳೇಶ್ವರ ಸ್ವಾಮಿ ಜಾತ್ರೆಯ ಪ್ರಯುಕ್ತ ಅಗ್ನಿಕೊಂಡ ಮಹೋತ್ಸವದಲ್ಲಿ ಕೊಂಡ ಆಯ್ದ ಭಕ್ತರು 
ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯಲ್ಲಿ ಹೊಳೆದಬ್ಬಗೂಳೇಶ್ವರ ಸ್ವಾಮಿ ಜಾತ್ರೆಯ ಪ್ರಯುಕ್ತ ಅಗ್ನಿಕೊಂಡ ಮಹೋತ್ಸವದಲ್ಲಿ ಕೊಂಡ ಆಯ್ದ ಭಕ್ತರು    

ಆನೇಕಲ್ : ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮನಾಯಕನಹಳ್ಳಿಯಲ್ಲಿ ಹೊಳೆದಬ್ಬಗೂಳೇಶ್ವರ ಸ್ವಾಮಿ ಜಾತ್ರೆಯ ಪ್ರಯುಕ್ತ ಅಗ್ನಿಕೊಂಡ ಮಹೋತ್ಸವ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು. ಸುತ್ತಮುತ್ತ ಗ್ರಾಮಗಳ ಸಹಸ್ರಾರು ಮಂದಿ ಭಕ್ತರು ಅಗ್ನಿಕೊಂಡಕ್ಕೆ ಸಾಕ್ಷಿಯಾದರು.

ಹೊಳೆದಬ್ಬಗೂಳೇಶ್ವರ ಸ್ವಾಮಿ ಜಾತ್ರೆ ಮತ್ತು ಅಗ್ನಿಕೊಂಡೋತ್ಸವದ ಪ್ರಯುಕ್ತ ಹೊಳೆದಬ್ಬಗೂಳೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗಿನಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅರ್ಚಕ ಜಗದೀಶ್‌ ಪರಮಶಿವಯ್ಯ ಅವರು ಹೊಳೆಗೆ ಹೊರಟು ಗಂಗಾ ಪೂಜೆಯನ್ನು ನೆರವೇರಿಸಿದರು. ವೀರಗಾಸೆ, ನಂದಿಧ್ವಜ ಮತ್ತು ವಾಧ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಬಂದರು. ಮಧ್ಯಾಹ್ನ 3ರ ವೇಳೆಗೆ ಹೊಳೆದಬ್ಬಗೂಳೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿದ್ದ ಕೊಂಡದ ಬಳಿ ಬಂದರು. ದೇವಾಲಯದ ಪ್ರದಕ್ಷಿಣೆ ಮಾಡಿ ಅಗ್ನಿಕೊಂಡ ಪ್ರವೇಶ ಮಾಡಿದರು. ಮೂರು ನಾಲ್ಕು ತಾಸುಗಳಿಂದ ಕಾಯುತ್ತಿದ್ದ ಭಕ್ತರು ಅಗ್ನಿಕೊಂಡ ಪ್ರವೇಶದ ನಂತರ ತಾವು ಕೊಂಡ ಹಾಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಗುಮ್ಮಳಾಪುರ ಸಂಸ್ಥಾನ ಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಸೋಮವಾರ ಧಾರ್ಮಿಕ ಕಾರ್ಯಗಳು ನಡೆದವು. ಬೆಲ್ಲದಾರತಿ, ರುದ್ರಾಭಿಷೇಕ, ಪುಷ್ಪಾಲಂಕಾರ ಮಾಡಲಾಗಿತ್ತು. ಮಂಗಳವಾರ ಧಾರ್ಮಿಕ ಕಾರ್ಯಗಳ ನಂತರ ಭಕ್ತಿಗೀತೆಗಳ ಗಾಯನ, ಪಲ್ಲಕ್ಕಿ ಉತ್ಸವ ಹಾಗೂ ಕರಗ ಮಹೋತ್ಸವ ನಡೆಯಿತು.

ADVERTISEMENT

ಜಾತ್ರೆಯ ಅಂಗವಾಗಿ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹಲಸು, ವಿವಿಧ ಬಗೆಯ ಕಾಳುಗಳ ಸಾರು ಮತ್ತು ಮುದ್ದೆಯ ಪ್ರಸಾದ ಹೊಳೆದಬ್ಬೂಳೇಶ್ವರ ಸ್ವಾಮಿ ಜಾತ್ರೆಯ ವಿಶೇಷವಾಗಿದೆ. ಅಗ್ನಿಕೊಂಡದ ನಂತರ ಸಾಮೂಹಿಕ ಭೋಜನದಲ್ಲಿ ಭಕ್ತರು ಭಾಗಿಯಾದರು.

ದೇವಾಲಯದ ಇತಿಹಾಸ : ತಾಲ್ಲೂಕಿನ ತಮ್ಮನಾಯಕನಹಳ್ಳಿಯ ಹೊಳೇದಬ್ಬಗೂಳೇಶ್ವರ ದೇವಾಲಯವು ಸುಮಾರು 500 ವರ್ಷಗಳ ಇತಿಹಾಸವೊಂದಿದೆ. ಶತಮಾನಗಳ ಹಿಂದೆ ತಮ್ಮನಾಯಕನಹಳ್ಳಿ ಪ್ರದೇಶವು ಸಂಪೂರ್ಣ ಅರಣ್ಯ ಪ್ರದೇಶವಾಗಿತ್ತು. ಪ್ರಸ್ತುತ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿದೆ. ಗ್ರಾಮದ ಹುಚ್ಚುಬಸಪ್ಪ ಅವರ ಕನಸಿನಲ್ಲಿ ದೇವರು ಪ್ರತ್ಯಕ್ಷವಾಗಿ ಒಂದೇ ದಿನದಲ್ಲಿ ಗುಡಿಕಟ್ಟುವಂತೆ ತಿಳಿಸಿದ್ದರು. ಅದರಂತೆ ಗ್ರಾಮಸ್ಥರು ಕಾರ್ಯಪ್ರವೃತ್ತರಾಗಿ ನಾಲ್ಕು ಗೋಡೆಗಳ ಮೇಲೆ ಛಾವಣಿ ಹಾಕಿ ಚಿಕ್ಕ ದೇವಾಲಯ ನಿರ್ಮಿಸಿದ್ದರು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಪ್ರಸ್ತುತ ದೇವಾಲಯವನ್ನು ಅಭಿವೃದ್ಧಿ ಪಡಿಸಲಾಗಿದೆ.

ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯಲ್ಲಿ ಹೊಳೆದಬ್ಬಗೂಳೇಶ್ವರ ಸ್ವಾಮಿ ಜಾತ್ರೆಯ ಪ್ರಯುಕ್ತ ದೇವಾಲಯದ ಅರ್ಚಕರು ಹೊಳೆ ಪೂಜೆಗೆ ತೆರಳುತ್ತಿರುವುದು
ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯಲ್ಲಿ ಹೊಳೆದಬ್ಬಗೂಳೇಶ್ವರ ಸ್ವಾಮಿ ಜಾತ್ರೆಯ ಅಗ್ನಿಕೊಂಡ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ವೀರಗಾಸೆ ಕಲಾವಿದರು
ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯಲ್ಲಿ ಹೊಳೆದಬ್ಬಗೂಳೇಶ್ವರ ಸ್ವಾಮಿ ಜಾತ್ರೆಯ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.